ADVERTISEMENT

ಹಾಸನ: ಮಹೇಶ್‌ ಕ್ಷಮೆ ಕೇಳಲು ಒತ್ತಾಯ

ಜಿಲ್ಲಾ ಲಾರಿ ಮಾಲೀಕರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಮೇ 2022, 14:47 IST
Last Updated 7 ಮೇ 2022, 14:47 IST
 ಹಾಸನದಲ್ಲಿ ಲಾರಿ ಮಾಲೀಕರ ಸಂಘದ ಸದಸ್ಯರು ಶನಿವಾರ ಪ್ರತಿಭಟನೆ ನಡೆಸಿದರು
 ಹಾಸನದಲ್ಲಿ ಲಾರಿ ಮಾಲೀಕರ ಸಂಘದ ಸದಸ್ಯರು ಶನಿವಾರ ಪ್ರತಿಭಟನೆ ನಡೆಸಿದರು   

ಹಾಸನ: ‘ಲಾರಿ ಮಾಲೀಕರು ಮತ್ತು ಚಾಲಕರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಕಾಂಗ್ರೆಸ್ ಮುಖಂಡ ಎಚ್‌.ಕೆ.ಮಹೇಶ್‌ ಕ್ಷಮೆ ಕೇಳಬೇಕು’ ಎಂದು ಒತ್ತಾಯಿಸಿ ಜಿಲ್ಲಾ ಲಾರಿ ಮಾಲೀಕರ ಸಂಘದ ಸದಸ್ಯರು ಶನಿವಾರ ಪ್ರತಿಭಟಿಸಿದರು.

ನಗರದ ಎಪಿಎಂಸಿ ಆವರಣದಿಂದ ಮೆರವಣಿಗೆ ಹೊರಟ ಪ್ರತಿಭಟನಕಾರರು ಎನ್.ಆರ್.ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಮಾವೇಶಗೊಂಡು, ಮಹೇಶ್ ವಿರುದ್ಧ ಘೋಷಣೆ ಕೂಗಿದರು. ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

‘ಜವಾಬ್ದಾರಿಯುತ ವ್ಯಕ್ತಿಯಾಗಿರುವ ಮಹೇಶ್ ಲಾರಿ ಚಾಲಕರ ಬಗ್ಗೆ ಹೇಳಿಕೆ ನೀಡಿರುವುದು ಅವರ ಘನತೆಗೆ ತಕ್ಕುದಾಗಿಲ್ಲ. ಮಹೇಶ್ ಮಾತಿನಿಂದ ಲಾರಿ ಮಾಲೀಕರು, ಚಾಲಕ ಮತ್ತು ಅವರ ಕುಟುಂಬದವರಿಗೆ ನೋವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಲಾರಿ ಮಾಲೀಕರು, ಚಾಲಕರು ತಮ್ಮದೇ ಆದ ವ್ಯಕ್ತಿತ್ವ, ಘನತೆ, ಗೌರವ ಹೊಂದಿದ್ದಾರೆ. ಸಮಾಜದಲ್ಲಿ ಯಾವ ರೀತಿ ನಡೆದುಕೊಳ್ಳಬೇಕೆಂದು ಅರಿವು ಇದೆ. ಚಾಲಕರು ಮತ್ತು ಮಾಲೀಕರು ದುಶ್ಚಟಗಳಿಗೆ ಬಲಿಯಾಗಿದ್ದಾರೆ ಎಂಬ ಕೀಳುಮಟ್ಟದ ಹೇಳಿಕೆ ಮಹೇಶ್‌ ಅವರ ಪೂರ್ವಗ್ರಹ ಪೀಡಿತ ಅಭಿಪ್ರಾಯವಾಗಿದೆ. ಅವರು ಸಹ ಕುಟುಂಬದೊಂದಿಗೆ ಜೀವನ ನಡೆಸುತ್ತಿದ್ದಾರೆ. ಮಹೇಶ್‌ ಅವರು ಕೂಡಲೇ ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಹಾಸನ ಜಿಲ್ಲಾ ಲಾರಿ ಮಾಲೀಕರ ಸಂಘದ ಕಾರ್ಯದರ್ಶಿ ಎಚ್.ಎಸ್.ಗುರುನಾಥ್, ಖಜಾಂಚಿ ಜಿ.ಡಿ.ನಂದಕುಮಾರ್, ಕೆ.ಜಿ.ಭೀಮೇಗೌಡ, ಅಣ್ಣಪ್ಪ, ಲಿಂಗರಾಜು, ಹೇಮಂತ್ ಕುಮಾರ್, ಎಸ್.ಡಿ.ಚಂದ್ರು, ಸುಂದರ್, ರಾಮಚಂದ್ರ, ಜಯರಾಮ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.