ನುಗ್ಗೇಹಳ್ಳಿ: ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಡಿ. ವೀರೇಂದ್ರ ಹೆಗ್ಗಡೆ ಅವರ ಕುಟುಂಬದ ವಿರುದ್ಧ ಷಡ್ಯಂತ್ರ ಹಾಗೂ ಅಪಪ್ರಚಾರ ನಡೆಸುತ್ತಿರುವವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಪಂಚಲಿಂಗೇಶ್ವರ ಪಾದಯಾತ್ರೆಗಳ ಸೇವಾ ಸಮಿತಿ ಹಾಗೂ ಭಕ್ತರು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಗ್ರಾಮದ ಕಲ್ಯಾಣಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿ ಅಪಪ್ರಚಾರ ನಡಸುತ್ತಿರುವವರ ವಿರುದ್ಧ ಘೋಷಣೆ ಕೂಗಿದರು. ಮಂಜುನಾಥ ಸ್ವಾಮಿ ಹಾಗೂ ವೀರೇಂದ್ರ ಹೆಗ್ಗಡೆ ಅವರ ಭಾವಚಿತ್ರವನ್ನು ಪ್ರದರ್ಶಿಸಿದರು.
ಪುರವರ್ಗ ಹಿರೇಮಠದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘2 ವರ್ಷಗಳಿಂದ ನಿರಂತರವಾಗಿ ಕ್ಷೇತ್ರದ ವಿರುದ್ಧ ಅಪಪ್ರಚಾರ ಹಾಗೂ ಷಡ್ಯಂತ್ರ ಮಾಡಲಾಗುತ್ತಿದೆ. ಇದರಿಂದ ಭಕ್ತರು ಅಸಮಾಧಾನಗೊಂಡಿದ್ದಾರೆ. ದೇಶದ ಪವಿತ್ರ ಪುಣ್ಯ ಕ್ಷೇತ್ರವಾಗಿರುವ ಧರ್ಮಸ್ಥಳವನ್ನು ಅಪವಿತ್ರ ಮಾಡಲು ಹೊರಟಿರುವ ದುಷ್ಟರನ್ನು ಸರ್ಕಾರ ಯಾವುದೇ ಮುಲಾಜಿಗೆ ಒಳಗಾಗದೆ ಶೀಘ್ರ ಬಂಧಿಸಿ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ನಾಗರಿಕ ವೇದಿಕೆ ಅಧ್ಯಕ್ಷ ತೋಟಿ ನಾಗರಾಜ್ ಮಾತನಾಡಿ, ‘ಹೋಬಳಿ ಕೇಂದ್ರದಲ್ಲಿ ಪಂಚಲಿಂಗೇಶ್ವರ ಪಾದಯಾತ್ರೆ ಸಮಿತಿ ಹಾಗೂ ನಾಗರಿಕ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳು ಹಾಗೂ ಭಕ್ತರೊಂದಿಗೆ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನು ಮಾಡಲಾಗಿದೆ. ಇದೇ ರೀತಿ ಮುಂಬರುವ ದಿನಗಳಲ್ಲೂ ಹೀಗೆ ಮುಂದುವರೆದರೆ ಷಡ್ಯಂತ್ರ ನಡೆಸುತ್ತಿರುವ ವಿರುದ್ಧ ಮತ್ತು ರಾಜ್ಯ ಸರ್ಕಾರದ ಧೋರಣೆಯ ವಿರುದ್ಧ ಬೀದಿಗಿಳಿದು ಪ್ರತಿಭಟಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ಹೋಬಳಿ ವೀರಶೈವ ಸಮಾಜದ ಅಧ್ಯಕ್ಷ ಎನ್.ಎಸ್. ಗಿರೀಶ್ ಪಂಚಲಿಂಗೇಶ್ವರ ಪಾದಯಾತ್ರೆ ಸಮಿತಿ ಅಧ್ಯಕ್ಷ ಹೋಟೆಲ್ ರಾಜಣ್ಣ ಮಾತನಾಡಿದರು. ಪ್ರತಿಭಟನೆಯ ಬಳಿಕ ನಾಡಕಚೇರಿಗೆ ಬಂದು ಹೋಬಳಿ ಉಪ ತಹಶೀಲ್ದಾರ್ ಪೂರ್ಣಿಮಾ ಅವರಿಗೆ ಮನವಿ ಸಲ್ಲಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್. ಆರ್. ಶಿವಕುಮಾರ್, ಸದಸ್ಯರಾದ ಹೊನ್ನೇಗೌಡ, ಎನ್.ಎಸ್. ಮಂಜುನಾಥ್, ನಟರಾಜ್ ಯಾದವ್, ಮುಖಂಡರಾದ ಎನ್.ಜೆ. ಸೋಮನಾಥ್, ಕಾಂಗ್ರೆಸ್ ಮುಖಂಡರಾದ ಫೈನಾನ್ಸ್ ಪ್ರಕಾಶ್, ಬಾಣನಕೆರೆ ಅಶೋಕ್, ಎಚ್.ಜೆ. ಕಿರಣ್, ಎನ್‌ಸಿ ನಟೇಶ್, ಮುಖಂಡರಾದ ಮಹಮ್ಮದ್ ಜಾವಿದ್, ಕೃಪಾ ಶಂಕರ್, ಎನ್.ಸಿ. ಕುಮಾರಸ್ವಾಮಿ, ಎಂ.ಎಸ್. ಸುರೇಶ್, ಚಿರಂಜೀವಿ, ಪಂಚಲಿಂಗೇಶ್ವರ ಪಾದಯಾತ್ರೆ ಸಮಿತಿ ಗೌರವಾಧ್ಯಕ್ಷ ದೊಡ್ಡೇಗೌಡ, ಉಪಾಧ್ಯಕ್ಷ ಮುದ್ದನಹಳ್ಳಿ ರಾಜಣ್ಣ, ಖಜಾಂಚಿ ವಿಮಲ್ ಸೇಟ್, ಸದಸ್ಯರಾದ ರವಿಶಾಚಾರ್, ಕಂಪನಿ ಗೌಡ್ರು ಲೋಕೇಶ್, ಕೆಎಸ್‌ಆರ್‌ಟಿಸಿ ಗಣೇಶ್, ಪುರಿ ಗುಂಡ, ಡೈರಿ ಗೋಪಿ, ಉಮೇಶ್, ಎನ್.ಪಿ. ಪ್ರದೀಪ್, ಎನ್. ಆರ್. ಪ್ರದೀಪ್, ವಿರೂಪಾಕ್ಷ, ಮರಿಶೆಟ್ಟಿಹಳ್ಳಿ ಸತೀಶ್, ಬಂಡೆಕೇರಿ ಆನಂದ್, ರವಿ ಆರ್ಟ್ಸ್, ಬಾಬು, ಪೇಂಟರ್ ದೀಪಕ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.