ಸಕಲೇಶಪುರ: ‘ಧರ್ಮಸ್ಥಳ ಕ್ಷೇತ್ರದ ಮೇಲೆ ಅಪಪ್ರಚಾರ ನಡೆಸುತ್ತಿರುವ ಕೆಲವರಿಗೆ ಕಾಣದ ಕೈಗಳು ಹಾಗೂ ವಿದೇಶದಿಂದ ಹಣಕಾಸಿನ ನೆರವು ಇದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಸಮಗ್ರ ತನಿಖೆಗೆ ಸರ್ಕಾರ ಸಿಬಿಐಗೆ ವಹಿಸಬೇಕು’ ಎಂದು ಶಾಸಕ ಸಿಮೆಂಟ್ ಮಂಜು ಒತ್ತಾಯಿಸಿದರು.
ಧರ್ಮಸ್ಥಳ ಕ್ಷೇತ್ರ ಮೇಲೆ ಕೆಲವರು, ಯೂಟ್ಯೂಬ್ ಚಾನೆಲ್‌ಗಳು ನಡೆಸುತ್ತಿರುವ ಅಪಪ್ರಚಾರ ಖಂಡಿಸಿ ಪಟ್ಟಣದಲ್ಲಿ ಶನಿವಾರ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
‘ಹಿಂದಿನಿಂದಲೂ ಹಿಂದೂ ಧಾರ್ಮಿಕ ಕ್ಷೇತ್ರಗಳು ಹಾಗೂ ಹಿಂದೂಗಳ ಮೇಲೆ ನಿರಂತರ ದಾಳಿ ನಡೆಯುತ್ತಲೇ ಇದೆ. ಸುಳ್ಳನ್ನೇ ಸತ್ಯದಂತೆ ಬಿಂಬಿಸಿ ಕ್ಷೇತ್ರದ ಮೇಲೆ ವಿಶ್ವಾಸ ಕಡಿಮೆ ಆಗುವಂತೆ ವ್ಯವಸ್ಥಿತ ಸಂಚು ನಡೆಸಲಾಗುತ್ತಿದೆ’ ಎಂದು ಆರೋಪಿಸಿದರು.
‘ಸುಳ್ಳು ಸುದ್ದಿ ಹಬ್ಬಿಸಿದವರನ್ನು ರಾಜ್ಯ ಸರ್ಕಾರ ಪ್ರಾರಂಭದಲ್ಲಿಯೇ ಮಂಪರು ಪರೀಕ್ಷೆಗೆ ಒಳಪಡಿಸಿದ್ದರೆ, ಎಸ್‌ಐಟಿ ತನಿಖೆ, ಶವಗಳ ಶೋಧ ಕಾರ್ಯ, ಅಪಪ್ರಚಾರ ಎಲ್ಲಾ ಸತ್ಯಗಳು ಹೊರಬರುತ್ತಿದ್ದವು. ಆದರೆ ಸರ್ಕಾರ ವಿಷಯವನ್ನು ತುಂಬಾ ಹಗುರವಾಗಿ ತೆಗೆದುಕೊಂಡು ಇಷ್ಟೊಂದು ದೊಡ್ಡಮಟ್ಟದಲ್ಲಿ ತನಿಖೆ ಮಾಡುವ ವಿಷಯದಲ್ಲಿಯೂ ಎಡವಿದೆ. ತನಿಖೆಯಿಂದ ಆರೋಪ ಸುಳ್ಳು ಎಂದು ತಿಳಿದ ಮೇಲೆ ಮಾನಹಾನಿ ಹೇಳಿಕೆಗಳನ್ನು ನೀಡಿದ ಸಮೀರ್, ಭೀಮ, ಗಿರೀಶ್ ಮಟ್ಟಣನವರ್, ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದರು.
‘ಮಹೇಶ್ ಶೆಟ್ಟಿ ತಿಮ್ಮರೋಡಿ ಹಾಗೂ ಮುಸುಕಧಾರಿಯನ್ನು ಬಂಧಿಸಿರುವುದನ್ನು ಸ್ವಾಗತಿಸುತ್ತೇವೆ. ಅಶಾಂತಿಗೆ ಕಾರಣನಾದ ಭಯೋತ್ಪಾದಕನ ರೀತಿ ವರ್ತಿಸುತ್ತಿರುವ ಯೂಟ್ಯೂಬರ್ ಸಮೀರ್‌ನನ್ನು ಅರೆಸ್ಟ್ ಮಾಡಿ ಹೆಚ್ಚಿನ ವಿಚಾರಣೆಗೆ ಒಳಪಡಿಸಬೇಕು. ಅವನ ಖಾತೆಗೆ ಯಾರಿಂದ ಹಣ ಬರುತ್ತಿದೆ ಎಂಬುದು ಕೂಡ ತನಿಖೆಯಾಗಿ, ಜನರಿಗೆ ತಿಳಿಸಬೇಕು. ಎಸ್‌ಐಟಿ ತನಿಖೆಗೆ ಖರ್ಚು ವೆಚ್ಚವನ್ನು ಆಧಾರವಿಲ್ಲದೆ ಆರೋಪ ಮಾಡಿದವರಿಂದ ಭರಿಸಬೇಕು’ ಎಂದರು.
ಬಿಜೆಪಿ ತಾಲ್ಲೂಕು ಅಧ್ಯಕ್ಷ ಅಶ್ವಥ್ ವಳಲಹಳ್ಳಿ, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ನೇತ್ರಾವತಿ ಮಂಜುನಾಥ್, ನಗರ ಘಟಕ ಅಧ್ಯಕ್ಷ ಲೋಕೇಶ್, ತಾಲ್ಲೂಕು ಯುವ ಮೋರ್ಚಾ ಅಧ್ಯಕ್ಷ ನಿಖಿಲ್ ಹಲಸುಲಿಗೆ, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಬಬಿತ ವಿಶ್ವನಾಥ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಮಧು, ಅಗನಿ ಸೋಮಶೇಖರ್ ಇದ್ದರು.
ಧರ್ಮಸ್ಥಳ ವಿಚಾರವಾಗಿ ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸಿ ‘ಧರ್ಮದ ಉಳಿವಿಗಾಗಿ ಧರ್ಮ ಯುದ್ಧ’ ಹೋರಾಟ ಮಾಡಲಿದ್ದೇವೆಸಿಮೆಂಟ್ ಮಂಜು ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.