
ಶ್ರವಣಬೆಳಗೊಳ: ‘ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಹತ್ತಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ದಿಡಗ ಏತ ನೀರಾವರಿ ಯೋಜನೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ₹74 ಕೋಟಿ ಅನುದಾನ ಬಿಡುಗಡೆ ಮಾಡುವ ಮೂಲಕ ರೈತಾಪಿ ವರ್ಗದವರ ದೊಡ್ಡ ಕನಸು ನನಸಾಗಿದೆ’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ಹೇಳಿದರು.
ಹೋಬಳಿಯ ಬೆಕ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಚೇನಹಳ್ಳಿಯಲ್ಲಿ ಆಯೋಜಿಸಿದ್ದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
‘ದಿಡಗ ಮತ್ತು ನುಗ್ಗೇಹಳ್ಳಿ ವ್ಯಾಪ್ತಿಯ ರೈತರ ನಿಯೋಗದೊಂದಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಖುದ್ದು ಭೇಟಿ ಮಾಡಿ ಮನವಿ ಸಲ್ಲಿಸಿ ಆಗ್ರಹಿಸಿದ್ದರಿಂದಾಗಿ ನೀರಾವರಿ ಯೋಜನೆಗೆ ಸ್ಪಂದಿಸಿ, ಹಣ ಬಿಡುಗಡೆ ಮಾಡಿ ಹಾಸನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಿದ್ದಾರೆ’ ಎಂದು ಶ್ಲಾಘಿಸಿದರು.
‘ಈ ಬೃಹತ್ ನೀರಾವರಿ ಯೋಜನೆಯಿಂದಾಗಿ ಈ ಭಾಗದ ಎಲ್ಲಾ ಕೆರೆ ಕಟ್ಟೆಗಳಿಗೆ ನೀರು ತುಂಬಿಸಲು ಶಾಶ್ವತ ಅನುಕೂಲವಾಗಲಿದ್ದು, ಅಂತರ್ಜಲವೂ ಹೆಚ್ಚಾಗಿ ತೆಂಗಿನ ತೋಟಗಳಿಗೆ, ಜಾನುವಾರಿಗೆ ಕುಡಿಯುವ ನೀರಿಗೂ ಪರಿಹಾರವಾಗುತ್ತದೆ’ ಎಂದರು.
ಸಭೆಯಲ್ಲಿ ಬೆಕ್ಕ, ಸುಂಡಹಳ್ಳಿ, ಜುಟ್ಟನಹಳ್ಳಿ ದಮ್ಮನಿಂಗಲ, ಕಾಂತರಾಜಪುರ ಕಬ್ಬಾಳು, ಶ್ರವಣಬೆಳಗೊಳ ಪಂಚಾಯಿತಿಯ ಅನೇಕ ಮುಖಂಡರು ಸಮಸ್ಯಗಳ ಬಗ್ಗೆ ಗಮನಕ್ಕೆ ತಂದು ಚರ್ಚಿಸಿದರು.
ಮುಖಂಡ ಅಣತಿ ಆನಂದ್ ಮಾತನಾಡಿ, ‘ಗ್ಯಾರಂಟಿ ಯೋಜನೆ ಅನುಷ್ಠಾನದಿಂದ ಪ್ರತಿಯೊಂದೂ ಸಮುದಾಯ ವರ್ಗದವರಿಗೆ ಹೆಚ್ಚಿನ ಅನುಕೂಲವಾಗಿದೆ’ ಎಂದರು.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಸ್ತಿಹಳ್ಳಿ ದೇವರಾಜರ ಪುತ್ರ ಕಿರಣ್ ಕಾಂಗ್ರೆಸ್ ಸೇರ್ಪಡೆಗೊಂಡರು. 2026ರ ನೂತನ ಕ್ಯಾಲೆಂಡರ್ ವಿತರಿಸಲಾಯಿತು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನಂಜುಂಡೇಗೌಡ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಎಸ್.ಕೆ.ರಾಘವೇಂದ್ರ, ಗ್ರಾ.ಪಂ ಸದಸ್ಯ ಎನ್.ಆರ್. ವಾಸು, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರಾದ ಬಿ.ಆರ್.ಕೆಂಪೇಗೌಡ, ಗಣೇಶ್, ಮುಖಂಡರಾದ ಎಸ್.ಆರ್.ರಮೇಶ್, ನಾರಾಯಣಗೌಡ ಎಂ.ಡಿ, ಶೇಖರ್, ಮಧು, ರಾಮಕೃಷ್ಣ ಆರ್.ಎಂ, ನವೀನ ರಾಮಚಂದ್ರ, ಸುಧಾಕರ್, ರಘು, ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.