ADVERTISEMENT

ಮಕ್ಕಳನ್ನು ಮನೆಗೆ ಕರೆದೊಯ್ದರು: ದುರಸ್ತಿಗೆ ಒತ್ತಾಯಿಸಿ ಪೋಷಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 31 ಮೇ 2022, 4:15 IST
Last Updated 31 ಮೇ 2022, 4:15 IST
ಹೊಳೆನರಸೀಪುರ ತಾಲ್ಲೂಕಿನ ಉದ್ದೂರು ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲಗೊಂಡಿದ್ದಕ್ಕೆ ಪೋಷಕರು ಸೋಮವಾರ ಹೊಸಕಟ್ಟಡ ಕಟ್ಟುವವರೆಗೆ ಮಕ್ಕಳನ್ನು ಶಾಲೆಗೆ ಕಳುಹಿಸಲ್ಲ ಎಂದು ಮಕ್ಕಳೊಂದಿಗೆ ಪ್ರತಿಭಟನೆ ನಡೆಸಿದರು
ಹೊಳೆನರಸೀಪುರ ತಾಲ್ಲೂಕಿನ ಉದ್ದೂರು ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲಗೊಂಡಿದ್ದಕ್ಕೆ ಪೋಷಕರು ಸೋಮವಾರ ಹೊಸಕಟ್ಟಡ ಕಟ್ಟುವವರೆಗೆ ಮಕ್ಕಳನ್ನು ಶಾಲೆಗೆ ಕಳುಹಿಸಲ್ಲ ಎಂದು ಮಕ್ಕಳೊಂದಿಗೆ ಪ್ರತಿಭಟನೆ ನಡೆಸಿದರು   

ಹೊಳೆನರಸೀಪುರ: ತಾಲ್ಲೂಕಿನ ಉದ್ದೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಶಿಥಿಲಗೊಂಡು ಬೀಳುವ ಹಂತ ತಲುಪಿದೆ. ಕಟ್ಟಡದ ಸ್ಥಿತಿಯನ್ನು ಕಂಡು ಪೋಷಕರು ಹಾಗೂ ಗ್ರಾಮಸ್ಥರು ಸೋಮವಾರ ಶಾಲೆಗೆ ಬೀಗ ಹಾಕಿ ಕೆಲಕಾಲ ಪ್ರತಿಭಟನೆ ನಡೆಸಿದರು. ನಂತರ ಮಕ್ಕಳನ್ನು ವಾಪಸ್ ಮನೆಗೆ ಕರೆದುಕೊಂಡು ಹೋದರು.

‘ಮಕ್ಕಳು ಶಾಲೆ ಒಳಗೆ ಕುಳಿತಿದ್ದಾಗ ಏನಾದರೂ ಹೆಚ್ಚು ಕಡಿಮೆ ಆದರೆ ಯಾರು ಹೊಣೆ? ಅದಕ್ಕಾಗಿ ಮಕ್ಕಳಿಗೆ ವಿದ್ಯಾಭ್ಯಾಸ ಇಲ್ಲದಿದ್ದರೂ ಪರವಾಗಿಲ್ಲ. ಮಕ್ಕಳಿಗೆ ಅನಾಹುತ ಆಗಬಾರದು ಎನ್ನುವ ಉದ್ದೇಶದಿಂದ ಮನೆಗೆ ಕರೆದುಕೊಂಡು ಹೋಗುತ್ತಿದ್ದೇವೆ’ ಎಂದು ಪೋಷಕರು ಹೇಳಿದರು.

ಗ್ರಾಮದ ಮುಖಂಡ ಕಾಂತರಾಜು ಮಾತನಾಡಿ, ‘ನಮ್ಮೂರಿನ ಈ ಶಾಲೆ 70 ವರ್ಷ ಹಳೆಯದು. ಸಂಪೂರ್ಣ ಶಿಥಿಲಗೊಂಡು ಬೀಳುವ ಹಂತದಲ್ಲಿದೆ. ಈ ಶಾಲೆಯನ್ನು ದುರಸ್ತಿಗೊಳಿಸಿ ಎಂದು ಶಾಸಕ ಎಚ್.ಡಿ. ರೇವಣ್ಣ ಹಾಗೂ ಅರಕಲಗೂಡು ಕ್ಷೇತ್ರದ ಶಾಸಕ ಎ.ಟಿ. ರಾಮಸ್ವಾಮಿ ಅವರಿಗೆ, ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ನೀಡುತ್ತಲೇ ಬಂದಿದ್ದೇವೆ. ಆದರೆ, ಏನೂ ಪ್ರಯೋಜನ ಆಗಿಲ್ಲ. ಆದ್ದರಿಂದ ಕಟ್ಟಡ ಆಗುವವರೆಗೂ ಮುಂಬರುವ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ’ ಎಂದರು.

ADVERTISEMENT

ತಾ.ಪಂ. ಮಾಜಿ ಅಧ್ಯಕ್ಷೆ ಭಾಗ್ಯವತಿ ಮಾತನಾಡಿ, ‘1 ಎಕರೆಗಿಂತ ಹೆಚ್ಚು ಜಾಗ ಈ ಶಾಲೆಗೆ ಇದೆ. ಈ ಶಾಲೆಯ ಜಾಗವನ್ನು ಕೆಲವರು ಒತ್ತುವರಿ ಮಾಡಿದ್ದರು. ಊರಿನ ಜನರು ಹೋರಾಡಿ ಒತ್ತುವರಿಯನ್ನು ತೆರವುಗೊಳಿಸಿದ್ದಾರೆ. ನಾವು ಹಲವಾರು ಬಾರಿ ಹೊಸ ಕಟ್ಟಡ ಕಟ್ಟಿ ಕೊಡಿ ಎಂದು ಬೇಡಿಕೆ ಇಟ್ಟಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. 1ರಿಂದ 5ನೇ ತರಗತಿವರೆಗೆ ಇರುವ ಈ ಶಾಲೆಯಲ್ಲಿ 26 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ’ ಎಂದರು.

‘ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಿದ್ದೇವೆ. ಅವರು ಕಟ್ಟಡ ಕಟ್ಟುವ ವರೆಗೆ ಪಕ್ಕದ ಹೊಸಳ್ಳಿ ಶಾಲೆಗೆ ಕಳುಹಿಸಿ ಎನ್ನುತ್ತಿದ್ದಾರೆ. ಹೊಸಳ್ಳಿ ಇಲ್ಲಿಂದ ಸುಮಾರು 1 ಕಿ.ಮೀ. ದೂರದಲ್ಲಿದೆ. 1 ರಿಂದ 5 ನೇ ತರಗತಿಯ ಪುಟ್ಟ ಮಕ್ಕಳನ್ನು ಅಲ್ಲಿಗೆ ಕಳುಹಿಸಲಾಗಲ್ಲ. ಈ ದಾರಿಯಲ್ಲಿ ಮೇಲಿಂದ ಮೇಲೆ ಅಪಘಾತಗಳು ಸಂಭವಿಸುತ್ತಿವೆ. ಅಧಿಕಾರಿಗಳು ಪುಟ್ಟ ಮಕ್ಕಳನ್ನು ಹೊಸಳ್ಳಿಗೆ ಕಳುಹಿಸಿ ಎಂದು ನಮ್ಮನ್ನು ಸಾಗು ಹಾಕುತ್ತಾರೆ’ ಎಂದು ಗ್ರಾಮದ ನಾಗೇಶ್ ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಬಿ.ಆರ್. ಬೀನಾ, ಸದಸ್ಯ ಮೋಹನ್‍ಕುಮಾರ್, ಮುಖಂಡರಾದ ಮಲ್ಲೇಶಯ್ಯ, ಸಂಗಪ್ಪ, ಸೋಮಶೇಖರ್, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಯೋಗರಾಜ್, ಯಮುನಾ, ಗ್ರಾಮದ ಸುಜಾತಾ, ನಾಗರತ್ನಾ, ರೂಪಾ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

‘ಶಾಲಾ ಕಟ್ಟಡ ಶಿಥಿಲವಾಗಿದ್ದು ಪೋಷಕರು ಆತಂಕಗೊಂಡು ಮಕ್ಕಳನ್ನು ಶಾಲೆಗೆ ಕಳುಹಿಸದೆ ಮನೆಗೆ ಕರೆದುಕೊಂಡು ಹೋಗಿದ್ದಾರೆ’ ಎಂದು ಮುಖ್ಯ ಶಿಕ್ಷಕ ಮಲ್ಲಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.