ADVERTISEMENT

ಇಬ್ಬರು ಶಾಸಕರು ಬಿಜೆಪಿ ಸೇರ್ಪಡೆಗೆ ಚರ್ಚೆ: ಎಚ್‌.ಕೆ. ಸುರೇಶ್

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2023, 16:38 IST
Last Updated 8 ಫೆಬ್ರುವರಿ 2023, 16:38 IST
   

ಹಾಸನ: ಜಿಲ್ಲೆಯ ಇಬ್ಬರು ಹಾಲಿ ಶಾಸಕರು ಬಿಜೆಪಿ ಸೇರುವ ಬಗ್ಗೆ ಮಾತುಕತೆ ನಡೆಸಿದ್ದು, ಪಟ್ಟಿ ಬಿಡುಗಡೆಯ ನಂತರ ಗೊಂದಲಕ್ಕೆ ತೆರೆ ಬೀಳಲಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಕೆ. ಸುರೇಶ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚುನಾವಣೆಯ ದಿನಾಂಕ ಘೋಷಣೆಯಾದ ನಂತರ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ರಾಜ್ಯ ಘಟಕ ಬಿಡುಗಡೆ ಮಾಡಲಿದೆ. ಟಿಕೆಟ್ ಹಂಚಿಕೆ ಕುರಿತು ವರಿಷ್ಠರ ತೀರ್ಮಾನವೇ ಅಂತಿಮ ಎಂದರು.

ADVERTISEMENT

ಕೇಂದ್ರ ಬಜೆಟ್‌ನಲ್ಲಿ ಹಾಸನ ಜಿಲ್ಲೆಯ ರೈಲ್ವೆ ಹಾಗೂ ಹೆದ್ದಾರಿ ಕಾಮಗಾರಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಅನುದಾನ ಘೋಷಣೆಯಾಗಿದೆ. ಪ್ರಗತಿಪರ, ಸರ್ವ ವ್ಯಾಪಿ, ಎಲ್ಲ ವರ್ಗದವರಿಗೂ ನೆರವಾಗುವ ಬಜೆಟ್‌ ಅನ್ನು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಕೃಷಿ ಕ್ಷೇತ್ರಕ್ಕೆ ಹಣಕಾಸು ಕೊಡುಗೆ ಹೆಚ್ಚಾಗಿದ್ದು, ಪ್ರಧಾನ ಮಂತ್ರಿ ಆವಾಸ್ ಯೋಜನೆ ಹಾಗೂ ರಾಜ್ಯಕ್ಕೆ ಪ್ರಮುಖವಾದ ಭದ್ರಾ ಮೇಲ್ದಂಡೆ ಯೋಜನೆಗೆ ಚಾಲನೆ ಸಿಕ್ಕಿದೆ. ಕೇಂದ್ರ ಸರ್ಕಾರದಿಂದ ₹ 5,300 ಕೋಟಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂದರು.

ರೈಲ್ವೆ ಕ್ಷೇತ್ರದಲ್ಲೂ ಕರ್ನಾಟಕಕ್ಕೆ ₹ 7,561 ಕೋಟಿ ಅನುದಾನ ಬರಲಿದೆ. ಇದರಿಂದ ದ್ವಿಪಥ ಮಾರ್ಗ, ವಿದ್ಯುದೀಕರಣ, ಹೊಸ ಯೋಜನೆ ಅನುಷ್ಠಾನ ಸೇರಿದಂತೆ ಅಭಿವೃದ್ಧಿಗೆ ಪೂರಕವಾಗಲಿದೆ. ರೈಲ್ವೆಯಲ್ಲಿ ₹ 1 ಲಕ್ಷ ಕೋಟಿ ಹೂಡಿಕೆ ಹೆಚ್ಚಾಗಲಿದೆ ಎಂದರು.

ಲೋಹಿತ್, ಐನೆಟ್ ವಿಜಯಕುಮಾರ್, ಮನೋಜ್, ಪ್ರಸನ್ನಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.