ADVERTISEMENT

ಕಾನೂನು ಬಾಹಿರ ಕೆಲಸ ಮಾಡಬೇಡಿ

ಸರ್ಕಾರಿ ಅಧಿಕಾರಿಗಳಿಗೆ ಶಾಸಕ ಎಚ್.ಡಿ.ರೇವಣ್ಣ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2020, 13:22 IST
Last Updated 14 ಸೆಪ್ಟೆಂಬರ್ 2020, 13:22 IST
ಎಚ್‌.ಡಿ.ರೇವಣ್ಣ
ಎಚ್‌.ಡಿ.ರೇವಣ್ಣ   

ಹಾಸನ: ವಿವಿಧ ಇಲಾಖೆಗಳ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಕಾನೂನು ಬಾಹಿರ ಕೆಲಸಗಳನ್ನು
ಮಾಡುತ್ತಿದ್ದಾರೆ. ಇದರಿಂದ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಶಾಸಕ ಎಚ್‌.ಡಿ.ರೇವಣ್ಣ ಎಚ್ಚರಿಸಿದರು.

‘ಜಿಲ್ಲಾಧಿಕಾರಿ ಕಚೇರಿ, ಉಪವಿಭಾಗಾಧಿಕಾರಿ ಕಚೇರಿ, ತಾಲ್ಲೂಕು ಮಟ್ಟದ ಕಚೇರಿಗಳು, ನಗರಸಭೆ, ಪುರಸಭೆ
ಲೋಕೋಪಯೋಗಿ ಇಲಾಖೆ, ಪಿಎಂಜಿಎಸ್‌ವೈ, ಕಂದಾಯ ಇಲಾಖೆ, ಜಿಲ್ಲಾ ಪಂಚಾಯಿತಿಯಲ್ಲಿ ಕಾನೂನು ಬಾಹಿರ
ಕೆಲಸಗಳು ನಡೆಯುತ್ತಿರುವುದು ಗಮನಕ್ಕೆ ಬಂದಿದೆ. 21 ವರ್ಷ ಶಾಸಕನಾಗಿ ಕೆಲಸ ಮಾಡಿದ್ದೇನೆ. ಯಾವ ಇಲಾಖೆಯಲ್ಲಿ ಏನು ನಡೆಯುತ್ತಿದೆ ಎಂಬ ಮಾಹಿತಿ ಇದೆ. ಇತ್ತೀಚೆಗೆ ಉಪ ನೋಂದಣಿ ಕಚೇರಿಗೆ ಭೇಟಿ ನೀಡಿದ ವೇಳೆ ಅಲ್ಲಿ ಯಾವ ರೀತಿ ಕೆಲಸ ನಡೆಯುತ್ತಿತ್ತು ಎಂಬುದು ಎಲ್ಲರಿಗೂ ಗೊತ್ತು . ಈಗಲೇ ಎಚ್ಚೆತ್ತುಕೊಳ್ಳುವಂತೆ ಮನವಿ ಮಾಡುತ್ತಿದ್ದೇನೆ. ಇಲ್ಲವಾದರೆ ಸೂಕ್ತ ಸಮಯದಲ್ಲಿ ಬಹಿರಂಗ ಪಡಿಸುವೆ’ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಹಾಸನದ ಶ್ರೀನಗರ, ರಾಜ್‌‌ ಕುಮಾರ‍್ ನಗರ, ಗಾಣಿಗ ಸಮುದಾಯ ವಾಸಿಸುವ ಪ್ರದೇಶ, ಅಲ್ಪಸಂಖ್ಯಾತರು, ಎಸ್ಸಿ,
ಎಸ್ಟಿ ಸಮುದಾಯದವರು ಒಂದೇ ಮನೆಯಲ್ಲಿ ನಾಲ್ಕು ಕುಟುಂಬಗಳು ವಾಸವಿರುವ ಉದಾಹರಣೆಗಳಿವೆ. ವಸತಿ ಸಚಿವ
ವಿ.ಸೋಮಣ್ಣ ನಡೆಸಿದ ಸಭೆಯಲ್ಲೂ ಅರ್ಹ ಫಲಾನುಭವಿಗಳಿಗೆ ಮನೆ ನೀಡುವಂತೆ ಮನವಿ ಮಾಡಿದ್ದೆ. ಅಲ್ಪಸಂಖ್ಯಾತರು ವೋಟ್ ಹಾಕುವುದಿಲ್ಲವೆಂಬ ಕಾರಣಕ್ಕೆ ತಾರತಮ್ಯ ಮಾಡಬಾರದು’ಎಂದು ಪರೋಕ್ಷವಾಗಿ ಶಾಸಕ ಪ್ರೀತಂ ಜೆ.ಗೌಡ ಅವರನ್ನು ಕುಟುಕಿದರು.

ADVERTISEMENT

‘ವಿಶೇಷ ಭೂ ಸ್ವಾಧೀನ ಕಚೇರಿಯಲ್ಲಿ ದಂದೆ ನಡೆಯುತ್ತಿದೆ. ಕೆಲ ಪೊಲೀಸ್‌ ಅಧಿಕಾರಿಗಳು ಕಾಯಂ ಮಾಡಿಸುವುದಾಗಿ
ಗುತ್ತಿಗೆ ನೌಕರರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಈ ವಿಚಾರವನ್ನು ಪೊಲೀಸ್‌ ವರಿಷ್ಠಾಧಿಕಾರಿ ಗಮನಕ್ಕೆ ತರಲಾಗಿದೆ. ಅಲ್ಲದೇ ಕೆಲ ಇಲಾಖೆಗಳಲ್ಲಿ ಶಾಸಕರಿಗೆ 10 ರಿಂದ 12 ರಷ್ಟು ಪರ್ಸೆಂಟೇಜ್‌ ನೀಡಬೇಕು ಎನ್ನುತ್ತಿದ್ದಾರೆ. ನಾನು ಯಾವ ಅಧಿಕಾರಿ ಬಳಿಯೂ ಹಣ ತೆಗೆದುಕೊಂಡಿಲ್ಲ. ನನ್ನ ಹೆಸರಿನಲ್ಲಿ ಹಣ ಪಡೆದರೆ ಸುಮ್ಮನೆ ಇರುವುದಿಲ್ಲ’ ಎಂದು ಗುಡುಗಿದರು.

‘ಹೇಮಾವತಿ ಜಲಾಶಯ ಯೋಜನೆ ಮುಳುಗಡೆ ಸಂತ್ರಸ್ತರಿಗೆ 40 ವರ್ಷ ಕಳೆದರೂ ಈವರೆಗೂ ನ್ಯಾಯ ಒದಗಿಸಲು
ಆಗಿಲ್ಲ. ಅನೇಕರು ಇಂದಿಗೂ ಬೋಗಸ್‌ ಪ್ರಮಾಣ ಪತ್ರ ಸೃಷ್ಟಿಸಿಕೊಂಡು ಭೂಮಿ ಪಡೆಯುತ್ತಿದ್ದಾರೆ. ಇದಕ್ಕೆ ಭೂ
ಸ್ವಾಧಿನಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅವರೇ ನೇರ ಹೊಣೆಯಾಗುತ್ತಾರೆ’ ಎಂದು ಹೇಳಿದರು.

‘ನಗರದ ಹೊಸ ಬಸ್‌ ನಿಲ್ದಾಣ ಪಕ್ಕದ ಜಾಗದಲ್ಲಿ ₹ 144 ಕೋಟಿ ವೆಚ್ಚದಲ್ಲಿ ಮನರಂಜನಾ ಉದ್ಯಾನ ನಿರ್ಮಾಣಕ್ಕೆ
ಸಂಪುಟ ಸಭೆ ಒಪ್ಪಿಗೆ ನೀಡಿತ್ತು. ಆದರೆ, ಅ ಅನುದಾನವನ್ನು ಯಾರು ತಡೆ ಹಿಡಿದಿದ್ದಾರೆ ಎಂಬುದು ಗೊತ್ತು. ಸಿ.ಎಂ
ಯಡಿಯೂರಪ್ಪ ಅವರು ಜಿಲ್ಲೆಗೆ ಸಂಬಂಧಿಸಿದಂತೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಕೋವಿಡ್‌ ಹೆಸರಿನಲ್ಲಿ ಲೂಟಿ
ನಡೆಯುತ್ತಿದೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.