ADVERTISEMENT

ಬೇಡ ಜಂಗಮ ಪರಿಶಿಷ್ಟ ಜಾತಿಗೆ ಸೇರಿಸಬೇಡಿ: ಎ.ಪಿ.ಚಂದ್ರಯ್ಯ

​ಪ್ರಜಾವಾಣಿ ವಾರ್ತೆ
Published 19 ಮೇ 2025, 13:14 IST
Last Updated 19 ಮೇ 2025, 13:14 IST
<div class="paragraphs"><p>ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ತಾಲ್ಲೂಕು ಅಧ್ಯಕ್ಷ ಎ.ಪಿ.ಚಂದ್ರಯ್ಯ</p></div>

ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ತಾಲ್ಲೂಕು ಅಧ್ಯಕ್ಷ ಎ.ಪಿ.ಚಂದ್ರಯ್ಯ

   

ಅರಸೀಕೆರೆ: ‘ಸರ್ಕಾರ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಸಂಬಂಧ ಜಾತಿ ಗಣತಿ ಕಾರ್ಯ ನಡೆಯುತ್ತಿದ್ದು, ಅಸ್ಪೃಶ್ಯರಲ್ಲದ ಬೇಡ ಜಂಗಮ ಸಮುದಾಯವು ಸ್ಪೃಶ್ಯ ಸಮುದಾಯವಾಗಿರುವುದರಿಂದ ಜಾತಿ ಗಣತಿಯಲ್ಲಿ ಬೇಡ ಜಂಗಮ ಪರಿಶಿಷ್ಟ ಜಾತಿ ಎಂದು ನಮೂದಿಸಬಾರದು’ ಎಂದು ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ತಾಲ್ಲೂಕು ಅಧ್ಯಕ್ಷ ಎ.ಪಿ.ಚಂದ್ರಯ್ಯ ಹೇಳಿದರು.

ನಗರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು,‘ಕಳೆದ 30 ವರ್ಷಗಳಿಂದ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಕುರಿತು ಹಲವು ಹೋರಾಟಗಳನ್ನು ಮಾಡಲಾಗಿದೆ. ಕಳೆದ ವರ್ಷ ಆಗಸ್ಟ್‌‌‌ನಲ್ಲಿ ಸುಪ್ರೀಂಕೋರ್ಟ್‌ ಒಳಮೀಸಲಾತಿ ಸಂಬಂಧ ಆಯಾಯಾ ರಾಜ್ಯ ಸರ್ಕಾರಗಳಿಗೆ ಸೇರಿದೆ. ಆದ್ದರಿಂದ ಇದೀಗ ಜಾತಿಗಣತಿ ಕಾರ್ಯ ಸರ್ಕಾರ ಪ್ರಾರಂಭಮಾಡಿದೆ’ ಎಂದರು.

ADVERTISEMENT

‘ತಾಲ್ಲೂಕಿನಲ್ಲಿ ಅಸ್ಪೃಶ್ಯರಲ್ಲದ ಬೇಡಜಂಗಮರು ನಮ್ಮನ್ನು ಅಸ್ಪೃಶ್ಯ ಬೇಡಜಂಗಮ ಜನಾಂಗಕ್ಕೆ ಸೇರಿಸಿ ಎಂದು ಗಣತಿದಾರರಲ್ಲಿ ಒತ್ತಡ ಏರುತ್ತಿದ್ದಾರೆ. ಬೇಡಜಂಗಮರು ಪರಿಶಿಷ್ಟ ಜಾತಿಗೆ ಸೇರುವುದಿಲ್ಲ. ಇವರು ಕರ್ನಾಟಕದ ಕೇವಲ 2 ಜಿಲ್ಲೆಗಳಲ್ಲಿ ಮಾತ್ರ ಇದ್ದು ಬೇರೆ ಯಾವ ಜಿಲ್ಲೆಯಲ್ಲೂ ಇರುವುದಿಲ್ಲ. ಆದ್ದರಿಂದ ಮಾದಿಗ ಸಮೂದಾಯದವರೂ ಎಚ್ಚೆತ್ತು ಆದಿ ಕರ್ನಾಟಕ, ಆದಿ ದ್ರಾವಿಡ ಎಂದು ಬರೆಸಿದರೂ ಕೂಡ ಜಾತಿ ಕಲಂ 61ರಲ್ಲಿ ಮಾದಿಗ ಎಂದು ಕಡ್ಡಾಯವಾಗಿ ಬರೆಸಬೇಕು’ ಎಂದರು.

‘ಈ ವರ್ಗದವರು ಅಸ್ಪೃಶ್ಯರಾಗಿ ಯಾವುದೇ ಸಾಮಾಜಿಕ ತುಳಿತಕ್ಕೆ ಒಳಗಾಗಿ ಅವಮಾನ, ನೋವು, ಅಪಮಾನ ಮತ್ತು ಜಾತಿ ನಿಂದನೆಯಂತಹ ಪ್ರಕರಣಗಳನ್ನು ಅನುಭವಿಸಿರುವುದಿಲ್ಲ. ಆದ್ದರಿಂದ ಪರಿಶಿಷ್ಟ ಜಾತಿಗೆ ಸೇರಿದ ಸಮುದಾಯದವರೂ ಆಗಿರುವುದಿಲ್ಲ. ಆದ್ದರಿಂದ ತಹಶೀಲ್ದಾರ್‌ ಹಾಗೂ ಜಿಲ್ಲಾಧಿಕಾರಿಗಳು ಇಂತಹ ಸುಳ್ಳು ಮಾಹಿತಿ ನೀಡುತ್ತಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.

ಜಿಲ್ಲಾಧ್ಯಕ್ಷ ಎಂ.ಟಿ.ವೆಂಕಟೇಶ್‌ ಮಾತನಾಡಿ,‘ಬೇಡ ಜಂಗಮದ ಪರಿಶಿಷ್ಟ ಜಾತಿಯವರು 30 ಜಿಲ್ಲೆಗಳಲ್ಲಿ ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಮಾತ್ರ ಎಸ್.ಟಿ.ಸರ್ಟಿಫಿಕೆಟ್‌ ಪಡೆದಿದ್ದಾರೆ. ಜಿಲ್ಲೆಯಲ್ಲಿ ಕೆಲ ಮುಖಂಡರು ರಾಜಕಾರಣಿಗಳ ಮೇಲೆ ಒತ್ತಡ ಹಾಕಿ ಅಸ್ಪೃಶ್ಯರಲ್ಲದ ಬೇಡ ಜಂಗಮರು ನಾವೂ ಪರಿಶಿಷ್ಟ ಜಾತಿಗೆ ಸೇರಿದ್ದೇವೆ ಎಂದು ಅಧಿಕಾರಿಗಳ ಮೇಲೆ ಧಮಕಿ ಹಾಕಿ ನಮಗೂ ಜಾತಿ ಪ್ರಮಾಣ ಪತ್ರ ಕೊಡಿ ಎಂದು ಕೇಳುವ ಪ್ರಸಂಗ ನಡೆಯುತ್ತಿದೆ’ಎಂದು ಹೇಳಿದರು.

‘ಮಾದಿಗ ಹಾಗೂ ವಲಯ ಸಮುದಾಯದವರೂ ಸಮಾಜದ ಕೆಳ ವರ್ಗದ ಕೆಲಸಗಳನ್ನು ಮಾಡಿಕೊಂಡು ಬಂದಿದ್ದೇವೆ. ರಾಜಾಕಾರಣಿಗಳ ಪ್ರಭಾವದಿಂದ ಕೆಲವರು ಪರಿಶಿಷ್ಟ ಜಾತಿ ಎಂದು ನಮೂದಿಸುತ್ತಿದ್ದಾರೆ. ಇಂತಹ ಸುಳ್ಳು ಪ್ರಕರಣಗಳು ಮುಂದುವರಿದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ತಾಲ್ಲೂಕು ಗೌರವಧ್ಯಕ್ಷ ಸಂಕೋಡನಹಳ್ಳಿ ಮಂಜುನಾಥ್‌ , ನಗರಾಧ್ಯಕ್ಷ ಜಯಕುಮಾರ್‌ ಮುಖಂಡರಾದ ಹೆಚ್‌.ಟಿ.ಶಿವಮೂರ್ತಿ , ಎನ್‌.ಹೆಚ್.ಕರಿಯಪ್ಪ , ರುದ್ರಮುನಿ , ಕೋಟ್ರೆಶ್‌ , ಮಲದೇವಿಹಳ್ಳಿ ಮಂಜು ಇನ್ನಿತರರು ಪತ್ರಿಕಾ ಗೋಷ್ಟಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.