ADVERTISEMENT

ಮೇಕೆದಾಟು ಯೋಜನೆ: ಹೋರಾಟ ನಿಲ್ಲದು

ತಮಿಳುನಾಡು ಪಾಲಿನ ನೀರು ಬೇಡ: ಗೋವಿಂದ ಕಾರಜೋಳ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 14:17 IST
Last Updated 6 ಸೆಪ್ಟೆಂಬರ್ 2021, 14:17 IST

ಹಾಸನ: ಮೇಕೆದಾಟು ಯೋಜನೆ ವಿಚಾರ ಸೂಕ್ಷ್ಮವಾದುದು. ರಾಜ್ಯಕ್ಕೆ ಧಕ್ಕೆಆಗದ ರೀತಿ ಕೆಲಸ ಮಾಡಲಾಗುವುದು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮೇಕೆದಾಟು ಬೆಂಗಳೂರಿಗೆ ಕುಡಿಯುವ ನೀರಿನ ಯೋಜನೆಯಾಗಿದೆ. ಇದು ನೀರಾವರಿ ಯೋಜನೆ ಅಲ್ಲ.ತಮಿಳುನಾಡಿಗೆ ಕೊಡಬೇಕಾದನೀರು ಕೊಡುತ್ತೇವೆ. ಅವರ ಪಾಲಿನ ನೀರು ನಮಗೆ ಬೇಡ. ಆದರೂ ನೆರೆಯ ರಾಜ್ಯ ವಿನಾಕಾರಣ ಸುಪ್ರೀಂಗೆದೂರು ಸಲ್ಲಿಸಿ ಗೊಂದಲ ಸೃಷ್ಟಿಸುತ್ತಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

"ಯೋಜನೆ ಜಾರಿ ವಿಚಾರದಲ್ಲಿ ಸುಮ್ಮನೆ ಕೂರುವುದಿಲ್ಲ. ನಾವೂ ಕಾನೂನು ಹೋರಾಟ ಮಾಡುತ್ತೇವೆ. ಖಂಡಿತ
ಯೋಜನೆ ಜಾರಿಗೆ ತರುತ್ತೇವೆ. ನೆಲ-ಜಲದ ಪ್ರಶ್ನೆ ಬಂದಾಗ ಬಿಜೆಪಿಯವರು ಪಕ್ಷಾತೀತವಾಗಿ ಹೋರಾಟ
ಮಾಡುತ್ತಿದ್ದೇವೆ.ಇದಕ್ಕೆ ಎಲ್ಲರೂ ಬೆಂಬಲಿಸಿದ್ದಾರೆ. ತಮಿಳುನಾಡು ರಾಜಕೀಯ ಗಿಮಿಕ್ ಮಾಡುತ್ತಿದೆ' ಎಂದರು.

ADVERTISEMENT

ಬೆಳಗಾವಿ ಸೇರಿದಂತೆ ಮೂರು ಮಹಾನಗರ ಪಾಲಿಕೆಗಳ ಫಲಿತಾಂಶ ಕುರಿತು ಪ್ರತಿಕ್ರಿಯಿಸಿ, ಅಭಿವೃದ್ಧಿ ಕೆಲಸಕ್ಕೆ ಮನ್ನಣೆ ನೀಡಿ ಬೆಳಗಾವಿಯಲ್ಲಿ ಜನತೆ ಅಧಿಕಾರ ನೀಡಿದ್ದಾರೆ. ಜನರ ಪ್ರೀತಿ, ವಿಶ್ವಾಸ, ನಂಬಿಕೆಗೆ ದ್ರೋಹ ಬಗೆಯದೆ ಆಡಳಿತ ನಡೆಸುತ್ತೇವೆ ಎಂದು ಅಭಯ ನೀಡಿದರು.

ಯಾವತ್ತೂ ಬೆಳಗಾವಿಯಲ್ಲಿ ಬಿಜೆಪಿಗೆ ಬಹುಮತ ಇರಲಿಲ್ಲ. ಈ ಬಾರಿಯ ಗೆಲುವು ಸಂತಸ ನೀಡಿದೆ. ಹುಬ್ಬಳ್ಳಿ ಧಾರವಾಡದಲ್ಲೂ ಮತದಾರರು ಆಶೀರ್ವಾದ ಮಾಡಿದ್ದಾರೆ. ನರೇಂದ್ರ ಮೋದಿ ನಮ್ಮ ರೋಲ್ ಮಾಡೆಲ್. ಅವರ ಆಶಯದಂತೆ ಆಡಳಿತ ನಡೆಸುತ್ತೇವೆ ಎಂದು ನುಡಿದರು.

ಕಲಬುರಗಿಯಲ್ಲಿ ಲೆಕ್ಕಾಚಾರ ಸ್ವಲ್ಪ ತಪ್ಪಾಗಿದೆ ಎಂದ ಕಾರಜೋಳ, 2023 ರ ಚುನಾವಣೆಯಲ್ಲೂ ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.