ADVERTISEMENT

ಹಾಸನ: ಹೊಸ ಕಾನೂನು ವಿರೋಧಿಸಿ ಚಾಲಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2024, 14:23 IST
Last Updated 10 ಜನವರಿ 2024, 14:23 IST
ಕರ್ನಾಟಕ ಚಾಲಕರ ಒಕ್ಕೂಟದ ಜಿಲ್ಲಾ ಘಟಕದ ವತಿಯಿಂದ ಹಾಸನದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ ಚಾಲಕರ ಒಕ್ಕೂಟದ ಜಿಲ್ಲಾ ಘಟಕದ ವತಿಯಿಂದ ಹಾಸನದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು.   

ಹಾಸನ: ಕೇಂದ್ರ ಸರ್ಕಾರ ಇತ್ತೀಚೆಗೆ ವಾಣಿಜ್ಯ ಬಳಕೆಯ ವಾಹನಗಳ ಚಾಲಕರಿಗೆ ಹೊಸದಾಗಿ ತಂದಿರುವ ಕಾನೂನನ್ನು ವಿರೋಧಿಸಿ ಕರ್ನಾಟಕ ಚಾಲಕರ ಒಕ್ಕೂಟದ ಜಿಲ್ಲಾ ಘಟಕದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ರಘು ಗೌಡ ಮಾತನಾಡಿ, ಇತ್ತೀಚೆಗೆ ಸಂಸತ್‌ ಅಧಿವೇಶನದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅವರು ವಾಣಿಜ್ಯ ಬಳಕೆಯ ವಾಹನಗಳ ಚಾಲಕರಿಗೆ ಹೊಸ ಕಾನೂನು ತಂದಿದ್ದು, ಗೊಂದಲ ಉಂಟಾಗಿದೆ. ನಾವು ಚಾಲನೆ ಮಾಡುತ್ತಿರುವ ಸಮಯದಲ್ಲಿ ಆಕಸ್ಮಿಕವಾಗಿ ಅಪಘಾತ ಮಾಡಿ ಪ್ರಾಣ ಹಾನಿ ಅಥವಾ ಪೆಟ್ಟು ಬಿದ್ದರೆ ನೇರವಾಗಿ ಚಾಲಕರು ಶಿಕ್ಷೆಗೆ ಗುರಿ ಆಗಬೇಕಾಗಿದೆ. ಚಾಲಕರಿಗೆ ₹ 7ಸಾವಿರ ದಂಡದೊಂದಿಗೆ 10 ವರ್ಷ ಕಾರಾಗೃಹ ಶಿಕ್ಷೆ ವಿಧಿಸಬೇಕೆಂದು ಕಾನೂನನ್ನು ತಂದಿರುವುದು ಹಾಸ್ಯಾಸ್ಪದ ಎಂದು ದೂರಿದರು.

ಅಪಘಾತವಾದ ನಂತರ ಚಾಲಕರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಚಾಲಕರಾಗಿ ವೃತ್ತಿ ಅವಲಂಬಿಸಿ ಬದುಕು ನಡೆಸುತ್ತಿರುವ ನಮಗೆ ತಿಂಗಳಿಗೆ ₹ 20ಸಾವಿರ ವೇತನ ಕೊಡುತ್ತಾರೆ. ಇದರಲ್ಲಿಯೇ ಕುಟುಂಬದ ನಿರ್ವಹಣೆ ಮಾಡಬೇಕಿದ್ದು, ಇಂತಹ ಸಂದರ್ಭದಲ್ಲಿ ಆರ್ಥಿಕವಾಗಿ ಕುಗ್ಗಿಸುವ ಹಾಗೂ ಕಾನೂನಾತ್ಮಕವಾಗಿ ತೊಂದರೆ ನೀಡುವ ಇಂತಹ ಕಾಯ್ದೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ADVERTISEMENT

ಸರ್ಕಾರ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದು, ಈ ಸಂಬಂಧ ವಾಹನ ಚಾಲಕರು ಹಾಗೂ ಮಾಲೀಕರೊಂದಿಗೆ ಯಾವುದೇ ಚರ್ಚೆ ನಡೆಸಿಲ್ಲ. ಹಿಟ್ ಅಂಡ್ ರನ್ ಪ್ರಕರಣಗಳಿಗೆ ತರಲು ಉದ್ದೇಶಿಸಿರುವ ಕಾನೂನಿಗೆ ಸೂಕ್ತ ತಿದ್ದುಪಡಿ ಮಾಡುವಂತೆ ಆಗ್ರಹಿಸಿದ ಅವರು, ಕಾನೂನನ್ನು ಪರಿಶೀಲಿಸಿ ಮೊದಲು ಯಾವ ರೀತಿಯ ಕಾನೂನು ಜಾರಿಯಲ್ಲಿತ್ತೋ ಅದನ್ನೇ ಮುಂದುವರಿಸಬೇಕು ಎಂದು ಮನವಿ ಮಾಡಿದರು.

ಮಧು ಗೌಡ, ಮೋಹನ್, ಬಸವರಾಜ್, ರಂಗನಾಥ್, ಸಂತೋಷ್ ಕುಮಾರ್, ಕಾಂತರಾಜ್, ಧರ್ಮೇಶ್, ಚಿಕ್ಕಣ್ಣ, ಭರತ್ ಕುಮಾರ್, ನಜೀರ್ ಅಹ್ಮದ್, ವಿಜಯಕುಮಾರ್, ಶಹನವಾಜ್ ಪಾಷಾ ಸೇರಿದಂತೆ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.