ADVERTISEMENT

ಹಾಸನ | ಅಮಲು ಮುಕ್ತ ಸಮಾಜಕ್ಕಾಗಿ ಶೀಘ್ರ ಕಾರ್ಯಾಗಾರ: ಜಿಲ್ಲಾಧಿಕಾರಿ

ಸಮುದಾಯಗಳು ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಲತಾಕುಮಾರಿ ಮನವಿ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 1:53 IST
Last Updated 2 ಸೆಪ್ಟೆಂಬರ್ 2025, 1:53 IST
ಹಾಸನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರು ಅಲ್ಪಸಂಖ್ಯಾತ ಸಮುದಾಯದ ಜನರಿಂದ ಅಹವಾಲು ಸ್ವೀಕರಿಸಿದರು
ಹಾಸನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರು ಅಲ್ಪಸಂಖ್ಯಾತ ಸಮುದಾಯದ ಜನರಿಂದ ಅಹವಾಲು ಸ್ವೀಕರಿಸಿದರು   

ಹಾಸನ: ‘ಸರ್ಕಾರಿ ಸೌಲಭ್ಯಗಳನ್ನು ಅರ್ಹರಿಗೆ ಒದಗಿಸುವುದರ ಜೊತೆಗೆ ಮೂಲಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಕೆ.ಎಸ್‌. ಲತಾಕುಮಾರಿ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಸೋಮವಾರ ನಡೆದ ಅಲ್ಪಸಂಖ್ಯಾತರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, ‘ಅಮಲು ಮುಕ್ತ ಸಮಾಜ ನಿರ್ಮಾಣಕ್ಕಾಗಿ ಸಮುದಾಯದಲ್ಲಿ ವಿಶೇಷ ಕಾರ್ಯಾಗಾರ ಆಯೋಜಿಸುವುದು ಅಗತ್ಯವಾಗಿದೆ. ಶೀಘ್ರ ಕಾರ್ಯಾಗಾರ ಆಯೋಜಿಸಲಾಗುವುದು’ ಎಂದರು.

‘ನಗರ ವೀಕ್ಷಣೆಗೆ ಹೋದ ಸಂದರ್ಭದಲ್ಲಿ ಪೆನ್ಷನ್ ಮೊಹಲ್ಲಾದಂತಹ ಸ್ಥಳಗಳಲ್ಲಿ ಈ ರೀತಿಯ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿವೆ ಎಂದು ಸಾರ್ವಜನಿಕರು ಗಮನಕ್ಕೆ ತಂದಿದ್ದಾರೆ. ಇದು ಗಂಭೀರವಾದ ಸಮಸ್ಯೆ. ಮಾದಕ ವಸ್ತು ವ್ಯಸನಗಳಿಗೆ ಒಳಗಾಗಿರುವರರನ್ನು ಯಾವ ರೀತಿಯಾಗಿ ಮನಃಪರಿವರ್ತನೆ ಮಾಡಬೇಕು ಎಂಬುದಾಗಿ ಚರ್ಚಿಸಿ, ಒಂದು ಕ್ರಿಯಾ ಯೋಜನೆ ಸಿದ್ಧಪಡಿಸುತ್ತಿದ್ದೇವೆ’ ಎಂದರು.

ADVERTISEMENT

ಚನ್ನರಾಯಪಟ್ಟಣದ ದೊಡ್ಡ ಮೊಹಲ್ಲ ರಸ್ತೆಯಲ್ಲಿರುವ ಜಾಮೀಯಾ ಮಸೀದಿ ಕಮಿಟಿಗೆ ಖಬರಸ್ತಾನ್ ಜಾಗ ಮಂಜೂರು ಮಾಡಿಕೊಡಲು ಸಂಬಂಧಪಟ್ಟ ತಹಶೀಲ್ದಾರ್‌ಗೆ ಸೂಚಿಸಿದ ಜಿಲ್ಲಾಧಿಕಾರಿ,  ಹೊಳೆನರಸೀಪುರ ತಾಲ್ಲೂಕಿನ ಕಡವಿನ ಕೋಟೆ ಗ್ರಾಮದ ಖಬರಸ್ತಾನ್‍ದಲ್ಲಿ ಶವಸಂಸ್ಕಾರ ಮಾಡಲು ರಕ್ಷಣೆ ಒದಗಿಸುವ ಕುರಿತು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಅರಕಲಗೂಡು ಕೋಟೆ ಮುಸ್ಲಿಂ ಸಮುದಾಯದ ಖಬರಸ್ತಾನ್‍ಗೆ ಕಾಂಪೌಂಡ ನಿರ್ಮಾಣ, ಬೇಲೂರು ತಾಲ್ಲೂಕಿನ ಅರೇಹಳ್ಳಿ ಗ್ರಾಮದ ಜಮೀನನ್ನು ಮುಸ್ಲಿಂ ಸಮುದಾಯದವರು ಉಪಯೋಗಿಸಲು ಸೂಕ್ತ ಬಿಗಿ ಭದ್ರತೆಯೊಂದಿಗೆ ನೀಡುವಂತೆ ತಿಳಿಸಿದರು.

ಸ್ಲೇಟರ್ಸ್ ಸಮುದಾಯ ಭವನದ ಕಾಮಗಾರಿ ಪೂರ್ಣಗೊಳಿಸಬೇಕು. ಬಿದರಕ್ಕ ಗ್ರಾಮದ ಖಬರಸ್ತಾನ್‍ಗೆ ಕಾಂಪೌಂಡ್ ನಿರ್ಮಾಣ ಮಾಡಿಸಿ, ಮೇಲ್ಚಾವಣಿ ಹಾಕಿಸಬೇಕು. ಜೊತೆಗೆ ಮದರಸದಲ್ಲಿ ಮುಸ್ಲಿಂ ಮಕ್ಕಳು ಓದುವುದಕ್ಕೆ ಕೊಠಡಿ ಮಾಡಿಸಿಕೊಡಲು ವಕ್ಫ್ ಅಧಿಕಾರಿಗಳಿಗೆ ಸೂಚಿಸಿದರು.

ಐಪಿಜಿಆರ್‌ಎಸ್ ತಂತ್ರಾಂಶದಲ್ಲಿ ಸಾರ್ವಜನಿಕರು ದೂರು ಸಲ್ಲಿಸಿದ್ದು, ಆ ಸಮಸ್ಯೆ ಬಗೆಹರಿಯುವುದಕ್ಕಿಂತ ಮುಂಚೆಯೇ ಸಂಬಂಧಪಟ್ಟ ಅರ್ಜಿ ಮುಕ್ತಾಯಗೊಳಿಸಿರುವುದು ಕಂಡುಬಂದಿದೆ. ಈ ರೀತಿ ಆಗದಂತೆ ಸಮಸ್ಯೆಗಳನ್ನು ಬಗೆಹರಿಸಿ ಎಂದು ಸೂಚಿಸಿದರು.

‘ಅಲ್ಪಸಂಖ್ಯಾತರ ಉರ್ದು ಶಾಲೆಗಳ ಕುರಿತಾಗಿ ಅನೇಕ ಸಮಸ್ಯೆಗಳಿವೆ. ಹಾಗಾಗಿ ಆ ಶಾಲೆಗಳ ಸಮಸ್ಯೆಗಳಿಗಾಗಿ ಪ್ರತ್ಯೇಕವಾಗಿ ಸಭೆ ಆಯೋಜಿಸಿ. ಅಲ್ಪಸಂಖ್ಯಾತರ ಶಾಲೆಗಳಿಗೆ ಸಾಕಷ್ಟು ಅನುದಾನ ಅಗತ್ಯವಿದ್ದು, ಸರ್ಕಾರಕ್ಕೆ ಮನವಿ ಮಾಡಲಾಗುವುದು’ ಎಂದು ತಿಳಿಸಿದರು.

ಪೆನ್ಷನ್ ಮೊಹಲ್ಲಾದಲ್ಲಿ ಎಟಿಎಂ, ಬ್ಯಾಂಕ್ ಸೌಲಭ್ಯವಿಲ್ಲ. ಹಾಗಾಗಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಯಾವುದಾದರೂ ಬ್ಯಾಂಕ್‌ ಶಾಖೆ ತೆರೆಯಬೇಕು. ಜೊತೆಗೆ ಎಟಿಎಂ ಸೌಲಭ್ಯ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಆಲೂರಿನ ಸರ್ಕಾರಿ ಉರ್ದು ಶಾಲೆಗೆ ಮೂಲ ಸೌಲಭ್ಯಗಳನ್ನು ಒದಗಿಸಲು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಜೊತೆಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಸ್ಥಳಕ್ಕೆ ಭೇಟಿ ನೀಡಿ ವರದಿ ಸಲ್ಲಿಸಲು ತಿಳಿಸಿದರು.

ಸಭೆಯಲ್ಲಿ ಎಲ್ಲ ತಾಲ್ಲೂಕುಗಳ ತಹಶೀಲ್ದಾರ್‌ಗಳು, ಸಾರ್ವಜನಿಕರು, ಅಧಿಕಾರಿಗಳು ಹಾಜರಿದ್ದರು.

ಮಾಂಸದಂಗಡಿ ತೆರವು:

ವರದಿಗೆ ಸೂಚನೆ ಶ್ರವಣಬೆಳಗೊಳ ಪ್ರವೇಶಿಸುವ ಪ್ರಮುಖ ರಸ್ತೆಗಳಲ್ಲಿರುವ ಮಾಂಸ ಮಾರಾಟದ ಅಂಗಡಿಗಳನ್ನು ತೆರವು ಮಾಡುವ ಸಂಬಂಧ ಅಧಿಕಾರಿಗಳು ಭೇಟಿ ನೀಡಿ ಅನುಪಾಲನಾ ವರದಿ ನೀಡುವಂತೆ ಜಿಲ್ಲಾಧಿಕಾರಿ ಲತಾಕುಮಾರಿ ಸೂಚಿಸಿದರು. ಶ್ರವಣಬೆಳಗೊಳದಲ್ಲಿ ಕೆರೆಗಳ ಅಭಿವೃದ್ಧಿ ಜೊತೆಗೆ ಒಳಚರಂಡಿ ದುರಸ್ತಿ ಮಾಡಿಸುವುದು ವಿಂಧ್ಯಗಿರಿ ತಪ್ಪಲಿನಲ್ಲಿ ಮತ್ತು ಶ್ರೀಮಠದ ಹತ್ತಿರ ಸ್ನಾನಗೃಹ ಮತ್ತು ಶೌಚಾಲಯ ನಿರ್ಮಾಣದ ಕುರಿತು ಪ್ರವಾಸೋದ್ಯಮ ಇಲಾಖೆ ಗಮನಹರಿಸಿ ಸಮಸ್ಯೆ ಬಗೆಹರಿಸಲು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.