
ಹಾಸನ: ಸಮಾಜದಲ್ಲಿ ಆರೋಗ್ಯ ತಪಾಸಣೆ ಕುರಿತು ಇರುವ ಭಯ ಮತ್ತು ನಾಚಿಕೆಯನ್ನು ತ್ಯಜಿಸಬೇಕು. ಆಸ್ಪತ್ರೆಗೆ ಹೋಗಲು ಹಿಂಜರಿಯುವ ಮನೋಭಾವ ಸರಿಯಲ್ಲ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ನಗರದ ಎಂ.ಜಿ. ರಸ್ತೆಯ ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಬಾಲಗಂಗಾಧರನಾಥ ಸ್ವಾಮೀಜಿಯವರ 81ನೇ ಜನ್ಮದಿನ ಹಾಗೂ 13ನೇ ಸಂಸ್ಮರಣೆ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ, ಉಚಿತ ಕಿಡ್ನಿ ತಪಾಸಣೆ ಮತ್ತು ವೈದ್ಯಕೀಯ ಸಲಹಾ ಶಿಬಿರವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಜನರು ಹೆಂಡದ ಅಂಗಡಿ ಹೋಗಲು ನಾಚಿಕೆ ಪಡುವುದಿಲ್ಲ. ಅದರೆ ಅಸ್ಪತ್ರೆ ಕಡೆಗೆ ಹೋಗಲು ನಾಚಿಕೆ, ಅಂಜಿಕೆ ಪಡುತ್ತಾರೆ. ಇದೇ ಮನೋಭಾವ ಮುಂದೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಲಿದೆ ಎಂದರು.
ಆರಂಭಿಕ ಹಂತದಲ್ಲೇ ರೋಗವನ್ನು ಪತ್ತೆ ಹಚ್ಚಿದರೆ ದೊಡ್ಡ ಕಾಯಿಲೆಗಳನ್ನು ತಪ್ಪಿಸಬಹುದು. ಸರಳ ಕಾಯಿಲೆ ಎಂದು ನಿರ್ಲಕ್ಷ್ಯ ಮಾಡಿದರೆ, ಮುಂದಿನ ದಿನಗಳಲ್ಲಿ ಆರ್ಥಿಕ ಹಾಗೂ ಸಾಮಾಜಿಕ ನೋವು ಅನುಭವಿಸಬೇಕಾಗುತ್ತದೆ. ಕಾಯಿಲೆಯನ್ನು ಇಟ್ಟುಕೊಂಡು ನರಳುವ ಬದಲು ಆರಂಭದಲ್ಲೇ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಹೇಳಿದರು.
ಆರೋಗ್ಯದ ಕಡೆ ಜನರು ಉದಾಸೀನ ತೋರುವುದನ್ನು ಬಿಡಬೇಕು. ಇಂದಿನ ದಿನಗಳಲ್ಲಿ ಹೃದಯ ಸಮಸ್ಯೆ ಸೇರಿ ಹಲವು ಕಾಯಿಲೆಗಳು ಆರಂಭಿಕ ಹಂತದಲ್ಲೇ ಪತ್ತೆಯಾಗುವ ಸಾಧ್ಯತೆ ಇದೆ. ಇದಕ್ಕಾಗಿ ಭಯಪಡುವ ಅಗತ್ಯವಿಲ್ಲ. ತಿನ್ನುವ ಆಹಾರ, ಜೀವನಶೈಲಿ ಮತ್ತು ವೈದ್ಯರ ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಆರೋಗ್ಯ ಭಾಗ್ಯ ದೊರೆಯುತ್ತದೆ. ಆರೋಗ್ಯ ಸಮಸ್ಯೆ ಇದ್ದರೆ ಮುಕ್ತವಾಗಿ ಹೇಳಿ, ವೈದ್ಯರಿಂದ ಸಲಹೆ ಪಡೆಯಬೇಕು ಎಂದರು.
ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಗಂಗಾಧರ್, ನಿರ್ದೇಶಕ ರಘುಗೌಡ, ಒಕ್ಕಲಿಗರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮುದ್ದೇಗೌಡ, ಎಚ್.ಪಿ. ಮೋಹನ್, ಗಂಗಣ್ಣ, ಬಾಗೂರು ಮಂಜೇಗೌಡ, ಲಕ್ಷ್ಮಿಕಾಂತ್ ಉಪಸ್ಥಿತರಿದ್ದರು.
ಮಠದಿಂದ ಬಡವರು ರೈತರಿಗೆ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗುತ್ತಿದೆ. ಈ ಬಾರಿ ಹಾಸನ ಮಂಗಳೂರು ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಖ್ಯಾತ ವೈದ್ಯರು ಬಂದು ಸೇವೆ ನೀಡುತ್ತಿರುವುದು ಶಿಬಿರದ ವಿಶೇಷ.ಸ್ವರೂಪ್ ಪ್ರಕಾಶ್ ಶಾಸಕ
ಆದಿಚುಂಚನಗಿರಿಗೆ ವಜ್ರದ ಲೇಪನ
ಬಾಲಗಂಗಾಧರನಾಥ ಸ್ವಾಮೀಜಿಯವರ ಜನ್ಮದಿನದಂತಹ ಪವಿತ್ರ ದಿನದಲ್ಲಿ ಆರೋಗ್ಯ ಮೇಳ ಆಯೋಜಿಸಿರುವುದು ಅತ್ಯಂತ ಅರ್ಥಪೂರ್ಣವಾಗಿದೆ. ಬಾಲಗಂಗಾಧರನಾಥ ಸ್ವಾಮೀಜಿ ಆದಿಚುಂಚನಗಿರಿಯನ್ನು ಚಿನ್ನದ ಗಿರಿಯನ್ನಾಗಿ ರೂಪಿಸಿದ್ದು ನಂತರ ನಿರ್ಮಲಾನಂದನಾಥ ಸ್ವಾಮೀಜಿ ಮಠಕ್ಕೆ ವಜ್ರದ ಲೇಪನ ನೀಡಿದ್ದಾರೆ ಎಂದು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು. ಇಂದು ಮಠದ ಶಿಕ್ಷಣ ಸಂಸ್ಥೆಗಳಲ್ಲಿ 1.65 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಗ್ರಾಮೀಣ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಬಿಜಿ ನಗರದಲ್ಲಿ ಆಸ್ಪತ್ರೆ ಸ್ಥಾಪಿಸಲಾಗಿದ್ದು ಕೋವಿಡ್–19 ಸಂದರ್ಭದಲ್ಲಿ 1ಸಾವಿರ ಹಾಸಿಗೆ ವ್ಯವಸ್ಥೆ ಕಲ್ಪಿಸಿ ಸಹಸ್ರಾರು ಮಂದಿಗೆ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದರು. ಒಕ್ಕಲಿಗರ ಸಂಘವು ಮಠದ ಆಶೀರ್ವಾದದಿಂದ ಅನೇಕ ವೈದ್ಯಕೀಯ ಮಹಾವಿದ್ಯಾಲಯಗಳನ್ನು ನಡೆಸುತ್ತಿದೆ. ಕೆಂಪೇಗೌಡ ವೈದ್ಯಕೀಯ ಕಾಲೇಜಿನಲ್ಲಿ ಹೆಚ್ಚುವರಿ ಸೀಟುಗಳು ಪಿಜಿ ಸೀಟುಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಹಂತದಲ್ಲಿ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ₹ 1 ಕೋಟಿಗೂ ಹೆಚ್ಚು ವೆಚ್ಚ ಮಾಡಲಾಗುತ್ತಿದೆ ಎಂದರು. ನಾಲ್ಕು ವರ್ಷಗಳಿಂದ 13 ಜಿಲ್ಲೆಗಳಲ್ಲಿ ಪ್ರತಿವರ್ಷ ಸಂಘದ ಅಭಿವೃದ್ಧಿಗೆ ಅನುದಾನ ನೀಡಲಾಗುತ್ತಿದೆ. ಹಾಸನದಲ್ಲಿ 10 ಎಕರೆ ಭೂಮಿ ಖರೀದಿಸಿ ಹೊಸ ಶಿಕ್ಷಣ ಸಂಸ್ಥೆ ಆರಂಭಿಸುವ ಉದ್ದೇಶವಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.