ADVERTISEMENT

Elephant Arjuna | ಅರ್ಜುನನ ಸಾವು: ಉತ್ತರ ಸಿಗದ ಪ್ರಶ್ನೆಗಳು

ಚಿದಂಬರಪ್ರಸಾದ್
Published 7 ಡಿಸೆಂಬರ್ 2023, 4:32 IST
Last Updated 7 ಡಿಸೆಂಬರ್ 2023, 4:32 IST
ಅಂತ್ಯಸಂಸ್ಕಾರಕ್ಕೂ ಮುನ್ನ ಅರ್ಜುನನ ಕಳೇಬರ.
ಅಂತ್ಯಸಂಸ್ಕಾರಕ್ಕೂ ಮುನ್ನ ಅರ್ಜುನನ ಕಳೇಬರ.   

ಹಾಸನ: ಅಂಬಾರಿ ಆನೆ ಅರ್ಜುನನ ಸಾವಿನ ನಂತರ, ಕಾಡಾನೆ ಸೆರೆ ಕಾರ್ಯಾಚರಣೆಯ ಕುರಿತು ಹಲವು ಪ್ರಶ್ನೆಗಳು ಉದ್ಭವಿಸಿವೆ.

‘ಆನೆಗಳ ಕಾದಾಟ ನಿಲ್ಲಿಸಲು ಅರಣ್ಯ ಇಲಾಖೆಯ ಸಿಬ್ಬಂದಿ ಹಾರಿಸಿದ ಗುಂಡು ಅರ್ಜುನನ ಕಾಲಿಗೆ ತಗುಲಿತ್ತು. ಜೊತೆಗೆ ಆತನ ಕಾಲಿಗೆ ಮರದ ಕೂಳೆಯೂ ನೆಟ್ಟು ಉಗುರು ಕಿತ್ತು ಬಂದಿತ್ತು. ಮಾವುತ ಇಲ್ಲದೇ ನೋವಿನಲ್ಲಿಯೇ ಹೋರಾಡುತ್ತಿದ್ದ ಅರ್ಜುನ ಕೆಳಕ್ಕೆ ಬಿದ್ದಾಗಲೇ ಕಾಡಾನೆಯು ತನ್ನ ಚೂಪಾದ ಕೋರೆಯಿಂದ ಅರ್ಜುನನಿಗೆ ತಿವಿಯಲು ಆರಂಭಿಸಿತ್ತು’ ಎಂದು ಮಾವುತ ವಿನುವಿನ ಮಾತು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಕಾಡಾನೆ ಸೆರೆ ಹಿಡಿಯುವವರಿಗೆ ಅನುಭವ ಇರಲಿಲ್ಲವೇ? ಎದುರಿಗೆ ಕಾಡಾನೆ ಬಂದರೂ ಅರಿವಳಿಕೆ ಚುಚ್ಚುಮದ್ದು ನೀಡುವಲ್ಲಿ ಅಧಿಕಾರಿಗಳು ವಿಫಲರಾದರೆ? ಅರ್ಜುನನಿಗೆ ನಿಜವಾಗಲೂ ಗುಂಡೇಟು ಬಿದ್ದಿತ್ತೇ? ಬಾಹ್ಯ ಮರಣೋತ್ತರ ಪರೀಕ್ಷೆಯನ್ನಷ್ಟೇ ನಡೆಸಿ, ತರಾತುರಿಯಲ್ಲಿ ಏಕೆ ಅಂತ್ಯಕ್ರಿಯೆ ನಡೆಸಿದರು ಎಂಬ ಪ್ರಶ್ನೆಗಳಿಗೆ ಅಧಿಕಾರಿಗಳು ಉತ್ತರಿಸಬೇಕು ಎಂಬುದು ಹೋರಾಟಗಾರರ ಆಗ್ರಹ.

ADVERTISEMENT

ನಡೆದ್ದಾದರೂ ಏನು?

ಸೋಮವಾರ ಮಧ್ಯಾಹ್ನ ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಆರಂಭಿಸಿದಾಗ 16 ಆನೆಗಳಿದ್ದವು. ಅದರಲ್ಲಿದ್ದ ಹೆಣ್ಣಾನೆಗೆ ಭಾರಿ ಸಿಟ್ಟಿತ್ತು. ಗಂಡು ಕಾಡಾನೆಗೆ ಮದ ಏರಿತ್ತು. ಆದರೂ ಸಾಕಾನೆಗಳೊಂದಿಗೆ ಕಾರ್ಯಾಚರಣೆ ಮುಂದುವರಿಸಲಾಯಿತು.

‘ಪ್ರಶಾಂತ್‌ ಹಾಗೂ ಅರ್ಜುನನ ಜೊತೆಗೆ ಕಾಡಾನೆ ಹಿಮ್ಮೆಟ್ಟಿಸುವ ಕಾರ್ಯಾಚರಣೆ ನಡೆಸಲಾಯಿತು. ಕಾಡಾನೆಗೆ ನೀಡಲು ಶೂಟ್‌ ಮಾಡಿದ ಅರಿವಳಿಕೆ ಚುಚ್ಚುಮದ್ದು ತಗುಲಿ ಪ್ರಶಾಂತ್ ನಿತ್ರಾಣವಾಗಿ ಬಿದ್ದಿತ್ತು. ಅರ್ಜುನ ಒಂಟಿಯಾಗಿ ಕಾದಾಟ ಆರಂಭಿಸಿದ. ಮದವೇರಿದ ಕಾಡಾನೆಗೆ ಅರಿವಳಿಕೆ ಚುಚ್ಚುಮದ್ದು ಹೊಡೆಯಲಾಯಿತು. ಆಗ ಕೆಲಕಾಲ ಕಾರ್ಯಾಚರಣೆ ಸ್ಥಗಿತವಾಗಿತ್ತು’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

‘ಇತ್ತ ಮಾವುತರು, ವೈದ್ಯರು ಸೇರಿ ಪ್ರಶಾಂತ್‌ ಆನೆಗೆ ಮತ್ತೊಂದು ಚುಚ್ಚುಮದ್ದು ನೀಡಿ, ನೀರು ಹಾಕಿ ಎಬ್ಬಿಸಿದರು. ಅದೇ ಸಂದರ್ಭದಲ್ಲಿ ಸಿಟ್ಟಿನಿಂದ ಮರಳಿದ ಕಾಡಾನೆ ದಾಳಿ ನಡೆಸಿತು. ಅರ್ಜುನ ಅದರೊಂದಿಗೆ ಒಂಟಿಯಾಗಿ ಕಾದಾಟ ಆರಂಭಿಸಿದ್ದ. ಆಗ ಅರ್ಜುನನ ಮೇಲೆ ಬೇರೊಬ್ಬ ಮಾವುತ ಇದ್ದ. ಕಾಡಾನೆಯನ್ನು ಸುಮಾರು 300 ಮೀಟರ್‌ ಹಿಂದಕ್ಕೆ ಕಳುಹಿಸಿದ್ದ. ಆದರೆ, ಮದವೇರಿದ ಆನೆಯ ಪ್ರತಿರೋಧ ತೀವ್ರವಾಯಿತು. ಅರ್ಜುನನ ಮೇಲಿದ್ದ ಮಾವುತ ಕೆಳಕ್ಕೆ ಇಳಿದು ಬಂದ. ಗುಂಡೇಟು, ಕೂಳೆಯಿಂದ ಆದ ಗಾಯಗಳ ಮಾವುತನಿಲ್ಲದೇ ಹೋರಾಡಿದ ಅರ್ಜುನ ನಿತ್ರಾಣಗೊಂಡು ಬಿದ್ದ’ ಎಂದು ತಿಳಿಸಿದರು.

ಆಗಸ್ಟ್‌ 31 ರಂದು ನಡೆದ ಕಾರ್ಯಾಚರಣೆಯ ವೇಳೆ ಶಾರ್ಪ್‌ಶೂಟರ್‌ ವೆಂಕಟೇಶ್‌ ಸಾವು, ಈ ಬಾರಿ ಸಾಕಾನೆ ಅರ್ಜುನ ಸಾವು– ‘ಹೀಗೆ ಲೋಪಗಳು ನಡೆಯುತ್ತಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ’ ಎಂಬ ದೂರು ವ್ಯಾಪಕವಾಗಿದೆ.

20 ಪ್ರತಿಭಟನಕಾರರ ವಿರುದ್ಧ ಪ್ರಕರಣ

ಆನೆ ಅರ್ಜುನನ ಅಂತ್ಯಸಂಸ್ಕಾರದ ವೇಳೆ ಪ್ರತಿಭಟನೆ ನಡೆಸಿದ 20 ಪ್ರತಿಭಟನಕಾರರ ವಿರುದ್ಧ ಯಸಳೂರು ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.

‘ಕಾಡಾನೆ ಸೆರೆ ಹಿಡಿಯುವ ವೇಳೆ ಮೃತಪಟ್ಟ ಅರ್ಜುನನ ಅಂತ್ಯಸಂಸ್ಕಾರವನ್ನು ಯಸಳೂರು ಹೋಬಳಿ ದಬ್ಬಳ್ಳಿಕಟ್ಟೆ ನೆಡತೋಪಿನಲ್ಲಿ ಮಂಗಳವಾರ ನಡೆಸಿದ ವೇಳೆ ಪ್ರತಿಭಟಿಸಿದವರ ವಿರುದ್ಧ ಪ್ರಕರಣ ದಾಖಲಾಗಿದೆ. ಸೂಕ್ಷ್ಮ ವಿಷಯವಾಗಿರುವುದರಿಂದ ಹೆಸರು ಬಹಿರಂಗಪಡಿಸಲು ಸಾಧ್ಯವಿಲ್ಲ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.z

ಸಮಾಧಿಗೆ ಪೂಜೆ

ಅರ್ಜುನನ ಸಮಾಧಿ ಸಮೀಪ ಬುಧವಾರ ನೂರಾರು ಜನ ಪೂಜೆ ಸಲ್ಲಿಸಿದರು. ಆರ್‌ಎಫ್‌ಒ ಮಾಚಮ್ಮ, ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ್, ವಿಜಯಕುಮಾರ್, ಬಿಟ್ ಫಾರೆಸ್ಟರ್‌ ಪ್ರದೀಪ್ ಕುಮಾರ್ ಸ್ಥಳದಲ್ಲಿದ್ದರು

10 ದಿನ ಕಾರ್ಯಾಚರಣೆ ಸ್ಥಗಿತ

ಅರ್ಜುನನ ಸಾವಿನ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆರಂಭಿಸಿದ್ದ ಕಾಡಾನೆ ಸೆರೆ ರೇಡಿಯೊ ಕಾಲರ್‌ ಅಳವಡಿಕೆ ಕಾರ್ಯಾಚರಣೆಯನ್ನು 10 ದಿನಗಳ ಕಾಲ ಸ್ಥಗಿತಗೊಳಿಸಲಾಗಿದೆ. ಬೇಲೂರು ತಾಲ್ಲೂಕಿನ ಬಿಕ್ಕೋಡಿನಲ್ಲಿ ತಂಗಿದ್ದ 5 ಸಾಕಾನೆಗಳೊಂದಿಗೆ ಮಾವುತರು ಸಾಕಾನೆ ಶಿಬಿರಕ್ಕೆ ವಾಪಸಾದರು. ಅರ್ಜುನ ಇಲ್ಲದೇ ಹೊರಡುತ್ತಿರುವ ದುಃಖ ಮಾವುತರಲ್ಲಿ ಎದ್ದು ಕಾಣುತ್ತಿತ್ತು. ‘ಅರ್ಜುನ ಇಲ್ಲದೇ ವಾಪಸಾಗಬೇಕಾಗಿದೆ. ಕೊಂದ ಕಾಡಾನೆಯನ್ನು ಹಿಡಿದೇ ತೀರುತ್ತೇವೆ’ ಎಂದು ಮಾವುತ ಗುಂಡಣ್ಣ ಶಪಥ ಮಾಡಿದರು. ‘ಅರ್ಜುನನ್ನು ಕಳೆದುಕೊಂಡು ನಮಗೂ ನೋವಾಗಿದೆ. ಅರ್ಜುನನನ್ನು ಬಲಿ ಪಡೆದ ಕಾಡಾನೆಯನ್ನು ಹಿಡಿಯಲೇಬೇಕಾಗಿದೆ. ಮತ್ತೆ ಇದೇ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತೇವೆ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾವುತರಿಗೆ ಸಾಂತ್ವನ ಹೇಳಿದರು. ಇದಕ್ಕೆ ಮಾವುತರೂ ‘ಹೌದು ಆನೆಯನ್ನು ಹಿಡಿಯಲೇಬೇಕು’ ಎಂದು ದನಿಗೂಡಿಸಿದರು.

ವಿಕ್ರಾಂತ್‌ನನ್ನು ಹಿಡಿಯಲು ಬಂದಿದ್ದರು

‘ಪಶ್ಚಿಮ ಘಟ್ಟದ ಕಾಡಿನಲ್ಲಿರುವ ಬಲಿಷ್ಠ ಆನೆ ವಿಕ್ರಾಂತ್‌ನನ್ನು ಹಿಡಿದು ಆನೆ ಶಿಬಿರಕ್ಕೆ ಕರೆತರುವ ಆಸೆ ಅರಣ್ಯಾಧಿಕಾರಿಗಳಿಗಿದೆ. ವಿಕ್ರಾಂತ್‌ ಆನೆ ಸಕಲೇಶಪುರ ತಾಲ್ಲೂಕಿನ ದಬ್ಬಳಿಕಟ್ಟೆ ಅರಣ್ಯದಲ್ಲಿ ಇದೆ ಎಂದು ತಿಳಿದು ಇಲ್ಲಿ ಕಾರ್ಯಾಚರಣೆ ಆರಂಭಿಸಲಾಯಿತು. ಆದರೆ ಇಲ್ಲಿರುವುದು ಆನೆ ಅಲ್ಲ’ ಎಂದು ಪರಿಸರವಾದಿ ವಿಕ್ರಂಗೌಡ ತಿಳಿಸಿದ್ದಾರೆ. ‘ಬೇಲೂರು–ಮೂಡಿಗೆರೆ ಗಡಿಯ ಕಾನನಹಳ್ಳಿ ಅರಣ್ಯದಲ್ಲಿ ಕರಡಿ ಎನ್ನುವ ಆನೆ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಆದರೆ ಈ ದೊಡ್ಡ ಆನೆಯೇ ವಿಕ್ರಾಂತ್‌ ಎಂದು ತಿಳಿದು ಕಾರ್ಯಾಚರಣೆಯನ್ನು ದಬ್ಬಳಿಕಟ್ಟೆಗೆ ಸ್ಥಳಾಂತರಿಸಲಾಯಿತು’ ಎಂದು ವಿವರಿಸಿದರು.

ಕಾಡಿನಲ್ಲಿ ಮದವೇರಿದ ಆನೆ ಇದ್ದರೆ ಅಲ್ಲಿಗೆ ಸಾಕಾನೆಗಳನ್ನು ನುಗ್ಗಿಸುವಂತಿಲ್ಲ. ಅರಣ್ಯ ಅಧಿಕಾರಿಗಳು ಕಾಡಾನೆಗಳ ಟ್ರ್ಯಾಕಿಂಗ್ ಸರಿಯಾಗಿ ಮಾಡಿಲ್ಲ.
ಹುರುಡಿ ವಿಕ್ರಂಗೌಡ, ಪರಿಸರವಾದಿ
ಮಾರ್ಗಸೂಚಿಯಂತೆ ವೈದ್ಯರು ಮರಣೋತ್ತರ ಪರೀಕ್ಷೆ ಮಾಡಿದ್ದಾರೆ. ಗುಂಡು ತಗುಲಿದ್ದರೆ ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗುತ್ತದೆ. ನಾಲ್ಕು ಕಾಲು ಹೊರಗಡೆ ಕಾಣುತ್ತಿತ್ತು.
ರವಿಶಂಕರ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ
ಅರ್ಜುನನ್ನು ತಿವಿದು ಕೊಂದ ಕಾಡಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.