ADVERTISEMENT

ಹಾಡಹಗಲೇ ಗ್ರಾಮದೊಳಗೆ ನುಗ್ಗಿದ ಕಾಡಾನೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 12:53 IST
Last Updated 9 ಸೆಪ್ಟೆಂಬರ್ 2020, 12:53 IST
ಸಕಲೇಶಪುರ ತಾಲ್ಲೂಕಿನ ಮಠಸಾಗರ ಗ್ರಾಮದೊಳಗೆ ಬುಧವಾರ ಬೆಳಿಗ್ಗೆ ಕಾಡಾನೆಯೊಂದು ಏಕಾಏಕಿ ನುಗ್ಗಿ ಗ್ರಾಮಸ್ಥರಲ್ಲಿ ಭಯ ಮೂಡಿಸಿತು
ಸಕಲೇಶಪುರ ತಾಲ್ಲೂಕಿನ ಮಠಸಾಗರ ಗ್ರಾಮದೊಳಗೆ ಬುಧವಾರ ಬೆಳಿಗ್ಗೆ ಕಾಡಾನೆಯೊಂದು ಏಕಾಏಕಿ ನುಗ್ಗಿ ಗ್ರಾಮಸ್ಥರಲ್ಲಿ ಭಯ ಮೂಡಿಸಿತು   

ಸಕಲೇಶಪುರ: ತಾಲ್ಲೂಕಿನ ಮಠಸಾಗರ ಗ್ರಾಮಕ್ಕೆ ಬುಧವಾರ ಬೆಳಿಗ್ಗೆ ನುಗ್ಗಿದ ಕಾಡಾನೆ ಗ್ರಾಮಸ್ಥರಲ್ಲಿ ಭಯ ಉಂಟುಮಾಡಿತು.

ಬೆಳಿಗ್ಗೆ 7.30ರ ಸುಮಾರಿಗೆ ಗ್ರಾಮದ ಮನೆಗಳ ಅಂಗಳಕ್ಕೆ ಬಂದ ಕಾಡಾನೆ ಕಂಡು ಗ್ರಾಮಸ್ಥರು ಕೂಗಿಕೊಂಡರು. ಜಾಗೃತಗೊಂಡ ಸ್ಥಳೀಯರು ಬಳಿಕ ಮನೆಯಿಂದ ಹೊರ ಬರಲಿಲ್ಲ. ಸುಮಾರು 15 ನಿಮಿಷಗಳ ಕಾಲ ಗ್ರಾಮದಲ್ಲಿ ಗಾಬರಿಯಿಂದ ಓಡಾಡುತ್ತಿದ್ದ ಆನೆ ನಂತರ ಪಕ್ಕದ ಕಾಫಿ ತೋಟದತ್ತ ತೆರಳಿತು. ಯಾವುದೇ ಪ್ರಾಣಹಾನಿ ಉಂಟಾಗಲಿಲ್ಲ.

10 ದಿನಗಳ ಹಿಂದೆ ಇದೇ ಗ್ರಾಮದಿಂದ ಕೂಗಳತೆ ದೂರದಲ್ಲಿ ಕಾಡಾನೆಯೊಂದು ಅರ್ಚಕ ಆಶಿಕ್‌ಭಟ್‌ ಅವರನ್ನು ಕೊಂದು ಹಾಕಿತ್ತು. ಅದೇ ಆನೆ ಮತ್ತೆ ಬಂದಿದೆ ಎಂದು ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

ADVERTISEMENT

ಪಶ್ಚಿಮಘಟ್ಟದ ಅಂಚಿನ ಗ್ರಾಮಗಳಲ್ಲಿ ಕಾಣಿಸುತ್ತಿದ್ದ ಕಾಡಾನೆಗಳು ಇದೀಗ ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಲ್ಲೇ ವಾಸ್ತವ್ಯ ಹೂಡಿ ಮನುಷ್ಯರ ಜೀವ, ಬೆಳೆ ಹಾನಿ ಮಾಡುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಹಾಸನ ಜಿಲ್ಲಾ ಪ್ಲಾಂಟರ್ಸ್‌ ಸಂಘದ ಉಪಾಧ್ಯಕ್ಷ ಕ್ಯಾನಹಳ್ಳಿ ಸುಬ್ರಹ್ಮಣ್ಯ ಆರೋಪಿಸಿದರು.

ಕಾಡಾನೆಗಳ ನಿರಂತರ ದಾಳಿಯಿಂದ ತಾಲ್ಲೂಕಿನ ರೈತರು ನಿರ್ಭಯವಾಗಿ ತೋಟ ಹಾಗೂ ಗದ್ದೆಗಳಿಗೆ ಹೋಗಿ ವ್ಯವಸಾಯ ಮಾಡಲು ಸಾಧ್ಯವಾಗುತ್ತಿಲ್ಲ. ಸದಾ ಜೀವ ಭಯದಲ್ಲಿ ಕಾಲ ಕಳೆಯಬೇಕಾಗಿದೆ. ವನ್ಯಜೀವಿಗಳ ಸಂಘರ್ಷದ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ರೀತಿ ನಿರ್ಲಕ್ಷ್ಯ ಧೋರಣೆ ತಳೆದಿರುವುದು ಖಂಡನೀಯ ಎಂದರು.

ಇತ್ತೀಚೆಗೆ ಪಟ್ಟಣಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ, ಒಂದು ವಾರದ ಒಳಗೆ ಜಿಲ್ಲಾ ಉಸ್ತುವಾರಿ ಸಚಿವರು, ಅರಣ್ಯ ಸಚಿವರು ಹಾಗೂ ಸಂಬಂಧಪಟ್ಟ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳುವ ಭರಸವೆ ನೀಡಿದ್ದರು. ಆದರೆ ಅದು ಈಡೇರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.