
ಸಕಲೇಶಪುರ: ‘ಜಾಗತಿಕ ಮಟ್ಟದಲ್ಲಿ ಕಾಫಿ ಗುಣಮಟ್ಟದ ಬಗ್ಗೆ ಹೊಸ ಚಿಂತನೆಗಳು ಮತ್ತು ಪ್ರವೃತ್ತಿಗಳು ರೂಪುಗೊಳ್ಳುತ್ತಿವೆ’ ಎಂದು ಏಷ್ಯಾದ ಮೊದಲ ಕಾಫಿ ಲ್ಯಾಬ್ ನಿರ್ಮಾತೃ ಸುನಾಲಿನಿ ಮೆನನ್ ಹೇಳಿದರು.
ಇಲ್ಲಿನ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ 7 ಬೀನ್ ಟೀಮ್ ತಂಡ ಹಮ್ಮಿಕೊಂಡಿದ್ದ 2ನೇ ‘ಕಾಫಿ ಸಂಸ್ಕೃತಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ತಜ್ಞರ ಪ್ರಕಾರ ಕಾಫಿ ವಿಶ್ವದಲ್ಲೇ ಅತ್ಯಧಿಕ ವ್ಯಾಪಾರವಾಗುವ ಮತ್ತು ಸೇವಿಸಲಾಗುವ ಕೃಷಿ ಉತ್ಪನ್ನಗಳಲ್ಲಿ ಒಂದಾಗಿದೆ. ಜಗತ್ತಿನಾದ್ಯಂತ ಸುಮಾರು 125 ಮಿಲಿಯನ್‌ಗೂ ಹೆಚ್ಚು ರೈತರ ಜೀವನಾಧಾರವಾಗಿರುವ ಕಾಫಿ, 60ಕ್ಕೂ ಹೆಚ್ಚು ದೇಶಗಳಲ್ಲಿ ಸಣ್ಣ ರೈತರು ಬೆಳೆಯುತ್ತಿದ್ದಾರೆ’ ಎಂದು ತಿಳಿಸಿದರು.
‘ಪ್ರಸ್ತುತ ವಿಶ್ವದಲ್ಲಿ ವರ್ಷಕ್ಕೆ 300 ಬಿಲಿಯನ್ ಕಪ್ ಕಾಫಿ ಸೇವನೆಯಾಗುಗುತ್ತಿದ್ದು, ಅಲ್ಕೋಹಾಲ್‌ರಹಿತ ಪಾನೀಯಗಳಲ್ಲಿ ಕಾಫಿ ಅತಿ ಹೆಚ್ಚು ಉತ್ತೇಜನಕಾರಿ. ಲೈಟ್ ರೋಸ್ಟ್, ಡಾರ್ಕ್ ರೋಸ್ಟ್, ಆರ್ಗ್ಯಾನಿಕ್, ಫ್ರೂಟಿ ಫ್ಲೇವರ್, ಚಾಕೊಲೇಟ್ ಮತ್ತು ಕ್ಯಾರಮೆಲ್ ನೋಟ್ಸ್‌ಗಳ ಕಾಫಿಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಆರ್ಟಿಸನಲ್ ಮತ್ತು ಸ್ಪೆಷಾಲ್ಟಿ ಕಾಫಿಗೆ ಹೆಚ್ಚುತ್ತಿರುವ ಬೇಡಿಕೆ ಇದೆ’ ಎಂದರು.
ಎಂ. ಪೂರ್ಣೇಶ್ ಮಾತನಾಡಿ, ‘ಕಾಫಿಯನ್ನು ಬೆಳೆಯುವುದರ ಜೊತೆಗೆ ಅದನ್ನು ಹೇಗೆ ವಿಲೇವಾರಿ ಮಾಡಬೇಕು ಹಾಗೂ ಹೇಗೆ ಹೇಗೆ ಉಪಯೋಗಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ವಿದೇಶಗಳಲ್ಲಿ 30 ವರ್ಷಗಳ ಹಿಂದೆಯೇ ತಮ್ಮದೇ ಬ್ರಾಂಡ್ ಮೂಲಕ ಕಾಫಿಯನ್ನು ಉತ್ತಮ ಬೆಲೆಗೆ ಮಾರಾಟ ಮಾಡುವ ಜ್ಞಾನ ಹೊಂದಿದ್ದರು. ಮುಂದಿನ ದಿನಗಳಲ್ಲಿ ಕಾಫಿಯನ್ನು ನಾವೇ ಆಮದು ಮಾಡಿಕೊಳ್ಳುವ ಹಂತಕ್ಕೆ ತಲುಪುತ್ತೇವೆ ಎಂಬ ಆಶಾವಾದ ವ್ಯಕ್ತಪಡಿಸಿದರು.
ಶಾಸಕ ಸಿಮೆಂಟ್ ಮಂಜುನಾಥ್ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. 2025ರಲ್ಲಿ 7 ಬೀನ್ ತರಬೇತಿ ಮುಗಿಸಿದವರಿಗೆ ಕಾಫಿ ಬೋರ್ಡ್ ಅಧ್ಯಕ್ಷ ಎಂ.ಜೆ. ದಿನೇಶ್ ಅವರಿಂದ ಪ್ರಮಾಣ ಪತ್ರ ವಿತರಿಸಲಾಯಿತು. ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್, ಸಂಸ್ಥೆಯ ಅಧ್ಯಕ್ಷ ಡಾ. ಎನ್.ಕೆ. ಪ್ರದೀಪ್, ಚೇರ್ಮನ್ ಧರ್ಮರಾಜ್, ಯು.ಎಂ. ತೀರ್ಥಮಲ್ಲೇಶ್, ಕ್ಯಾನಹಳ್ಳಿ ಸುಬ್ರಹ್ಮಣ್ಯ, ಎಚ್.ಎಚ್. ಉದಯ್, ಖಜಾಂಚಿ ಸಿ.ಎಸ್ ಮಹೇಶ್, ಮುರಳೀಧರ್ ಬಕ್ರವಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.