
ಶ್ರವಣಬೆಳಗೊಳ: ‘ಪವಿತ್ರ ಭೂಮಿ ತಾಯಿ ಮೇಲೆ ಹಸಿರನ್ನು ಉಳಿಸಸದಿದ್ದರೆ ಮುಂದೊಂದು ದಿನ ಸಕಲ ಜೀವರಾಶಿಗಳು ವಿನಾಶದತ್ತ ಸಾಗುತ್ತವೆ. ಹಾಗಾಗಿ ಈಗಿನಿಂದಲೇ ಎಚ್ಚೆತ್ತುಕೊಂಡು ವಿದ್ಯಾರ್ಥಿಗಳು ಪರಿಸರ ಉಳಿಸುವತ್ತ ಕಾಳಜಿಯೊಂದಿಗೆ ಕಾರ್ಯೋನ್ಮುಖರಾಗಬೇಕು’ ಎಂದು ಸಾವಯವ ಕೃಷಿಕ ಬಿ.ರಾಘವೇಂದ್ರ ಶನಿವಾರ ಹೇಳಿದರು.
ಹೋಬಳಿಯ ಬೆಕ್ಕ ಗ್ರಾಮದಲ್ಲಿರುವ ತೀರ್ಥಂಕರರ ವನಕ್ಕೆ ದಮ್ಮನಿಂಗಲ ಸರ್ಕಾರಿ ಪ್ರೌಢಶಾಲೆಯ ಇಕೋ ಕ್ಲಬ್ ನ ವಿದ್ಯಾರ್ಥಿಗಳ ವನಭೇಟಿಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
20 ಎಕರೆಯ ತೆಂಗಿನ ತೋಟದ 5 ಎಕರೆಯ ಜಾಗದಲ್ಲಿ ಬೆಳೆದ ಅಮೂಲ್ಯ ಔಷಧ ಸಸ್ಯಗಳಾದ ನಿಂಬೆ, ಸೊಳ್ಳೆಹುಲ್ಲು, ಒಂದೆಲಗ, ಭ್ರಂಗರಾಜ, ಲಕ್ಕಿಸೊಪ್ಪು, ಬಿಳಿಗುಲಗಂಜಿ, ರುದ್ರಾಕ್ಷಿಗಿಡ, ಉತ್ತರಾಣಿ, ಅತ್ತಿ, ಆಲ, ಮುತ್ತಗ, ಕದಿರ, ಅರಳಿ, ಬಿಳಿ ಎಕ್ಕದ ಗಿಡ, ದರ್ಬೆ, ಗರಿಕೆ ಬನ್ನಿಗಿಡ, ಮಧುನಾಶಿನಿ, ಸೀತಾ ಅಶೋಕ ಸಸ್ಯಗಳ ಉಪಯೋಗದ ಬಗ್ಗೆ ಮಾಹಿತಿ ಒದಗಿಸಿದರು.
ಈ ಅಮೂಲ್ಯ ಸಸ್ಯಗಳ ಉಪಯೋಗದಿಂದ ಅನೇಕ ರೋಗ ರುಜಿನಗಳು ಬರುವುದಿಲ್ಲ ಮತ್ತು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದರು.
ಮುಖ್ಯ ಶಿಕ್ಷಕಲಿ ಸೌಮ್ಯ ಎನ್.ಎಂ. ಮಾತನಾಡಿ, ‘ಪರಿಸರದಲ್ಲಿ ಜೀವವೈವಿಧ್ಯ ಉಳಿಯಬೇಕಾದರೆ ಸಾವಯವ ಕೃಷಿ ಹಾಗು ನೈಸರ್ಗಿಕ ಕೃಷಿಯಿಂದ ಮಾತ್ರ ಸಾಧ್ಯ. ವಿದ್ಯಾರ್ಥಿಗಳು ತಮ್ಮ ಹೊಲ–ಗದ್ದೆ ಬದುಗಳಲ್ಲಿ ಅಮೂಲ್ಯವಾದ ಔಷಧ ಸಸ್ಯಗಳ ಪ್ರಭೇದ ಬೆಳೆಯಲು ಪೋಷಕರಿಗೆ ತಿಳಿಸಿ’ ಎಂದು ಸಲಹೆ ನೀಡಿದರು.
ಇಕೋ ಕ್ಲಬ್ ನ 25 ವಿದ್ಯಾರ್ಥಿಗಳಿಗೆ ಬಿ.ರಾಘವೇಂದ್ರ ವಿವಿಧ ಸಸ್ಯಗಳಿಂದ ತಯಾರಿಸಿದ ಕಷಾಯವನ್ನು ವಿತರಿಸಿದರು.
ಶಿಕ್ಷಕರಾದ ಲೋಕಪ್ಪ ಎಂ, ಸಾವಿತ್ರಮ್ಮ ಎಸ್.ಎಂ. ಮಮತಾ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.