ADVERTISEMENT

ಎತ್ತಿನಹೊಳೆ: ಬಾಯ್ತೆರೆದ ಮ್ಯಾನ್‌ಹೋಲ್‌

ಸುರಕ್ಷತಾ ಕ್ರಮ ಕೈಗೊಳ್ಳದ ಗುತ್ತಿಗೆ ಪಡೆದ ಕಂಪನಿ: ಆರೋಪ

ಜಾನೆಕೆರೆ ಆರ್‌.ಪರಮೇಶ್‌
Published 14 ಅಕ್ಟೋಬರ್ 2020, 3:24 IST
Last Updated 14 ಅಕ್ಟೋಬರ್ 2020, 3:24 IST
ಪೈಪ್‌ಲೈನ್‌ನಲ್ಲಿ ಮ್ಯಾನ್‌ಹೋಲ್‌ ಮುಚ್ಚದೆ ಹಾಗೆಯೇ ಬಿಟ್ಟಿರುವುದು
ಪೈಪ್‌ಲೈನ್‌ನಲ್ಲಿ ಮ್ಯಾನ್‌ಹೋಲ್‌ ಮುಚ್ಚದೆ ಹಾಗೆಯೇ ಬಿಟ್ಟಿರುವುದು   

ಸಕಲೇಶಪುರ: ಎತ್ತಿನಹೊಳೆ ಯೋಜನೆ ಕಾಮಗಾರಿ ಪಡೆದಿರುವ ಗುತ್ತಿಗೆದಾರರ ಕಂಪನಿಯು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ, ಪೈಪುಗಳ ಮ್ಯಾನ್‌ಹೋಲ್‌ಗಳನ್ನು ಹಾಗೆಯೇ ಬಿಟ್ಟಿದ್ದು, ಹಲಸುಲಿಗೆ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

ದೊಡ್ಡನಾಗರದಿಂದ ಹೆಬ್ಬನ ಹಳ್ಳಿ‌ವರೆಗೆ ನೀರು ಹಾಯಿಸಲು ಸುಮಾರು 15 ಅಡಿ ಎತ್ತರದ ಬೃಹತ್‌ ಗಾತ್ರದ ಪೈಪುಗಳನ್ನು ಭೂಮಿಯೊಳಗೆ ಅಳವಡಿಸಲಾಗಿದೆ. ಗ್ರಾಮಸ್ಥರು ತಮ್ಮ ತೋಟ, ಗದ್ದೆಗಳಿಗೆ ಓಡಾಡುವ ಪ್ರದೇಶದಲ್ಲಿಯೇ ದನಕರುಗಳು ಸಹ ಬಿದ್ದು ಹೋಗವಷ್ಟು ದೊಡ್ಡದಾದ ಮ್ಯಾನ್‌ಹೋಲ್‌ ಮಾಡಿ ಮುಚ್ಚದೆ ಹಾಗೆಯೇ ಬಿಡಲಾಗಿದೆ.

ಕೋವಿಡ್‌–19ನಿಂದಾಗಿ ಶಾಲಾ, ಕಾಲೇಜುಗಳಿಗೆ ರಜೆ ಇರುವುದರಿಂದ ಮಕ್ಕಳು ದನಕರುಗಳನ್ನು ಮೇಯಿಸಲು, ಆಟವಾಡುವುದಕ್ಕೆ ಹೋಗುತ್ತಾರೆ. ಈ ವೇಳೆ ಮಕ್ಕಳು ಹಾಗೂ ದನಕರುಗಳು, ಪೈಪ್‌ ಒಳಗೆ ಬೀಳುವ ಸಾಧ್ಯತೆ ಇದೆ. ಕತ್ತಲಾಗುತ್ತಲೇ ವಾಹನಗಳನ್ನು ನಿಲ್ಲಿಸಿಕೊಂಡು ಮದ್ಯಪಾನ ಮಾಡುವ ವರಿಗೂ ಈ ಪ್ರದೇಶವೇ ಅಡ್ಡವಾಗಿದೆ.

ADVERTISEMENT

ಮ್ಯಾನ್‌ಹೋಲ್‌ ಮಾತ್ರವಲ್ಲ ಭೂಮಿಯೊಳಗಿರುವ ಪೈಪುಗಳಿಗೆ ಅಲ್ಲಲ್ಲಿ ಏರ್‌ ವಾಲ್‌ಗಳನ್ನು ಅಳವಡಿಸಲಾಗಿದೆ. ಆ ವಾಲ್‌ಗಳ ಒಳಗೆ ಒಬ್ಬರು ನುಗ್ಗಿ ಹೋಗುವಷ್ಟು ಅಗಲ ಇದ್ದು, ಮಕ್ಕಳು ಆಡವಾಡುತ್ತಾ ಒಳ ಹೋದರೆ ಅವರನ್ನು ಪತ್ತೆ ಹಚ್ಚುವುದಕ್ಕೆ ಸಾಧ್ಯವಿಲ್ಲ. ಇದರಿಂದ ಮಕ್ಕಳ ಪ್ರಾಣಕ್ಕೂ ಅಪಾಯ ಕಟ್ಟಿಟ್ಟಬುತ್ತಿ ಎನ್ನುತ್ತಾರೆ ರೈತ ಎಚ್‌.ವಿ. ಗಿರೀಶ್‌.

‘ಮೆಘಾ ಕಂಪನಿಗೆ ನೋಟಿಸ್‌’

ಹಲಸುಲಿಗೆ ಬಳಿ ಪೈಪ್‌ಲೈನ್‌ನಲ್ಲಿ ಮ್ಯಾನ್‌ಹೋಲ್‌ ಹಾಗೂ ಏರ್‌ ವಾಲ್‌ಗಳನ್ನು ಮುಚ್ಚದೆ ಹಾಗೆಯೇ ಬಿಟ್ಟಿದ್ದು, ಕಾಮಗಾರಿ ನಡೆಸುತ್ತಿರುವ ಮೆಘಾ ಕಂಪನಿಯವರಿಗೆ ಈಗಾಗಲೇ ನೋಟಿಸ್‌ ನೀಡಲಾಗಿದೆ. ತಕ್ಷಣ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ವಿಶ್ವೇಶ್ವರಯ್ಯ ಜಲ ನಿಗಮದ ಕಾರ್ಯಪಾಲಕ ಎಂಜಿನಿಯರ್‌ ಜಯಣ್ಣ ತಿಳಿಸಿದರು.

**

ಎತ್ತಿನಹೊಳೆ ಕಾಮಗಾರಿ ಪ್ರಗತಿಯಲ್ಲಿದ್ದು, ಮ್ಯಾನ್‌ ಹೋಲ್‌ಗಳನ್ನು ವಾರದೊಳಗೆ ಮುಚ್ಚುತ್ತೇವೆ.

-ಸಂಜಯ್‌, ಪ್ರಧಾನ ವ್ಯವಸ್ಥಾಪಕ, ಮೆಘಾ ಕಂಪನಿ

ಯಾವುದೇ ಅಹಿತಕರ ಘಟನೆ ಸಂಭವಿಸಿದರೆ ಗುತ್ತಿಗೆ ಪಡೆದ ಮೆಘಾ ಕಂಪನಿಯೇ ನೇರ ಹೊಣೆ ಹೊರಬೇಕು.

-ಸುರೇಶ್‌ ಆಳ್ವ, ಹಲಸುಲಿಗೆ ಗ್ರಾ.ಪಂ ಮಾಜಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.