ADVERTISEMENT

ಹೆತ್ತೂರು | ಸುಳ್ಳು ಮಾಹಿತಿ: ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2025, 14:19 IST
Last Updated 10 ಫೆಬ್ರುವರಿ 2025, 14:19 IST
ಹೆತ್ತೂರು ಹೋಬಳಿಯ ಅತ್ತಿಹಳ್ಳಿ ವೃತ್ತದಲ್ಲಿ ಸೋಮವಾರ ರೈತರು ಪ್ರತಿಭಟನೆ ನಡೆಸಿದರು
ಹೆತ್ತೂರು ಹೋಬಳಿಯ ಅತ್ತಿಹಳ್ಳಿ ವೃತ್ತದಲ್ಲಿ ಸೋಮವಾರ ರೈತರು ಪ್ರತಿಭಟನೆ ನಡೆಸಿದರು   

ಹೆತ್ತೂರು: ಮರ ಕಡಿದಿರುವುದಾಗಿ ಅರಣ್ಯ ಸಚಿವರಿಗೆ ತಪ್ಪು ಮಾಹಿತಿ ನೀಡಿದ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಹೋಬಳಿಯ ಅತ್ತಿಹಳ್ಳಿ ಗ್ರಾಮದ ವೃತ್ತದಲ್ಲಿ ನೂರಾರು ರೈತರು ಸೋಮವಾರ ಪ್ರತಿಭಟನೆ ನಡೆಸಿದರು.

ಯರಗಳ್ಳಿ ಗ್ರಾಮದ ಸರ್ವೆ ನಂಬರ್ 56/1 ಹಾಗೂ ಸುತ್ತಲಿನ ಹಿಡುವಳಿ ಜಮೀನು ಹೊಂದಿರುವ ರೈತರು, ಕಾಫಿ, ಏಲಕ್ಕಿ ತೋಟ ಮಾಡಿದ್ದಾರೆ. ಈ ರೈತರು ಸ್ವಂತ ಜಮೀನಿನಲ್ಲಿ ಬೆಳೆದಿರುವ ಮರಗಳನ್ನು ಅರಣ್ಯ ಇಲಾಖೆಯ ಅನುಮತಿ ಪಡೆದು ಕಟಾವು ಮಾಡಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ವ್ಯಕ್ತಿಗಳು ಅರಣ್ಯ ಇಲಾಖೆಯ ಜಾಗದಲ್ಲಿ 10 ಸಾವಿರ ಮರ ಕಡಿಯಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸಂದೇಶ ಹಾಕಿದ್ದಾರೆ ಎಂದು ದೂರಿದರು.

ಇದನ್ನು ಗಮನಿಸಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ ತನಿಖೆಗೆ ಆದೇಶಿಸಿದ್ದು, ಗ್ರಾಮದ ಕಾಫಿ ಬೆಳೆಗಾರರಾದ ಹರೀಶ್, ಸೋಮಶೇಖರ್, ವಿವೇಕ್, ಪರಮೇಶ್ ಎಂಬುವವರ ಮೇಲೆ ಅರಣ್ಯ ಇಲಾಖೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಇದರಿಂದಾಗಿ ಗ್ರಾಮದ ರೈತರು ಕಾಫಿ ತೋಟಗಳಲ್ಲಿ ಅನಗತ್ಯ ಮರ ಕಡಿಯಲು ಹೆದರುವಂತಾಗಿದೆ. ಕೂಡಲೇ ರೈತರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ADVERTISEMENT

ಗ್ರಾಮಸ್ಥ ಕುಮಾರ್ ಮಾತನಾಡಿ, ಅತ್ತಿಹಳ್ಳಿ ಗ್ರಾಮದಲ್ಲಿ ರೈತರು ತಮ್ಮ ಕಾಫಿ ತೋಟದ ಜಮೀನಿನಲ್ಲಿ ಮರಗಸಿ ಮಾಡಲು ಸಹ ಕಷ್ಟಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವರು ಸುಳ್ಳು ಸುದ್ದಿ ನೀಡುವ ಬದಲು ಸ್ಥಳಕ್ಕೆ ಬಂದು ವಾಸ್ತವ ಪರಿಸ್ಥಿತಿ ನೋಡಬೇಕು. ಇಲ್ಲಿ 10 ಸಾವಿರ ಮರಗಳೇ ಇಲ್ಲ. ರೈತರು ಕೃಷಿ ಕೆಲಸಕ್ಕೆ ತೋಟದಲ್ಲಿನ ಮರ ಕಟಾವು ಮಾಡಿದರೆ, ಅರಣ್ಯ ಇಲಾಖೆ ತೊಂದರೆ ಮಾಡಬಾರದು ಎಂದು ಒತ್ತಾಯಿಸಿದರು.

ಈ ಭಾಗದಲ್ಲಿ ಹಿಂದಿನಿಂದಲೂ ಸ್ಥಳೀಯರೇ ಮರ-ಗಿಡಗಳನ್ನು ಬೆಳೆಸಿಕೊಂಡು ಪರಿಸರ ಕಾಪಾಡಿದ್ದಾರೆ. ಇಲ್ಲಿ ಅರಣ್ಯ ಇಲಾಖೆ ಯಾವುದೇ ಮರಗಳನ್ನು ಬೆಳೆಸಿದ ಇತಿಹಾಸವಿಲ್ಲ. ವಾಸ್ತವ ಮಾಹಿತಿಯನ್ನು ಸರ್ಕಾರಕ್ಕೆ ತಿಳಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡಿದರು.

ಕರ್ನಾಟಕ ಬೆಳೆಗಾರರ ಸಂಘದ ನಿರ್ದೇಶಕ ಕೃಷ್ಣಪ್ರಸಾದ್, ಹಾಸನ ಬೆಳೆಗಾರರ ಸಂಘದ ಸದಸ್ಯ ಸಚಿನ್, ಹೆತ್ತೂರು ಹೋಬಳಿ ಘಟಕದ ಅಧ್ಯಕ್ಷ ದೇವರಾಜ್, ಸದಸ್ಯ ಶ್ರೀಧರ್, ರೈತ ಸಂಘದ ಮುಖಂಡರು, ಅತ್ತಿಹಳ್ಳಿ, ಯರಗಳ್ಳಿ, ಸುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.