ADVERTISEMENT

ಆನೆಮಹಲ್ ಗ್ರಾಮ ಪಂಚಾಯತ್ ವಿರುದ್ಧ ಸುಳ್ಳು ಆರೋಪ; ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 7 ಮೇ 2025, 14:20 IST
Last Updated 7 ಮೇ 2025, 14:20 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಸಕಲೇಶಪುರ: ‘ಆನೆಮಹಲ್ ಗ್ರಾಮ ಪಂಚಾಯಿತಿಯಿಂದ ಕೌಡಹಳ್ಳಿ ಗ್ರಾಮಕ್ಕೆ ಅಸುರಕ್ಷಿತ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದು, ಇವು ಸತ್ಯಕ್ಕೆ ದೂರವಾಗಿವೆ’ ಎಂದು ಪಂಚಾಯಿತಿಯ ಮಾಜಿ ಅಧ್ಯಕ್ಷ ತಿಮ್ಮಯ್ಯ ಹೇಳಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಕೌಡಹಳ್ಳಿ ಗ್ರಾಮಕ್ಕೆ ನೀರು ಸರಬರಾಜು ಮಾಡುವ ಬಾವಿಯಲ್ಲಿ ಸ್ಚಚ್ಛತೆಯಿಲ್ಲ. ಹಕ್ಕಿಗಳು ಹಿಕ್ಕೆ ಹಾಕುತ್ತಿವೆ, ಸುರಕ್ಷತೆಯೇ ಇಲ್ಲ ಎಂದೆಲ್ಲಾ ಸುಳ್ಳು ಸುದ್ದಿಯನ್ನು ಹರಡುತ್ತಿದ್ದಾರೆ. ಆದರೆ, ನೀರು ಶುದ್ಧವಾಗಿ ಸರಬರಾಜು ಆಗುತ್ತಿದೆ ಎಂದು ನೀರು ಹಿಡಿಯುತ್ತಿರುವ ಸ್ಥಳದಲ್ಲಿಯೇ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಪಿಡಿಒ ಅವರಿಗೆ ಗ್ರಾಮಸ್ಥರು ಹೇಳಿಕೆ ನೀಡಿದ್ದಾರೆ’ ಎಂದು ವಿಡಿಯೊ ತುಣುಕುಗಳನ್ನು ಪ್ರದರ್ಶಿಸಿದರು.

ADVERTISEMENT

‘ಪಂಚಾಯಿತಿಯಿಂದ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಇದಕ್ಕಾಗಿ ಪ್ರತ್ಯೇಕ ಕೊಳವೆ ಬಾವಿಗಳಿಂದ ನೀರನ್ನು ಪೂರೈಸಲಾಗುತ್ತಿದೆ. ಪಂಚಾಯಿತಿ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದರೂ ಸಹ ಸುಳ್ಳು ಸುದ್ದಿ ಹರಡಿರುವವರ ವಿರುದ್ಧ ಗ್ರಾಮಸ್ಥರು ಮತ್ತು ವಿವಿಧ ದಲಿತ ಸಂಘಟನೆಗಳ ಒಕ್ಕೂಟವು ಪ್ರತಿಭಟನೆ ನಡೆಸಲಿವೆ. ಕಾನೂನು ಕ್ರಮವನ್ನೂ ಕೈಗೊಳ್ಳಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಾ ದೇವರಾಜ್‌ ಮಾತನಾಡಿ, ‘ಗ್ರಾಮ ಪಂಚಾಯಿತಿಯಲ್ಲಿ ನಾಲ್ಕು ಕುಡಿಯುವ ನೀರಿನ ಮೋಟಾರ್‌ಗಳಿದ್ದು, ಎಲ್ಲವೂ ಸುಸ್ಥಿತಿಯಲ್ಲಿವೆ. ಕೊಳವೆ ಬಾವಿಗಳ ನೀರನ್ನು ಕುಡಿಯಲು ಬಳಸಲಾಗುತ್ತಿದೆ. ಪ್ರಸ್ತುತ ಆಡಳಿತ ಮಂಡಳಿ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿ ಸಮಗ್ರ ಕುಡಿಯುವ ನೀರು ಯೋಜನೆಯನ್ನು ಉತ್ಸಾಹದಿಂದ ಅನುಷ್ಠಾನಗೊಳಿಸುತ್ತಿದ್ದಾರೆ. ಈ ಯೋಜನೆ ಬಹುತೇಕ ಪೂರ್ಣಗೊಂಡಿದ್ದು, ಮುಂದಿನ ದಿನಗಳಲ್ಲಿ ಕೌಡಹಳ್ಳಿ ಮತ್ತು ಸಕಲೇಶಪುರ ಗ್ರಾಮಾಂತರ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಸಮೃದ್ಧವಾಗಿ ದೊರೆಯಲಿದೆ’ ಎಂದರು.

ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಅಶ್ರಫ್ ಮಾತನಾಡಿ, ‘ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಸಿಗದಿದ್ದರೆ, ಸದಸ್ಯರು ಅಥವಾ ಪಿಡಿಒಗೆ ದೂರು ನೀಡಿದರೆ ತಕ್ಷಣ ಸಮಸ್ಯೆಯನ್ನು ಸರಿಪಡಿಸಲಾಗುತ್ತದೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿರೂಪಾಕ್ಷ, ಮಾಜಿ ಉಪಾಧ್ಯಕ್ಷೆ ಕೆ.ಬಿ.ಚಂದ್ರಮತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.