ADVERTISEMENT

ರೈತರಿಂದಲೇ ನೇರ ಮೆಕ್ಕೆಜೋಳ ಖರೀದಿಗೆ ಒತ್ತಾಯ

ಪಶು ಆಹಾರ ಉತ್ಪಾದನಾ ಘಟಕಕ್ಕೆ ಮುತ್ತಿಗೆ ಹಾಕಿ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 4:12 IST
Last Updated 18 ಡಿಸೆಂಬರ್ 2025, 4:12 IST
ಹಾಸನದ ಪಶು ಆಹಾರ ಘಟಕಕ್ಕೆ ರೈತರು ಬುಧವಾರ ಮುತ್ತಿಗೆ ಹಾಕಿದರು 
ಹಾಸನದ ಪಶು ಆಹಾರ ಘಟಕಕ್ಕೆ ರೈತರು ಬುಧವಾರ ಮುತ್ತಿಗೆ ಹಾಕಿದರು    

ಹಾಸನ: ರೈತರಿಂದಲೇ ನೇರವಾಗಿ ಮೆಕ್ಕೆಜೋಳ ಖರೀದಿ ಮಾಡುವಂತೆ ಆಗ್ರಹಿಸಿ ನೂರಾರು ರೈತರು ಇಲ್ಲಿನ ಹಾಸನ -ಹೊಳೆನರಸೀಪುರ ರಸ್ತೆಯ ಕೆಎಂಎಫ್ ಪಶು ಆಹಾರ ಉತ್ಪಾದನಾ ಘಟಕಕ್ಕೆ ಮುತ್ತಿಗೆ ಹಾಕಿ ಬುಧವಾರ ಪ್ರತಿಭಟಿಸಿದರು.

ರೈತರಿಂದಲೇ ಬೆಂಬಲ ಬೆಲೆ ಮೂಲಕ ಜೋಳ ಖರೀದಿಸಲು ಸೂಚಿಸಿದ್ದರೂ, ಕೆಎಂಎಫ್ ಅಧಿಕಾರಿಗಳು ಬೇಕಾಬಿಟ್ಟಿಯಾಗಿ ದಲ್ಲಾಳಿಗಳ ಮೂಲಕ ಸಾವಿರಾರು ಟನ್ ಜೋಳ ಖರೀದಿ ಮಾಡಿದ್ದಾರೆ. ಇದರಿಂದ ಸಾವಿರಾರು ಅರ್ಹ ರೈತರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.

10 ಸಾವಿರ ಟನ್‌ ಖರೀದಿಸಬೇಕಿದ್ದು, ಈಗಾಗಲೇ 9 ಸಾವಿರ ಟನ್‌ ಖರೀದಿ ಮಾಡಲಾಗಿದೆ. ಉಳಿದ ಒಂದು ಸಾವಿರ ಟನ್ ಜೋಳವನ್ನು ರೈತರಿಂದ ಖರೀದಿಸಲು ಮಂಗಳವಾರ ಕ್ರಮ ಕೈಗೊಳ್ಳಲಾಗಿತ್ತು. ಮಂಗಳವಾರದಿಂದಲೇ ವಾಹನಗಳಲ್ಲಿ ಜೋಳ ತುಂಬಿಕೊಂಡು ರೈತರು ಆಹಾರ ಘಟಕದ ಎದುರು ಬಂದು ನಿಲ್ಲುತ್ತಿದ್ದಾರೆ. ಆದರೆ ಖರೀದಿ ಮಾಡುವುದನ್ನು ಆಹಾರ ಘಟಕದ ಅಧಿಕಾರಿಗಳು ನಿಲ್ಲಿಸಿದ್ದು, ರೈತರ ಆಕ್ರೋಶಕ್ಕೆ ಕಾರಣವಾಯಿತು. ಅಧಿಕಾರಿಗಳ ಮಾತಿನಿಂದ ಕೆರಳಿದ ರೈತರು ಪಶು ಆಹಾರ ಘಟಕಕ್ಕೆ ಮುತ್ತಿಗೆ ಹಾಕಿದರು.

ADVERTISEMENT

ನಿಗದಿಯಂತೆ ಖರೀದಿ:

ಕೆಎಂಎಫ್‌ನಿಂದ 10ಸಾವಿರ ಟನ್ ಜೋಳ ಖರೀದಿಗೆ ಸೂಚನೆ ಬಂದಿತ್ತು. ಮಂಗಳವಾರದವರೆಗೆ 9ಸಾವಿರ ಟನ್ ಜೋಳ ಖರೀದಿ ಮಾಡಲಾಗಿದೆ ಎಂದು ಹಾಸನದ ಪಶು ಆಹಾರ ಘಟಕದ ಅಧಿಕಾರಿಗಳು ತಿಳಿಸಿದರು.

ನಾವು ಬೆಂಗಳೂರಿನ ಕೇಂದ್ರ ಕಚೇರಿಯ ಆದೇಶದಂತೆ ಖರೀದಿ ಮಾಡುತ್ತೇವೆ. ಆದೇಶ ಮೀರಿ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ರೈತರು, ಜಿಲ್ಲೆಯ ರೈತರಿಂದಲೇ ಮೆಕ್ಕೆಜೋಳ ಖರೀದಿ ಮಾಡಬೇಕು ಎಂದು ಆಗ್ರಹಿಸಿದರು.

ರೈತರ ಒತ್ತಡಕ್ಕೆ ಮಣಿದ ಕೆಎಂಎಫ್‌ ಅಧಿಕಾರಿಗಳು, ಸ್ಥಳದಲ್ಲಿ ಇರುವವರ ಜೋಳವನ್ನು ದಿನಾಂಕ ನಿಗದಿ ಮಾಡಿ ಖರೀದಿಸುತ್ತೇವೆ. ನಾವು ತಿಳಿಸಿದ ದಿನದಂದು ಮೆಕ್ಕೆಜೋಳ ತರುವಂತೆ ಹೇಳಿ, ರೈತರಿಂದ ಆಧಾರ್‌ ಕಾರ್ಡ್ ಜೆರಾಕ್ಸ್ ಪಡೆದರು. ನಂತರ ರೈತರು ಪ್ರತಿಭಟನೆ ಹಿಂಪಡೆದರು.

ಪಶು ಆಹಾರ ಘಟಕದ ಎದುರು ಪಹಣಿ ಆಧಾರ್‌ ಕಾರ್ಡ್‌ ಹಿಡಿದು ನಿಂತಿದ್ದ ರೈತರು 

ಫಸಲಿಗೆ ಮುನ್ನ 23 ಸಾವಿರ ಟನ್ ಖರೀದಿ: ಆಕ್ರೋಶ 33 ಸಾವಿರ ಮೆಟ್ರಿಕ್ ಟನ್ ಜೋಳ ಖರೀದಿ ಸಾಮರ್ಥ್ಯ ಹೊಂದಿರುವ ಹಾಸನದ ಪಶು ಆಹಾರ ಘಟಕದಲ್ಲಿ ರೈತರ ಫಸಲು ಬರುವ ಮುನ್ನವೇ ದಲ್ಲಾಳಿಗಳ ಮೂಲಕ 23ಸಾವಿರ ಟನ್ ಜೋಳ ಖರೀದಿ ಮಾಡಲಾಗಿದೆ ಎಂದು ರೈತ ಮುಖಂಡರು ಆರೋಪಿಸಿದರು. ಮಧ್ಯವರ್ತಿಗಳ ಮೂಲಕ ಸಾವಿರಾರು ಟನ್ ಮೆಕ್ಕೆಜೋಳ ಖರೀದಿ ಮಾಡಿದ್ದು ಜಿಲ್ಲೆಯ ಸಾವಿರಾರು ಅರ್ಹ ರೈತರಿಗೆ ಅನ್ಯಾಯವಾಗಿದೆ. ಕೂಡಲೇ ರೈತರಿಗೆ ಆಗಿರುವ ತೊಂದರೆ ಪರಿಶೀಲಿಸಿ ರೈತರಿಂದಲೇ ಮೆಕ್ಕೆಜೋಳ ಖರೀದಿಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡುವುದಾಗಿ ರೈತರು ಎಚ್ಚರಿಸಿದರು.

ಭರವಸೆ ಹುಸಿ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿ ಮಾಡಬೇಕು ಎಂದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಒಂದು ವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಲಾಗಿತ್ತು. ಬಳಿಕ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಧಿಕಾರಿಗಳು ಮೆಕ್ಕೆಜೋಳ ಖರೀದಿ ಮಾಡುವ ಸಂಬಂಧ ರೈತರಿಗೆ ಭರವಸೆ ನೀಡಿದ್ದು ಪ್ರತಿಭಟನೆ ಹಿಂಪಡೆಯಲಾಗಿತ್ತು ಎಂದು ರೈತರು ಹೇಳಿದರು. ಪ್ರತಿ ರೈತರಿಂದ 50 ಕ್ವಿಂಟಲ್‌ವರೆಗೂ ಮೆಕ್ಕೆಜೋಳವನ್ನು ಖರೀದಿ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಆದರೆ ಸರ್ಕಾರದ ಆದೇಶಕ್ಕೆ ಆಹಾರ ಘಟಕದವರು ಬೆಲೆ ನೀಡುತ್ತಿಲ್ಲ ಎಂದು ರೈತರು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.