ಅರಸೀಕೆರೆ: ರಾಗಿಯ ಕಣಜ ಎಂದೇ ಕರೆಯಲಾಗುವ ತಾಲ್ಲೂಕಿನಲ್ಲಿ ರಾಗಿ ಬಿತ್ತನೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ತಿಂಗಳಿನಿಂದ ಆಗಾಗ ಬರುತ್ತಿರುವ ಮಳೆಯಿಂದಾಗಿ ಜಮೀನು ಹದವಾಗಿದ್ದು, ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದಾರೆ.
ತಾಲ್ಲೂಕಿನಲ್ಲಿ ವಾಡಿಕೆಗಿಂತಲೂ ಮಳೆ ಅಧಿಕವಾಗಿದ್ದು, ಇದೀಗ ಮಳೆ ಬಿಡುವು ಕೊಟ್ಟಿರುವುದರಿಂದ ಭೂಮಿ ಹದ ಮಾಡುವ ಕೆಲಸದಲ್ಲಿ ರೈತರು ತೊಡಗಿದ್ದಾರೆ. ಜುಲೈ ಮೊದಲನೇ ವಾರದಿಂದ ಆರಂಭಗೊಳ್ಳುವ ರಾಗಿ ಬಿತ್ತನೆ ಕಾರ್ಯ, ಜುಲೈ ಕೊನೆಯವರೆಗೂ ನಡೆಯಲಿದೆ.
ತಾಲ್ಲೂಕಿನಲ್ಲಿ ಎಷ್ಟು ಕ್ಷೇತ್ರದಲ್ಲಿ ಬಿತ್ತನೆ ಆಗಲಿದೆ ಎಂಬುದು ಮಳೆಯನ್ನು ಆಧರಿಸಿದೆ. ಅದಾಗ್ಯೂ ಕೃಷಿ ಇಲಾಖೆ 35 ಸಾವಿರ ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆಯ ಗುರಿ ಹೊಂದಿದೆ. ಕಳೆದ ವರ್ಷ 45 ಸಾವಿರ ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆ ಮಾಡಲಾಗಿತ್ತು.
ಅಧಿಕ ಇಳುವರಿ ಕೊಡುವ ಹಾಗೂ ಗುಣಮಟ್ಟದ ರಾಗಿ ಬಿತ್ತನೆ ಬೀಜ ಕೃಷಿ ಇಲಾಖೆಯಲ್ಲಿ ಲಭ್ಯವಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಎಂ.ಆರ್-6 , ಜಿ.ಪಿ.ಯು-28 , ಎಂ.ಎಲ್.365 ರಾಗಿಯ ತಳಿಗಳು ದಾಸ್ತಾನಿದ್ದು, ರಿಯಾಯಿತಿ ದರದಲ್ಲಿ ಎಲ್ಲ ರೈತರಿಗೂ ಲಭ್ಯವಿದೆ. ರಾಷ್ಟ್ರೀಯ ಬೀಜ ನಿಗಮ ಹಾಗೂ ರಾಜ್ಯ ಬೀಜ ನಿಗಮಗಳಿಂದ ಬಿತ್ತನೆ ಬೀಜಗಳು ಪೂರೈಕೆ ಆಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಉತ್ತಮ ಇಳುವರಿ ಕೊಡುವ ಗುಣಮಟ್ಟದ ರಾಗಿ ಬೆಳೆದಿರುವ ರೈತರು, ಅವುಗಳನ್ನೇ ಬಿತ್ತನೆ ಬೀಜವಾಗಿ ಆಯ್ಕೆಮಾಡಿಕೊಂಡು ಬಳಸಿಕೊಳ್ಳಬಹುದಾಗಿದೆ ಎನ್ನುತ್ತಾರೆ ಅನುಭವಿ ರೈತರು.
ಗಂಡಸಿ, ಜಾವಗಲ್, ಬಾಣಾವಾರ, ಕಣಕಟ್ಟೆ ಹಾಗೂ ಕಸಬಾ ಹೋಬಳಿ ರೈತ ಸಂಪರ್ಕ ಕೇಂದ್ರಗಳಲ್ಲೂ ರಾಗಿ ಬಿತ್ತನೆ ಬೀಜಗಳು ದಾಸ್ತಾನು ಮಾಡಲಾಗಿದೆ. ರಾಗಿ ಜೊತೆಗೆ ಮುಸುಕಿನ ಜೋಳ, ಅಲಸಂದೆ, ತೊಗರಿ ಬೀಜಗಳೂ ಲಭ್ಯವಾಗಿವೆ. ರಸಗೊಬ್ಬರಗಳು ಖಾಸಗಿಯ ಅಧಿಕೃತ ಮಾರಾಟಗಾರರು ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಲಭ್ಯವಿದ್ದು ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.
ಬಿತ್ತನೆ ಬೀಜಗಳ ಬೆಲೆ ಅಧಿಕವಾದರೂ ಪರವಾಗಿಲ್ಲ, ಉತ್ತಮ ಬೀಜ ವಿತರಿಸಬೇಕು. ಇಂದು ಕೃಷಿ ಲಾಭದಾಯಕವಾಗಿ ಉಳಿದಿಲ್ಲ. ಬೆಳೆದರೂ ಕಷ್ಟ, ಬೆಳೆಯದಿದ್ದರೂ ಕಷ್ಟ ಎನ್ನುವಂತಾಗಿದೆ. ಬೆಳೆ ಚೆನ್ನಾಗಿ ಬೆಳೆದರೆ ಬೆಲೆ ಕುಸಿತದಿಂದ ಜರ್ಝರಿತರಾಗುತ್ತಿದ್ದಾರೆ. ಹಾಗಾಗಿ ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ನೀಡಬೇಕು. ವಿಮಾ ಸೌಲಭ್ಯವನ್ನು ಹೆಚ್ಚಿಸಬೇಕು ಎಂದು ಕಣಕಟ್ಟೆಯ ರೈತ ಶಿವೇಗೌಡ ಆಗ್ರಹಿಸುತ್ತಾರೆ.
ತೆಂಗಿನ ಜೊತೆಗೆ ರಾಗಿ ಬೆಳೆಯಲು ರೈತರ ಆದ್ಯತೆ ತಾಲ್ಲೂಕಿನಾದ್ಯಂತ ಗರಿಗೆದರಿದ ಕೃಷಿ ಚಟುವಟಿಕೆ ಈ ಬಾರಿಯಾದರೂ ಉತ್ತಮ ಇಳುವರಿ ಸಿಗಲು ಪ್ರಾರ್ಥನೆ
ಅಗತ್ಯ ಇರುವಷ್ಟು ರಾಗಿ ಬೀಜ ರಸಗೊಬ್ಬರ ಲಭ್ಯವಿದೆ.ರೈತರು ಬಿತ್ತನೆ ಸಮಯದಲ್ಲಿ ಯೂರಿಯಾ ಬಳಕೆ ಮಾಡಬಾರದು. ಮೇಲು ಗೊಬ್ಬರವಾಗಿ ಬಳಸಬೇಕುಶಿವಕುಮಾರ್ ಕೃಷಿ ಇಲಾಖೆ ಸಹಾಯಕ ನಿರ್ದೇಶಕ
ಕಳೆದ ಬಾರಿ ರಾಗಿ ಬಿತ್ತನೆ ಬೀಜಗಳ ಗುಣಮಟ್ಟ ಕಳಪೆಯಾಗಿದ್ದು ಈ ಬಾರಿ ಅಧಿಕ ಇಳುವರಿ ನೀಡುವ ಹಾಗೂ ಗುಣಮಟ್ಟದ ರಾಗಿ ಬಿತ್ತನೆ ಬೀಜಗಳನ್ನು ನೀಡಬೇಕುಗಂಡಸಿ ಶಿವಸ್ವಾಮಿ ರೈತ
ರಾಗಿಗೆ ಫಸಲ್ ಬಿಮಾ ಯೋಜನೆ
ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಅಡಿಯಲ್ಲಿ ಬೆಳೆ ವಿಮೆ ಇದ್ದು ಒರಿಯಂಟಲ್ ಜನರಲ್ ಇನ್ಸುರೆನ್ಸ್ ಕಂಪನಿ ಮೂಲಕ ಹೋಬಳಿ ಅಥವಾ ಗ್ರಾಮ ಪಂಚಾಯಿತಿಗಳಲ್ಲಿ ಬೆಳೆ ವಿಮೆ ಕಂತು ಪಾವತಿಸಬೇಕು. ಒಂದು ಎಕರೆಗೆ ₹344 ಕಂತನ್ನು ಆಗಸ್ಟ್ 16 ರೊಳಗೆ ಪಾವತಿಸಬೇಕು. ಒಂದು ಎಕರೆ ಸಂಪೂರ್ಣ ಬೆಳೆ ಹಾನಿಯಾದರೆ ₹17206 ಪರಿಹಾರ ಸಿಗುತ್ತದೆ. ಕಳೆದ ವರ್ಷ ಅರಸೀಕೆರೆ ತಾಲ್ಲೂಕಿನಲ್ಲಿ 27898 ರೈತರಿಗೆ ₹186664000 ವಿಮಾ ಪರಿಹಾರ ರೈತರಿಗೆ ಸಂದಾಯವಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.