ADVERTISEMENT

ಕಳಪೆ ಬಿತ್ತನೆ ಬೀಜ ವಿತರಣೆ ಆರೋಪ; ಪರಿಹಾರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 16:04 IST
Last Updated 28 ಸೆಪ್ಟೆಂಬರ್ 2021, 16:04 IST
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ರೈತರು ಮೆಕ್ಕೆಜೋಳ ಬೆಳೆಯೊಂದಿಗೆ ಪ್ರತಿಭಟನೆ ನಡೆಸಿದರು.
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ರೈತರು ಮೆಕ್ಕೆಜೋಳ ಬೆಳೆಯೊಂದಿಗೆ ಪ್ರತಿಭಟನೆ ನಡೆಸಿದರು.   

ಹಾಸನ: ಕಳಪೆ ಜೋಳದ ಬಿತ್ತನೆ ಬೀಜ ವಿತರಣೆ ಮಾಡಿರುವ ಕಂಪನಿ ವಿರುದ್ಧ ಕ್ರಮ ಕೈಗೊಂಡು,
ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರೈತ ಸಂಘದ ನೇತೃತ್ವದಲ್ಲಿ ಆಲೂರು ಹಾಗೂ
ಹಾಸನ ತಾಲ್ಲೂಕಿನ ರೈತರು ಜೋಳದ ಗಿಡಗಳನ್ನು ಪ್ರದರ್ಶಿಸಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ
ಎದುರು ಪ್ರತಿಭಟನೆ ನಡೆಸಿದರು.

ಸೋಂಪುರ, ಎತ್ತಿನಕಟ್ಟೆ, ಅಗಸಹಟ್ಟಿ, ವಾಟೆಹೊಳೆ ಗ್ರಾಮದಲ್ಲಿಮುಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಲಾಗಿದ್ದು, ಫಸಲು ಬಾರದೆನಷ್ಟ ಅನುಭವಿಸುವಂತಾಗಿದೆ ಎಂದು ಪ್ರತಿಭಟನಕಾರರು ಅಳಲು ತೋಡಿಕೊಂಡರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕಣಗಲ್ ಮೂರ್ತಿ ಮಾತನಾಡಿ, ‘ಹೈಟೆಕ್‌ ಕಂಪನಿ ದಲ್ಲಾಳಿಗಳ ಮೂಲಕ ಗ್ರಾಮಗಳಲ್ಲಿ ಕಳಪೆ ಬಿತ್ತನೆ ಬೀಜ ಮಾರಾಟ ಮಾಡಿದೆ. ಎಕರೆಗೆ ಸುಮಾರು 40 ಕ್ವಿಂಟಲ್ ಬೆಳೆ
ಬೆಳೆಯಲಾಗುತ್ತಿತ್ತು. ಆದರೆ, ಕೇವಲ 10 ಕ್ವಿಂಟಲ್ ಬೆಳೆ ಬಂದಿದ್ದು, ರೈತರು ನಷ್ಟಕ್ಕೆ ಸಿಲುಕಿದ್ದಾರೆ’
ಎಂದು ಆರೋಪಿಸಿದರು.

ADVERTISEMENT

‘ಬಿತ್ತನೆ ಬೀಜ ಮಾರಾಟ ಮಾಡುವಾಗ ಕೃಷಿ ಅಧಿಕಾರಿಗಳು ಸಹ ಈ ಬಗ್ಗೆ ತಿಳಿಸಲಿಲ್ಲ. ಶೇಕಡಾ
70ರಷ್ಟು ಬೆಳೆ ಹಾಳಾಗಿದೆ. ಗೊಬ್ಬರ, ಉಳುಮೆ, ಕೂಲಿ ಕಾರ್ಮಿಕರ ಖರ್ಚಾದರೂ ಸರ್ಕಾರ ಕೊಡಬೇಕು.
ನಷ್ಟ ಅನುಭವಿಸಿರುವ ರೈತರ ಜಮೀನಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು. ಕಳಪೆ ಬಿತ್ತನೆ
ಬೀಜ ಮಾರಾಟ ಮಾಡಿರುವ ಕಂಪನಿ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಜರುಗಿಸಬೇಕು’
ಎಂದು ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಹಾಸನ ತಾಲ್ಲೂಕು ಘಟಕದ ಅಧ್ಯಕ್ಷ ಮಂಜು ಬಿಟ್ಟಗೌಡನಹಳ್ಳಿ, ಆಲೂರು ತಾಲ್ಲೂಕು ಅಧ್ಯಕ್ಷ ಮಲ್ಲೇಶ್, ಪ್ರಧಾನ ಕಾರ್ಯದರ್ಶಿ ದಿನೇಶ್, ದೀಪು, ಲಕ್ಷ್ಮಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.