ADVERTISEMENT

ಕಿಕ್ಕೇರಮ್ಮಕೊತ್ತಲು ನಿವಾಸಿಗಳಿಗೆ ಶೀಘ್ರ ಹಕ್ಕುಪತ್ರ: ಶಾಸಕ ಎಚ್‌.ಡಿ. ರೇವಣ್ಣ

​ಪ್ರಜಾವಾಣಿ ವಾರ್ತೆ
Published 30 ಜನವರಿ 2025, 13:52 IST
Last Updated 30 ಜನವರಿ 2025, 13:52 IST
ಎಚ್‌.ಡಿ.ರೇವಣ್ಣ
ಎಚ್‌.ಡಿ.ರೇವಣ್ಣ   

ಹೊಳೆನರಸೀಪುರ: ಪುರಸಭೆ ಮಾಜಿ ಅಧ್ಯಕ್ಷ ದಿವಂಗತ ಎಚ್.ಸಿ. ಸಿಂಗ್ರೀಗೌಡರು ಬಡವರಿಗೆ ನೀಡಿದ್ದ ಪಟ್ಟಣದ ಕಿಕ್ಕೇರಮ್ಮನಕೊತ್ತಲು ಬಡಾವಣೆ ನಿವೇಶನಗಳಲ್ಲಿ ಮನೆ ಕಟ್ಟಿಕೊಂಡಿದ್ದವರಿಗೆ ಇನ್ನೆರಡು ತಿಂಗಳಲ್ಲಿ ಎಲ್ಲ ಪ್ರಕ್ರಿಯೆ ಪೂರೈಸಿ ಹಕ್ಕಪತ್ರ ನೀಡಲಾಗುವುದು ಎಂದು ಶಾಸಕ ಎಚ್.ಡಿ. ರೇವಣ್ಣ ತಿಳಿಸಿದರು. 

ಗುರುವಾರ ಪುರಸಭೆ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಈ ಹಿಂದೆ ಕೆಲ ನಾಯಕರು ಸರ್ಕಾರಕ್ಕೆ ಆಕ್ಷೇಪಣಾ ಪತ್ರ ನೀಡಿದ್ದರಿಂದ ಹಕ್ಕುಪತ್ರ ವಿತರಣೆ ಸಾಧ್ಯ ಆಗಿರಲಿಲ್ಲ. ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಈ ಬಡಾವಣೆಗಳನ್ನು ಕೊಳಚೆ ನಿರ್ಮೂಲನಾ ಮಂಡಳಿಗೆ ಸೇರಿಸಿದ್ದು, 92 ಸಿ ಪ್ರಕಾರ ಕೊಳಚೆ ನಿರ್ಮೂಲನಾ ಮಂಡಳಿ ಹಾಗೂ ಪುರಸಭೆಯವರು ಈ ಜಾಗವನ್ನು ಮಂಡಳಿಗೆ ನೋಂದಾಯಿಸಿ, ಅಲ್ಲಿದ್ದ ಮನೆಗಳ ಮಾಲೀಕರಿಗೆ ಹಕ್ಕುಪತ್ರ ವಿತರಣೆಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು.

ನಾನು ವಸತಿ ಸಚಿವನಾಗಿದ್ದಾಗ ಆಶ್ರಯ ಬಡಾವಣೆ ಯೋಜನೆಯಲ್ಲಿ 1,500 ಮನೆ ಹಾಗೂ ಕೊಳಚೆ ನಿರ್ಮೂಲನಾ ಮಂಡಳಿಯಿಂದ 500 ಮನೆಗಳನ್ನು ನೀಡಲಾಗಿತ್ತು. ಈಗ ಮತ್ತೆ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ 1ಸಾವಿರ ಮನೆಗಳನ್ನು ನೀಡಲಾಗುತ್ತಿದ್ದು, ಈಗಾಗಲೇ ಅಂಬೇಡ್ಕರ್‌ನಗರ ಹಾಗೂ ಎ.ಡಿ. ಕಾಲೊನಿಗೆ 400 ಮನೆಗಳನ್ನು ನೀಡಲಾಗಿದೆ ಎಂದರು.

ADVERTISEMENT

ಹೊಸ ಆದೇಶದಂತೆ ನಿವೇಶನ ಇರುವವರಿಗೆ ಮನೆ ಕಟ್ಟಿಕೊಳ್ಳಲು ಮಂಡಳಿ ಹಣ ಸಹಾಯ ನೀಡುತ್ತಿದೆ. ಇದರಲ್ಲಿ ನಿವೇಶನ ಮಾಲೀಕರು ₹1 ಲಕ್ಷ ಪಾವತಿಸಿದರೆ, ಮಂಡಳಿ ಮನೆ ಕಟ್ಟಿಕೊಳ್ಳಲು ₹6 ಲಕ್ಷ ನೀಡುತ್ತದೆ ಎಂದರು.

ಪಟ್ಟಣದ ಹಾಸನ– ಮೈಸೂರು ರಸ್ತೆಯ ಚೆನ್ನಾಂಬಿಕ ವೃತ್ತದಿಂದ ಕನಕ ಭವನದವರೆಗೆ ₹29 ಕೋಟಿ ವೆಚ್ಚದಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಾಣ ಕಾರ್ಯ ಈಗಾಗಲೇ ಪ್ರಾರಂಭವಾಗಿದೆ. ಈ ರಸ್ತೆ ನಿರ್ಮಾಣ ಸಮಯದಲ್ಲಿ ಒತ್ತುವರಿ ಬಿಟ್ಟು, ಮನೆಗಳನ್ನಾಗಲಿ, ಅಂಗಡಿ–ಮಳಿಗೆಗಳನ್ನಾಗಲಿ ಒಡೆಯುವುದಿಲ್ಲ ಎಂದರು.

ಸರ್ಕಾರಿ ಆಸ್ಪತ್ರೆ ಕಾಂಪೌಂಡ್‍ ಒಳಗೆ ಇರುವ ಚಿಕ್ಕಮ್ಮ, ದೊಡ್ಡಮ್ಮ ದೇವಾಲಯ ನಿರ್ಮಾಣಕ್ಕೆ ಚಾಲನೆ ನೀಡಿದ್ದೇನೆ. ಈ ದೇವಸ್ಥಾನ ನಿರ್ಮಾಣಕ್ಕೆ ಬೇಕಾದ ಕಲ್ಲು ತರಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ನಿರ್ಮಾಣಕ್ಕೆ ₹9.5 ಲಕ್ಷ ನಿಗದಿ ಪಡಿಸಲಾಗಿದೆ. ವಾರದಲ್ಲಿ ನಿರ್ಮಾಣ ಮಾಡುವ ಶಿಲ್ಪಿಗಳು ಬರುತ್ತಿದ್ದು, ಅದಕ್ಕೆ ಮುನ್ನ ದೇವರನ್ನು ಕಳಶಾಕರ್ಷಣೆ ಮಾಡಿಸಿ, ಪೂಜಾ ವಿಧಿ ವಿಧಾನಗಳನ್ನು ಪೂರ್ಣಗೊಳಿಸಿ ಎಂದು ಸ್ಥಳದಲ್ಲಿದ್ದ ಗಾಂಧಿನಗರ ನಿವಾಸಿಗಳಿಗೆ ಸೂಚಿಸಿದರು.

ಇನ್ನೊಂದು ವಾರದಲ್ಲಿ ದೇವಾಲಯ ತೆರವುಗೊಳಿಸಲು ಪೂಜಾವಿಧಿ ವಿಧಾನಗಳನ್ನು ಪೂರ್ಣಗೊಳಿಸದಿದ್ದರೆ, ನಿರ್ಮಾಣ ಕಾರ್ಯ ವಿಳಂಬವಾಗಬಹುದು ಎಂದರು.

ಪುರಸಭಾಧ್ಯಕ್ಷ ಕೆ. ಶ್ರೀಧರ್, ಪುರಸಭೆ ಮುಖ್ಯಾಧಿಕಾರಿ ಶಿವಕುಮಾರ್, ಕಂದಾಯಾಧಿಕಾರಿ ನಾಗೇಂದ್ರಕುಮಾರ್. ರಮೇಶ್, ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.