
ಪ್ರಜಾವಾಣಿ ವಾರ್ತೆ
ಹಳೇಬೀಡು: ‘ಹೆಣ್ಣು ಮಕ್ಕಳನ್ನು ಭ್ರೂಣದಲ್ಲಿಯೇ ಹತ್ಯೆ ಮಾಡುವುದು ಮಹಾ ಅಪರಾಧವಾಗಿದೆ. ಭ್ರೂಣಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆಗಳಿವೆ’ ಎಂದು ಹಿರಿಯ ವಕೀಲ ಪುಟ್ಟಸ್ವಾಮೀಗೌಡ ಹೇಳಿದರು.
ಹಳೇಬೀಡಿನ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲಾ ವಿಭಾಗದಲ್ಲಿ ಶುಕ್ರವಾರ ನಡೆದ ಮಿಷನ್ ಶಕ್ತಿ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಹೆಣ್ಣು ಮಕ್ಕಳ ಬಗ್ಗೆ ಅಸಡ್ಡೆ ಮಾಡುವ ಅಗತ್ಯವಿಲ್ಲ. ಹೆಣ್ಣುಮಕ್ಕಳು ಈಗ ಸಾಧನೆಯ ಶಿಖರದಲ್ಲಿದ್ದಾರೆ. ಸಮಾಜದಲ್ಲಿ ಬೆಳಗುವಂತಹ ಪ್ರತಿಭೆಗಳನ್ನು ಭ್ರೂಣದಲ್ಲಿಯೇ ಚಿವುಟುವ ಕೆಲಸಕ್ಕೆ ಯಾರು ಕೈ ಹಾಕಬಾರದು. ಶಾಲಾ, ಕಾಲೇಜುಗಳಲ್ಲಿ ಶಿಕ್ಷಕಿಯರ ಸಂಖ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಕಚೇರಿಗಳಲ್ಲಿಯೂ ಮಹಿಳಾ ಉದ್ಯೋಗಿಗಳ ದಕ್ಷತೆಯ ಕಾರ್ಯ ಕಂಡು ಬರುತ್ತದೆ. ಸೇನೆ ಸೇರಿ ದೇಶ ಸೇವೆ ಮಾಡುವುದರಲ್ಲಿಯೂ ಹೆಣ್ಣಿನ ಸಾಮರ್ಥ್ಯ ಕಂಡು ಬರುತ್ತಿದೆ. ಯುಪಿಎಸ್ಸಿಯಲ್ಲಿಯೂ ಹೆಣ್ಣು ಮಕ್ಕಳು ಸಾಧನೆ ಮಾಡುತ್ತಿದ್ದಾರೆ. ಹೆಣ್ಣಿಗೆ ಸಮಾಜದಲ್ಲಿ ಉನ್ನತ ಸ್ಥಾನಮಾನ ದೊರಕುತ್ತಿದೆ. ಹೆಣ್ಣನ್ನು ತಾತ್ಸರ ಮಾಡುವುದು ಸಮಂಜಸವಲ್ಲ’ ಎಂದು ಹೇಳಿದರು.
ಪ್ರಭಾರ ಉಪ ಪ್ರಾಂಶುಪಾಲ ಮೋಹನರಾಜು ಮಾತನಾಡಿ, ‘ಸರ್ಕಾರ ಮಹಿಳೆಯರ ಹಾಗೂ ಮಕ್ಕಳ ಶ್ರೇಯೋಬಿವೃದ್ಧಿಗಾಗಿ ಹಲವಾರು ಕಾರ್ಯಕ್ರಮ ರೂಪಿಸಿದೆ. ಪ್ರಾಚೀನ ಕಾಲದಿಂದ ಮಹಿಳೆಯನ್ನು ದೈವಿ ಸ್ವರೂಪದಲ್ಲಿ ಕಾಣುತ್ತಿದ್ದಾರೆ. ಮಹಿಳೆ ದಿಟ್ಟ ಹೆಜ್ಜೆ ಇಡುತ್ತಿದ್ದಾಳೆ ಎಂಬುದನ್ನು ಜನರ ಮನಗಾಣಬೇಕು. ಹೆಣ್ಣು ಮಕ್ಕಳ ಸಾಧನೆಗೆ ಪೋಷಕರು ಪ್ರೋತ್ಸಾಹ ನೀಡಬೇಕು. ಜೊತೆಗೆ ಸುರಕ್ಷತೆಯ ಕಡೆಗೂ ಗಮನ ಹರಿಸಬೇಕು’ ಎಂದರು.
ತಂಬಾಕು ನಿಯಂತ್ರಣ ಕಾರ್ಯಕ್ರಮದ ಸಂಯೋಜಕಿ ವಿಮಲಾ, ಆಶಾ ಕಾರ್ಯಕರ್ತೆ ಎಚ್.ಆರ್.ಪುಷ್ಪಾ, ಶಿಕ್ಷಕ ಶಶಿಧರ ಪಾಲ್ಗೊಂಡಿದ್ದರು.
ಮಕ್ಕಳು ಹಾಲು ಸೇವನೆಗೆ ನಿರ್ಲಕ್ಷ್ಯ ತೋರಿಸಬಾರಾದು. ಪೌಷ್ಟಿಕ ಆಹಾರವಾದ ಹಾಲು ಸೇವಿಸುವುದರಿಂದ ಮೂಳೆ ಗಟ್ಟಿಯಾಗುವುದರೊಂದಿಗೆ ಆರೋಗ್ಯವಾಗಿರಬಹುದು. ಬುದ್ಧಿಶಕ್ತಿಯೂ ಬೆಳೆಯುತ್ತದೆರೇಖಾ ಹಳೇಬೀಡು ಸರ್ಕಾರಿ ಆಸ್ಪತ್ರೆ ಆಪ್ತಸಮಾಲೋಚಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.