
ಹಾಸನ: ನಗರದ ಬಿ.ಎಂ. ರಸ್ತೆಯಲ್ಲಿನ ಆಡುವಳ್ಳಿ ಗ್ರಾಮದ ಆದಿದೇವತೆ ಉಡುಸಲಮ್ಮ (ಗಂಗಾಪರಮೇಶ್ವರಿ), ಮಾರಿಕಾಂಬ (ಉಡುಸಲಮ್ಮ), ವೀರಭದ್ರೇಶ್ವರ, ಕರಿಬೀರೇಶ್ವರ ಹಾಗೂ ಶನಿದೇವರ ದೇವಾಲಯದಲ್ಲಿ 48ನೇ ವರ್ಷದ ಜಾತ್ರಾ ಮಹೋತ್ಸವವು ಭಕ್ತಿ, ಶ್ರದ್ಧೆ ಹಾಗೂ ಸಂಪ್ರದಾಯಬದ್ಧವಾಗಿ ನಡೆಯಿತು. ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.
ಜಾತ್ರಾ ಆಚರಣಾ ಸಮಿತಿ ಅಧ್ಯಕ್ಷ ಅಶೋಕ್ ಮಾತನಾಡಿ, ‘ಬುಧವಾರ ಬೆಳಿಗ್ಗೆ ಮಾರಿಕಾಂಬೆಯ ಮೂಲಸ್ಥಾನದಲ್ಲಿ ಅಭಿಷೇಕ ನಡೆಯಿತು. ಮಧ್ಯಾಹ್ನ ಮಹಾಮಂಗಳಾರತಿ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು. ಎಚ್.ಡಿ. ದೇವರಾಜು ಅವರ ಸ್ಮರಣಾರ್ಥ ಅವರ ಮಕ್ಕಳು ಹಾಗೂ ಸಹೋದರರು ಆಯೋಜಿಸಿದ್ದರು ಎಂದು ತಿಳಿಸಿದರು.
ಸಂಜೆ 6ಕ್ಕೆ ದೇವಿಗೆರೆಯಿಂದ ಗಂಗಾಕಳಸದೊಂದಿಗೆ ಗಂಗಾಮತಸ್ಥರ ಬೀದಿಯಲ್ಲಿರುವ ದೇವಾಲಯಕ್ಕೆ ಆಗಮನವಾಗಿದ್ದು, ಗುರುವಾರ ಬೆಳಿಗ್ಗೆ 5ರಿಂದ 7.30ರವರೆಗೆ ದುರ್ಗಾ ಹೋಮ. ಬೆಳಿಗ್ಗೆ 9 ಗಂಟೆಗೆ ಗಂಗಾಮತಸ್ಥರ ಬೀದಿಯಿಂದ ಗಂಗಾಮತಸ್ಥರು, ಆಡುವಳ್ಳಿ ಗ್ರಾಮಸ್ಥರು ಹಾಗೂ ಭಕ್ತಾದಿಗಳಿಂದ ತಂಬಿಟ್ಟಿನ ಆರತಿ ಮತ್ತು ನಿಂಬೆಹಣ್ಣಿನ ದೀಪದೊಂದಿಗೆ ಅಮ್ಮನವರ ಉತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು ಎಂದರು.
ಜ.16ರಂದು ರಾತ್ರಿ 8ಕ್ಕೆ ರಥೋತ್ಸವದೊಂದಿಗೆ ಅಮ್ಮನವರ ಭವ್ಯ ಮೆರವಣಿಗೆ ನಡೆಯಲಿದ್ದು, ಕೀಲು ಕುಣಿತ, ವೀರಭದ್ರ ಕುಣಿತ ಹಾಗೂ ಪೂಜಾ ಕುಣಿತ ಇರಲಿದೆ. ಈ ಉತ್ಸವವನ್ನು ಕ್ಷೇತ್ರದ ಶಾಸಕ ಸ್ವರೂಪ್ ಪ್ರಕಾಶ್ ಉದ್ಘಾಟಿಸಲಿದ್ದಾರೆ.
ಜ.17ರಂದು ಸಂಜೆ 7 ಗಂಟೆಗೆ ಗಂಗಾಮತಸ್ಥರ ಬೀದಿಯಲ್ಲಿರುವ ದೇವಮ್ಮ ದೇವಸ್ಥಾನದ ಸುತ್ತಲು ಬೇವಿನ ಉಡಿಗೆ ಉತ್ಸವ ನಡೆಯಲಿದೆ. ಜ.20ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ ವಸಂತ ಓಕಳಿ ಕಾರ್ಯಕ್ರಮ ಜರುಗಲಿದೆ. ಈ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಭಕ್ತ ಮಂಡಳಿ ವಿನಂತಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.