ADVERTISEMENT

ಕ್ಷೇತ್ರ ವಿಂಗಡಣೆಯಲ್ಲಿ ಬದಲಾವಣೆ ಮಾಡಿದರೆ ಹೋರಾಟ

ಕಾಂಗ್ರೆಸ್ ಮುಖಂಡ ದೇವರಾಜೇಗೌಡ ಆಗ್ರಹ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2021, 12:48 IST
Last Updated 31 ಮಾರ್ಚ್ 2021, 12:48 IST
ದೇವರಾಜೇಗೌಡ
ದೇವರಾಜೇಗೌಡ   

ಹಾಸನ: ಕಟ್ಟಾಯ ಜಿಲ್ಲಾ ಪಂಚಾಯಿತಿ ಕ್ಷೇತ್ರ ಮರುವಿಂಗಡಣೆ ಸಮರ್ಪಕವಾಗಿದ್ದರೂ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ಮುಖಂಡ ದೇವರಾಜೇಗೌಡ ಹೇಳಿದರು.

ಭೌಗೋಳಿಕ ಹಾಗೂ ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರ ವಿಂಗಡಣೆ ಮಾಡಲಾಗಿದೆ. ಅಧಿಕಾರಿಗಳು ಯಾವುದೇ
ಬೆದರಿಕೆಗೆ ಹೆದರದೆ ಕೆಲಸ ಮಾಡಬೇಕು. ಒಂದು ವೇಳೆ ಯಾರದೋ ಒತ್ತಡಕ್ಕೆ ಮಣಿದು ಕ್ಷೇತ್ರ ವಿಂಗಡಣೆಯಲ್ಲಿ
ಬದಲಾವಣೆ ಮಾಡಿದರೆ ಕಾಂಗ್ರೆಸ್‍ನಿಂದ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಬುಧವಾರ
ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ಕಟ್ಟಾಯ ಹೋಬಳಿಯಲ್ಲಿ 7 ಗ್ರಾಮ ಪಂಚಾಯಿತಿಗಳಿದ್ದು, 3 ರಂತೆ ಎರಡು ತಾಲ್ಲೂಕು ಪಂಚಾಯಿತಿ
ಕ್ಷೇತ್ರಗಳನ್ನಾಗಿ ವಿಂಗಡಿಸಲಾಗಿದೆ. ಉಳಿದ ಚನ್ನಂಗಿಹಳ್ಳಿ ಗ್ರಾಮ ಪಂಚಾಯಿತಿಯನ್ನು ಮೊಸಳೆಹೊಸಹಳ್ಳಿ ಜಿಲ್ಲಾ
ಪಂಚಾಯಿತಿ ಕ್ಷೇತ್ರಕ್ಕೆ ಸೇರಿಸಿರುವುದು ಮಾತ್ರ ತಪ್ಪಾಗಿದೆ. ಜಿಲ್ಲಾಡಳಿತ ವೈಜ್ಞಾನಿಕವಾಗಿಯೇ ಈ ನಿರ್ಧಾರ
ಕೈಗೊಂಡಿದೆ. ಆದರೆ, ಜೆಡಿಎಸ್ ನಾಯಕರು ಸ್ವಾರ್ಥ ಲಾಭಕ್ಕಾಗಿ ಪ್ರತಿಭಟನೆ ನಡೆಸಿದ್ದಾರೆ ಎಂದು
ಆರೋಪಿಸಿದರು.

ADVERTISEMENT

ಕಟ್ಟಾಯ ಹೋಬಳಿ ಕುರಿತು ಕಾಳಜಿ ಇದ್ದಿದ್ದರೆ ಹಾಸನ ವಿಧಾನಸಭಾ ಕ್ಷೇತ್ರದಿಂದ ಬೇರ್ಪಡಿಸಿ ಸಕಲೇಶಪುರ ಕ್ಷೇತ್ರಕ್ಕೆ ಸೇರಿಸಲು ಬಿಡುತ್ತಿರಲಿಲ್ಲ. ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಎಚ್.ಕೆ. ಕುಮಾರಸ್ವಾಮಿ ಹೋಬಳಿ ಅಭಿವೃದ್ಧಿಗೆ ಏನನ್ನೂ ಮಾಡಿಲ್ಲ. ಕಟ್ಟಾಯ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಗ್ರಾಮಗಳ ಕೈ ಬಿಟ್ಟಿರುವ ಕುರಿತು ಸುತ್ತಲಿನ ಯಾವ ಗ್ರಾಮಸ್ಥರು ಅಪಸ್ವರ ಎತ್ತಿಲ್ಲ. ಬದಲಾಗಿ ದುದ್ದ ಹಾಗೂ ಶಾಂತಿಗ್ರಾಮ ಜೆಡಿಎಸ್ ಕಾರ್ಯಕರ್ತರದಿಂದ ಪ್ರತಿಭಟನೆ ಮಾಡಿಸಲಾಗಿದೆ ಎಂದು ಟೀಕಿಸಿದರು.

ಶಂಕರನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಂತಿ, ಕುಮಾರಶೆಟ್ಟಿ, ದೇವಪ್ಪ ಮಲ್ಲಿಗೆವಾಳು, ಸ್ವಾಮಿಗೌಡ
ದೇವಿಹಳ್ಳಿ ಹಾಗೂ ಲೋಹಿತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.