ADVERTISEMENT

ಜೆಡಿಎಸ್–ಬಿಜೆಪಿ ಘರ್ಷಣೆ: ಸೂರಜ್‌ ರೇವಣ್ಣ ಸೇರಿ 7 ಮಂದಿ ವಿರುದ್ಧ ಎಫ್‌ಐಆರ್‌

ಬಿಬಿಎಂಪಿ ಸದಸ್ಯ ಸೇರಿ ಐವರ ಮೇಲೆ ಹಲ್ಲೆ ಆರೋಪ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2019, 13:09 IST
Last Updated 4 ಡಿಸೆಂಬರ್ 2019, 13:09 IST
   

ಹಾಸನ: ಮತದಾನಕ್ಕೂ ಮುನ್ನ ಹಣ ಹಂಚಿಕೆ‌ ಆರೋಪ ಹಿನ್ನೆಲೆಯಲ್ಲಿ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ನಡುವೆ ಚನ್ನರಾಯಪಟ್ಟಣ ತಾಲ್ಲೂಕಿನ ನಂಬಿಗಹಳ್ಳಿಯಲ್ಲಿ ಮಂಗಳವಾರ ಮಧ್ಯರಾತ್ರಿ ಘರ್ಷಣೆ ನಡೆದಿದ್ದು, ಘಟನೆ ಸಂಬಂಧಿಸಿದಂತೆ ಶಾಸಕ ಎಚ್.ಡಿ.ರೇವಣ್ಣ ಅವರ ಹಿರಿಯ ಪುತ್ರ ಡಾ.ಸೂರಜ್ ರೇವಣ್ಣ ಸೇರಿದಂತೆ ಏಳು ಮಂದಿ ಗ್ರಾಮಾಂತರ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ.

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಬಿಜೆಪಿ ಸದಸ್ಯ ಆನಂದ್ ಹೊಸೂರು, ಬೆಂಗಳೂರು ವಿಜಯನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನವೀನ್, ಕಾರು ಚಾಲಕ ಪ್ರವೀಣ್, ಸ್ಥಳೀಯರಾದ ಶಿವಾನಂದ್‌ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೆ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎರಡು ಕಾರುಗಳು ಜಖಂಗೊಂಡಿವೆ.

ಸದ್ಯ ಪರಿಸ್ಥಿತಿ ಶಾಂತವಾಗಿದ್ದು, ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ. ಪೊಲೀಸ್‌ ವರಿಷ್ಠಾಧಿಕಾರಿ ರಾಮ್‌ ನಿವಾಸ್‌ ಸೆಪಟ್‌, ದಕ್ಷಿಣ ವಲಯ ಐಜಿಪಿ ವಿಪುಲ್‌ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ADVERTISEMENT

‘ತೋಟದ ಮನೆಗೆ ಮಂಗಳವಾರ ರಾತ್ರಿ ಜೆಡಿಎಸ್ ಕಾರ್ಯಕರ್ತರು ನುಗ್ಗಿ ಐವರ ಮೇಲೆ ಹಲ್ಲೆ ನಡೆಸಿತು. ಯುವಕರು ಮನೆಗೆ ನುಗ್ಗಿದ ಸಂದರ್ಭದಲ್ಲಿ ಹೊರಗೆ ಜೆಡಿಎಸ್ ಯುವ ಮುಖಂಡ ಡಾ. ಸೂರಜ್ ರೇವಣ್ಣ ನಿಂತಿದ್ದರು. ಅವರ ಅಣತಿಯಂತೆ ಹಲ್ಲೆ ನಡೆದಿದೆ’ ಎಂದು ಗಾಯಾಳು ಸಂತೋಷ್ ತಿಳಿಸಿದರು.

‘ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಪೊಲೀಸರ ಮೂಲಕವೇ ಹಣ ಹಂಚಿಸಲಾಗುತ್ತಿದೆ. ಇದಲ್ಲದೇ ರಾಜ್ಯದಉಪಮುಖ್ಯಮಂತ್ರಿ ಸಿ.ಎನ್‌.ಅಶ್ವತ್ಥ ನಾರಾಯಣ ಅವರೇ ಹಣ ಹಂಚಿಸುತ್ತಿದ್ದಾರೆ. ನನ್ನ ಮಗ ಸ್ಥಳದಲ್ಲಿ ಇಲ್ಲದಿದ್ದರೂ ಅವರನ್ನೇ ಎ-1 ಆರೋಪಿ ಮಾಡಲಾಗಿದೆ. ಇದನ್ನು ಖಂಡಿಸಿ ಹಾಸನದ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಎದುರು ಶುಕ್ರವಾರ ಧರಣಿ ಮಾಡುತ್ತೇವೆ. ದಕ್ಷಿಣ ವಲಯ ಐಜಿಪಿ ಬರುವವರೆಗೆ ಧರಣಿ‌ ಮಾಡಲಾಗುವುದು’ ಎಂದು ಶಾಸಕ ಎಚ್‌.ಡಿ.ರೇವಣ್ಣ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.