ADVERTISEMENT

ಅರಸೀಕೆರೆ | ಬೆಂಕಿ ಅವಘಡ: 5 ಹಸು, ಕರು, ಅಪಾರ ಕೊಬ್ಬರಿ ಭಸ್ಮ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2025, 13:22 IST
Last Updated 23 ಫೆಬ್ರುವರಿ 2025, 13:22 IST
ಅರಸೀಕೆರೆ ತಾಲ್ಲೂಕಿನ ಜಾಜೂರು ಗ್ರಾಮದ ಶಿವಣ್ಣ ಎಂಬುವರ ತೋಟದ ಮನೆಗೆ ಆಕಸ್ಮಿಕ ಬೆಂಕಿ ತಗುಲಿ 5 ಹಸುಗಳು 1 ಕರು ಹಾಗೂ ಅಪಾರ ಪ್ರಮಾಣದ ಕೊಬ್ಬರಿ ಸುಟ್ಟು ಕರಲಾಗಿದೆ
ಅರಸೀಕೆರೆ ತಾಲ್ಲೂಕಿನ ಜಾಜೂರು ಗ್ರಾಮದ ಶಿವಣ್ಣ ಎಂಬುವರ ತೋಟದ ಮನೆಗೆ ಆಕಸ್ಮಿಕ ಬೆಂಕಿ ತಗುಲಿ 5 ಹಸುಗಳು 1 ಕರು ಹಾಗೂ ಅಪಾರ ಪ್ರಮಾಣದ ಕೊಬ್ಬರಿ ಸುಟ್ಟು ಕರಲಾಗಿದೆ   

ಅರಸೀಕೆರೆ: ನಗರದ ಹೊರವಲಯದ ಜಾಜೂರು ಗ್ರಾಮದ ಶಿವಣ್ಣ ಎಂಬುವರ ತೋಟದ ಮನೆಯಲ್ಲಿ ಶನಿವಾರ ತಡರಾತ್ರಿ ಆಕಸ್ಮಿಕವಾಗಿ ಬೆಂಕಿ ತಗುಲಿ ಐದು ಹಸು, ಒಂದು ಕರು ಮೃತಪಟ್ಟಿದ್ದು ಹಾಗೂ ಅಪಾರ ಪ್ರಮಾಣದ ಕೊಬ್ಬರಿ ಸಂಪೂರ್ಣ ಸುಟ್ಟು ಕರಕಲಾಗಿದೆ.

ಜಾಜೂರು ಗ್ರಾ.ಪಂ. ವ್ಯಾಪ್ತಿಯ ಹೆಂಜಗೊಂಡನಹಳ್ಳಿ ಸಮೀಪದ ತೋಟವಿದ್ದು, ಶಿವಣ್ಣ ಎಂದಿನಂತೆ ತೋಟದ ಮನೆಯಲ್ಲಿ ಶನಿವಾರ ರಾತ್ರಿ ಹಾಲು ಕರೆದುಕೊಂಡು 8 ಗಂಟೆ ಸುಮಾರಿನಲ್ಲಿ ಬೀಗ ಹಾಕಿಕೊಂಡು ಮನೆಗೆ ಬಂದಿದ್ದಾರೆ. ಬೆಳಿಗ್ಗೆ ತೋಟದ ಮನೆಗೆ ಬಂದಾಗ ಬೆಂಕಿಯ ಪರಿಸ್ಥಿತಿ ಕಂಡು ಬೆಚ್ಚಿಬಿದ್ದಿದ್ದಾರೆ.

ತೋಟದ ಮನೆಯ ಅಟ್ಟದ ಮೇಲೆ ಸುಮಾರು 15 ಸಾವಿರ ಕೊಬ್ಬರಿ, 10 ಸಾವಿರ ತೆಂಗಿನಕಾಯಿಗಳು ಇದ್ದಿದ್ದರಿಂದ ಬೆಂಕಿ ಸಂಪೂರ್ಣವಾಗಿ ಮನೆಗೆ ಆವರಿಸಿಕೊಂಡು ಅಂದಾಜು ₹ 20 ಲಕ್ಷ ನಷ್ಟವಾಗಿದೆ ಎನ್ನಲಾಗಿದೆ.

ADVERTISEMENT

ಸ್ಥಳಕ್ಕೆ ಶಾಸಕ ಕೆ.ಎಂ.ಶಿವಲಿಂಗೇಗೌಡ, ಪಶುಸಂಗೋಪನಾ ಇಲಾಖೆ, ಪೊಲೀಸ್‌ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳು ಬಂದು  ಪರಿಶೀಲಿಸಿದರು.

‘ರೈತ ಶಿವಣ್ಣನಿಗೆ ಅಪಾರ ಪ್ರಮಾಣದ ನಷ್ಟವಾಗಿದೆ. ಪಶುಸಂಗೋಪನಾ ಇಲಾಖೆಯಿಂದ ತಲಾ ಒಂದು ಹಸುಗೆ ₹ 10 ಸಾವಿರ ನೀಡಬಹುದು. ಆದ್ದರಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮತ್ತಷ್ಟು ಪರಿಹಾರ ಕೊಡಿಸುತ್ತೇನೆ. ಬೇಸಿಗೆ ಸಮೀಪಿಸುತ್ತಿದ್ದು ರೈತರು ಬಹಳ ಎಚ್ಚರಿಕೆಯಿಂದ ಇರಬೇಕು’ ಎಂದು ಶಾಸಕ ಶಿವಲಿಂಗೇಗೌಡ ಹೇಳಿದರು.

‘ಹಲವು ಕಾರಣಗಳಿಗೆ ಅವಘಡ ಸಂಭವಿಸುತ್ತಿದ್ದು, ಜೀವನೋಪಾಯಕ್ಕೆ ಕಟ್ಟಿಕೊಂಡ ಹಸುಗಳು ಸತ್ತು ಹೋಗಿವೆ. ಹೀಗಾದರೆ ರೈತ ಪರಿಸ್ಥಿತಿ ಏನು? ಶಾಸಕರು ಮುತವರ್ಜಿ ವಹಿಸಿ ಸರ್ಕಾರದಿಂದ ಹೆಚ್ಚಿನ ಪರಿಹಾರ ಕೊಡಿಸಿ ರೈತ ಕುಟುಂಬವನ್ನು ಉಳಿಸಬೇಕು’ ಎಂದು ಜಾಜೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಿದ್ದೇಶ್‌ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.