ಹಾಸನ: ಜಿಲ್ಲೆಯಲ್ಲಿ ಸುಮಾರು 36 ಪ್ರದೇಶಗಳು, ಮೀಸಲು ಅರಣ್ಯ ರಕ್ಷಣೆ ವ್ಯಾಪ್ತಿಗೆ ಬರುತ್ತವೆ. ನೂರಾರು ವರ್ಷ ಕಳೆದರೂ ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಎಐಸಿಸಿ ಸದಸ್ಯ ಬಿ.ಶಿವರಾಂ ಅಸಮಾಧಾನ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘1928 ಮಾರ್ಚ್ 31ರ ರಾಜ್ಯ ಪತ್ರದ ಅನ್ವಯ, ಅರಣ್ಯ ಇಲಾಖೆ 2022 ರ ಡಿಸೆಂಬರ್ 30ರಂದು ಕರ್ನಾಟಕ ಅರಣ್ಯ ಇಲಾಖೆ ಅರಣ್ಯ ಅಧಿನಿಯಮ 1963ರ ಐದನೇ ಪ್ರಕರಣದ ಪ್ರಕಾರ ಘೋಷಣೆ ಹೊರಡಿಸಿದೆ. ಕೆಲ ಅರಣ್ಯ ಪ್ರದೇಶವನ್ನು ಅರಣ್ಯ ವ್ಯವಸ್ಥಾಪನಾಧಿಕಾರಿ ಮೂಲಕ ಸರ್ವೆ ನಡೆಸಿ. ವಶಕ್ಕೆ ಪಡೆಯಲು ಸೂಚನೆ ನೀಡಲಾಗಿತ್ತು. ಈ ಸಂಬಂಧ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೂ ಪತ್ರ ವ್ಯವಹಾರ ನಡೆದಿದೆ’ ಎಂದರು.
‘ಅರಸೀಕೆರೆ ತಾಲ್ಲೂಕಿನ ಅತ್ತಿಗುಡ್ಡ ಕಾವಲ್ ಮತ್ತು ನೀಲಗಿರಿ ಕಾವಲು ಪ್ರದೇಶಗಳಿಗೆ ಉದ್ಘೋಷಣೆ ವತಯಾರಿಸಲಾಗಿದೆ. ನೀಲಗಿರಿ ಕಾವಲಿನಲ್ಲಿ ಸುಮಾರು 1,600ಕ್ಕೂ ಹೆಚ್ಚು ರೈತರು ಹಾಗೂ ಅತ್ತಿಗುಡ್ಡ ಕಾವಲ್‌ನಲ್ಲಿ 300ಕ್ಕೂ ಹೆಚ್ಚು ರೈತರು ಅತಿಕ್ರಮಣ ಮಾಡಿರುವ ಬಗ್ಗೆ ಮಾಹಿತಿ ಕೊಡಲಾಗಿದೆ. ಇದುವರೆಗೂ ವ್ಯವಸ್ಥಾಪನಾಧಿಕಾರಿ ಕೇವಲ ನೋಟಿಸ್ ನೀಡಿ, ರೈತರಿಗೆ ಹಾಗೂ ಭೂ ಹಿಡುವಳಿದಾರರಿಗೆ ಬೆದರಿಕೆ ಹಾಕುತ್ತಿದ್ದಾರೆಯೇ ಹೊರತು ಸ್ಥಳ ಪರಿಶೀಲನೆ ನಡೆಸಿ ವಸ್ತು ಸ್ಥಿತಿ ಅರಿಯುತ್ತಿಲ್ಲ. ಇದರಿಂದ ಅರಣ್ಯ ರಕ್ಷಣೆ ಹಾಗೂ ಸಾರ್ವಜನಿಕರ ಹಿತವನ್ನೂ ಕಾಪಾಡುತ್ತಿಲ್ಲ’ ಎಂದು ದೂರಿದರು.
‘ಜಿಲ್ಲೆಯಲ್ಲಿ ಸುಮಾರು 36 ಪ್ರದೇಶಗಳಿಂದ 50 ಸಾವಿರ ಎಕರೆಯಷ್ಟು ಭೂಮಿ ಮೀಸಲು ಅರಣ್ಯ ವ್ಯಾಪ್ತಿಗೆ ಬರುತ್ತದೆ. ಇದರಲ್ಲಿ 40ಸಾವಿರಕ್ಕೂ ಹೆಚ್ಚು ಕುಟುಂಬಗಳು ಒತ್ತುವರಿ ಮಾಡಿರುವ ಬಗ್ಗೆ ಅಂದಾಜಿಸಲಾಗಿದೆ. ಈ ಕುರಿತು ಅಧಿಕಾರಿಗಳಾಗಲಿ, ಕೆಡಿಪಿ ಸಭೆಗಳಲ್ಲಿ ಜನಪ್ರತಿನಿಧಿಗಳಾಗಲಿ, ಉಸ್ತುವಾರಿ ಸಚಿವರಾಗಲಿ ಮಾತನಾಡದೇ ಇರುವುದು ದುರದೃಷ್ಟಕರ’ ಎಂದು ಆರೋಪಿಸಿದರು.
1928 ರಿಂದ ಇದುವರೆಗೂ ಮೀಸಲು ಅರಣ್ಯ ಎಂದು ಘೋಷಣೆ ಮಾಡಿದ ಪ್ರದೇಶಗಳು ದಾಖಲೆಯಲ್ಲಿ ಮಾತ್ರ ಉಳಿದಿವೆ. ಕಂದಾಯ ಇಲಾಖೆ ದಾಖಲೆಗಳಲ್ಲಿಯೂ ಪರಿಷ್ಕರಣೆ ಮಾಡಲಾಗಿಲ್ಲ. ಇದರಿಂದ ಗೊಂದಲ ಮುಂದುವರಿದಿದೆ ಎಂದರು.
ಕೂಡಲೇ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಅರಣ್ಯ ಇಲಾಖೆಯ ಅಧಿಕಾರಿಗಳ ಮೂಲಕ ಸರ್ವೆ ಕಾರ್ಯ ನಡೆಸಿ, ಅರಣ್ಯ ಸಂರಕ್ಷಣೆಗೆ ಹಾಗೂ ಈಗಾಗಲೇ ಅನುಭವದಲ್ಲಿರುವ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅರಣ್ಯ ಒತ್ತುವರಿ: ಒಕ್ಕಲೆಬ್ಬಿಸಿದರೆ ಹೋರಾಟ
ಜಿಲ್ಲೆಯಲ್ಲಿ ದಶಕಗಳಿಂದ ಅರಣ್ಯ ಪ್ರದೇಶ ಒಳಪಟ್ಟಂತೆ ಅನುಭವದಲ್ಲಿರುವ ರೈತರು ಹಾಗೂ ಭೂ ಹಿಡುವಳಿದಾರರ ಕುರಿತು ಮಾಹಿತಿ ಕಲೆ ಹಾಕಿ, ಎಸ್ಐಟಿ ಮೂಲಕ ತನಿಖೆಗೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಈ ಕುರಿತು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಬಿ.ಶಿವರಾಂ ಎಚ್ಚರಿಸಿದರು.
ಜಿಲ್ಲೆಯಲ್ಲಿ ಸುಮಾರು 2,11,731 ಎಕರೆ ಅರಣ್ಯ ಪ್ರದೇಶವಿದೆ. ಇದರಲ್ಲಿ ಸುಮಾರು 32,751 ಎಕರೆ ಪ್ರದೇಶ ನಾನಾ ಯೋಜನೆ ಅಡಿ ರೈತರು ಹಾಗೂ ಇತರರಿಗೆ ಮಂಜೂರಾತಿ ಮಾಡಲಾಗಿದೆ. ಅನುಭವದ ಇರುವವರಲ್ಲಿ ಹಲವು ಮಂದಿಗೆ ಕಂದಾಯ ಇಲಾಖೆಯಿಂದ ಖಾತೆ ಸಹ ಮಾಡಿಕೊಡಲಾಗಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕ್ರಮ ಕೈಗೊಂಡರೆ ಜಿಲ್ಲೆಯಲ್ಲಿ ಸುಮಾರು 15 ಸಾವಿರದಿಂದ 20 ಸಾವಿರ ಕುಟುಂಬಗಳು ಬೀದಿ ಪಾಲಾಗಲಿವೆ. ಸರ್ಕಾರ ಕೂಡಲೇ ಅಗತ್ಯ ಕ್ರಮ ಕೈಗೊಂಡು ಜನರ ರಕ್ಷಣೆಗೆ ಬರಬೇಕು ಎಂದು ಆಗ್ರಹಿಸಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಬೇಲೂರು ಕ್ಷೇತ್ರದಲ್ಲಿ ವಾರದಲ್ಲಿ 3 ದಿನ ಕ್ಷೇತ್ರದಲ್ಲಿ ಇರುತ್ತೇನೆ. ಪ್ರತಿ ಸೋಮವಾರ ಕಡ್ಡಾಯವಾಗಿ ಕ್ಷೇತ್ರದಲ್ಲಿ ಜನರ ಸಮಸ್ಯೆ ಆಲಿಸುತ್ತಿದ್ದೇನೆ.ಬಿ.ಶಿವರಾಂ ಎಐಸಿಸಿ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.