ಸಕಲೇಶಪುರ: ತಾಲ್ಲೂಕಿನ ರಕ್ಷಿತ ಅರಣ್ಯಕ್ಕೆ ಹೊಂದಿಕೊಂಡಿರುವ ಗ್ರಾಮಗಳನ್ನು ಸೆಕ್ಷನ್ 4 ವ್ಯಾಪ್ತಿಗೆ ಒಳಪಡುತ್ತವೆ ಎಂದು ಅರಣ್ಯ ಇಲಾಖೆ ಹಲವು ರೈತರಿಗೆ ಈಗಾಗಲೆ ನೋಟಿಸ್ ನೀಡಿರುವುದರ ವಿರುದ್ಧ ಸಂಘಟಿತ ಹೋರಾಟ ಅಗತ್ಯ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ತಾಲ್ಲೂಕಿನ ಮೂರುಕಣ್ಣು ಗುಡ್ಡ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಕಾಡುಮನೆ, ಕ್ಯಾಮನಹಳ್ಳಿ, ಜಂಬರಡಿ, ಅಚ್ಚನಹಳ್ಳಿ, ಅಗನಿ, ನಡಹಳ್ಳಿ, ಮಕ್ಕಿಹಳ್ಳಿ, ಮದನಾಪುರ ಹಾಗೂ ಈ ಗ್ರಾಮಗಳಿಗೆ ಹೊಂದಿಕೊಂಡಿರುವ ಕೆಲವು ಹ್ಯಾಮ್ಲೆಟ್ ಗ್ರಾಮಗಳು ಸೆಕ್ಷನ್ 04 ವ್ಯಾಪ್ತಿಗೆ ಬರುತ್ತವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ನಿರಂತರವಾಗಿ ಕಾನೂನು ಹೇರುತ್ತಿದ್ದಾರೆ ಎಂದು ಆರೋಪಿಸಿ ಈ ವ್ಯಾಪ್ತಿಯ ಗ್ರಾಮಸ್ಥರು ಕಾಡುಮನೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಶಾಸಕ ಸಿಮೆಂಟ್ ಮಂಜು ಮಾತನಾಡಿದರು.
ಮಲೆನಾಡಿನ ಈ ಭಾಗದ ಜನರು ತಲೆತಲೆಮಾರಿನಿಂದಲೂ ಅರಣ್ಯವನ್ನು ಸಂರಕ್ಷಣೆ ಮಾಡಿಕೊಂಡೇ ಬರುತ್ತಿದ್ದಾರೆ. ಇಲ್ಲಿಯ ಜನ ರಕ್ಷಣೆ ಮಾಡಿಕೊಂಡು ಬಂದಿರುವ ಅರಣ್ಯ, ಮರಗಿಡ, ಹಳ್ಳಕೊಳ್ಳಗಳನ್ನು ಸರ್ಕಾರ ಅಭಿವೃದ್ಧಿ ಹೆಸರಿನಲ್ಲಿ ಹಂತ ಹಂತವಾಗಿ ನಾಶ ಮಾಡುತ್ತಿದೆ. ಕಾಡು ರಕ್ಷಣೆ ಮಾಡಿಕೊಂಡು ಬಂದಿರುವ ಕಾಡಂಚಿನ ಗ್ರಾಮದ ಜನರನ್ನೇ ಈಗ ಸೆಕ್ಷನ್ 4 ಕಾನೂನು ಹೇರಿ ಒಕ್ಕಲೆಬ್ಬಿಸಲು ಮುಂದಾಗಿರುವ ಕ್ರಮ ಖಂಡನೀಯ ಎಂದರು.
ಅರಣ್ಯ ಇಲಾಖೆ ಸೆಕ್ಷನ್ 4 ಎಂದು ಹೇಳುತ್ತಿರುವ ಪ್ರದೇಶಗಳಲ್ಲಿಯ ಗ್ರಾಮಸ್ಥರು ನೆನ್ನೆ ಮೊನ್ನೆಯಿಂದ ಜೀವನ ನಡೆಸುತ್ತಿಲ್ಲ. ಶತ ಶತಮಾನಗಳಿಂದಲೂ ಆ ಪ್ರದೇಶಗಳಲ್ಲಿ ಕೃಷಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಅಂತವರನ್ನು ಇದೀಗ ಏಕಾಏಕಿ ಕಾನೂನು ಗದಾ ಪ್ರಹಾರ ಮಾಡಿ ನೆಮ್ಮದಿ ಕೆಡಿಸುತ್ತಿರುವುದು ಸರಿಯಲ್ಲ. ಅವರಿಗೆ ಅನ್ಯಾಯ ಆಗದಂತೆ ಅವರ ಬೆಂಬಲಕ್ಕೆ ನಿಲ್ಲುತ್ತೇನೆ ಎಂದರು.
ಈ ಭಾಗದ ನಿವಾಸಿಗಳು ಮಾತ್ರವಲ್ಲ ತಾಲ್ಲೂಕಿನ ಎಲ್ಲರೂ ಇವರ ಪರವಾಗಿ ಬೆಂಬಲಕ್ಕೆ ನಿಲ್ಲಬೇಕು. ಹೋರಾಟ ಕೇವಲ ತೋರಿಕೆಗೆ ಆಗದೆ, ನ್ಯಾಯ ಸಿಗುವ ವರೆಗೂ ಬೆಂಬಲಕ್ಕೆ ನಿಲ್ಲುವ ಅಗತ್ಯವಿದೆ. ಅರಣ್ಯ ಇಲಾಖೆಯ ಯಾವುದೇ ಒತ್ತಡಕ್ಕೂ ನಿವಾಸಿಗಳು ಹೆದರುವ ಅಗತ್ಯವಿಲ್ಲ. ನಿಮ್ಮ ಪರವಾಗಿ ರಸ್ತೆಗಿಳಿದು ಹೋರಾಟ ಮಾಡಲು ಸಿದ್ಧನಿದ್ದು, ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಅನ್ಯಾಯ ಆಗದಂತೆ ಹೋರಾಟ ಮಾಡಲಾಗುವುದು ಎಂದರು.
ಸಭೆಯಲ್ಗಿ ಹೆಗ್ಗದ್ದೆ ಗ್ರಾ.ಪಂ ಅಧ್ಯಕ್ಷ ಜಯಪಾಲ್, ನಿವೃತ್ತ ತಹಶೀಲ್ದಾರ್ ಅಣ್ಣೆಗೌಡ, ವಲಯ ಅರಣ್ಯಾಧಿಕಾರಿ ಹೇಮಂತ್ ಕುಮಾರ್, ಬೆಳೆಗಾರರ ಸಂಘದ ಲೋಹಿತ್ ಕೌಡಳ್ಳಿ, ಹೆಬ್ಘಸಾಲೆ ಬಿಜೆಪಿ ಮುಖಂಡ ದೇಖಲ ಮೇಘರಾಜ್, ಹಾನುಬಾಳು ಹೋಬಳಿ ಬೆಳೆಗಾರರ ಸಂಘ ಮಾಜಿ ಅಧ್ಯಕ್ಷ ಹಾನುಬಾಳ್ ಭಾಸ್ಕರ್ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.