ADVERTISEMENT

ಹಾಸನ: ಮತ್ತೆ ನಾಲ್ವರಿಗೆ ಕೋವಿಡ್‌-19, ಮುಂಬೈನಿಂದ ಬಂದಿದ್ದ ಕುಟುಂಬ ಐಸೂಲೇಷನ್‌ಗೆ

ಮುಂಬೈನಿಂದ ಬಂದಿದ್ದ ಕುಟುಂಬ ಐಸೂಲೇಷನ್‌ಗೆ

​ಪ್ರಜಾವಾಣಿ ವಾರ್ತೆ
Published 13 ಮೇ 2020, 11:35 IST
Last Updated 13 ಮೇ 2020, 11:35 IST
ಆರ್‌.ಗಿರೀಶ್‌
ಆರ್‌.ಗಿರೀಶ್‌   

ಹಾಸನ: ಮುಂಬೈನಿಂದ ಹಾಸನಕ್ಕೆ ಬಂದ ಚನ್ನರಾಯಪಟ್ಟಣದ ಒಂದೇ ಕುಟುಂಬದ ನಾಲ್ವರಿಗೆ ಕೋವಿಡ್‌-19 ದೃಢ ಪಟ್ಟಿದ್ದು, ಜಿಲ್ಲೆಯ ಈವರೆಗೆ ಕೊರೊನಾ ಪಾಸಿಟಿವ್‌ 9ಕ್ಕೆ ಏರಿಕೆಯಾಗಿದೆ.

ಮುಂಬೈನ ಲಕ್ಷ್ಮೀನಗರ ಪ್ರದೇಶದಲ್ಲಿ ಬ್ಯಾಂಕ್‌ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಹಾಗೂ ಆತನ ಕುಟುಂಬ ಮೇ 12ರಂದು ಸ್ವಂತ ಕಾರಿನಲ್ಲಿ ಚನ್ನರಾಯಪಟ್ಟಣಕ್ಕೆ ಬಂದಿದ್ದಾರೆ. ಚೆಕ್‌ ಪೋಸ್ಟ್‌ನಲ್ಲಿ ತಡೆದು ಪರಿಶೀಲಿಸಿ, ಅವರ ಗಂಟಲು ದ್ರವ ಮಾದರಿಯನ್ನುಪರೀಕ್ಷೆಗೆ ಒಳಪಡಿಸಲಾಗಿತ್ತು. ಮಧ್ಯಾಹ್ನ 12.30ಕ್ಕೆ ಅವರನ್ನು ಕ್ವಾರಂಟೈನ್‌ ಮಾಡಲಾಗಿತ್ತು. ಬುಧವಾರ ಪರೀಕ್ಷಾವರದಿ ಪಾಸಿಟಿವ್ ಬಂದಿದೆ. 38 ವರ್ಷದ ಮಹಿಳೆ ಪಿ-948 , 17 ವರ್ಷದ ಬಾಲಕ ಪಿ-949, 14 ವರ್ಷದ ಬಾಲಕಿ ಪಿ-950 ಹಾಗೂ 43 ವರ್ಷದ ಪುರುಷ ಪಿ-951ಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದ್ದು. ಇವರೆಲ್ಲಒಂದೇ ಕುಟುಂಬದವರು.

ಮಂಗಳವಾರ ಐದು ಕೋವಿಡ್‌-19 ಪ್ರಕರಣಗಳು ದೃಢಪಟ್ಟ ಹಿನ್ನೆಲೆ ಅವರ ಜೊತೆಯಲ್ಲಿ ಕ್ವಾರಂಟೈನ್ ಮಾಡಿದ್ದ 50 ಜನರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆಒಳಪಡಿಸಲಾಗಿತ್ತು, ಎಲ್ಲಾ ನೆಗೆಟಿವ್‌ ವರದಿ ಬಂದಿದೆ. ಆದರೂ ಅವರನ್ನು ಜಿಲ್ಲಾ ಕೋವಿಡ್‌ ಆಸ್ಪತ್ರೆಯ ಐಸೂಲೇಷನ್‌ಗೆ ಸ್ಥಳಾಂತರಿಸಲಾಗಿದೆ. ಕ್ವಾರಂಟೈನ್‌ ಕೇಂದ್ರದಲ್ಲಿದ್ದ ಯಾರಿಗಾದರೂ ಕೊರೊನಾ ಸೋಂಕು ಪತ್ತೆಯಾದರೆ ಜೊತೆಯಲ್ಲಿ ಇದ್ದವರನ್ನು ಬೇರೆಕಡೆಗೆ ಸ್ಥಳಾಂತರಿಸಲಾಗುವುದು. ಹಾಸ್ಟೆಲ್‌ಗೆ ಔಷಧ ಸಿಂಪಡಣೆ ಇತ್ಯಾದಿ ಕಾರ್ಯಗಳನ್ನು ಮಾಡಲಾಗುವುದು. ಅದಕ್ಕಾಗಿ 24 ಗಂಟೆ ಸಮಯ ಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಜಿಲ್ಲೆಯಲ್ಲಿ ಇದುವರೆಗೆ 9 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಈ ಬೆಳವಣಿಗೆ ಹಿನ್ನೆಲೆ ಗುರುವಾರ ಇಲ್ಲವೇ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಸಭೆ ಕರೆದು ಜಿಲ್ಲೆಯ ವ್ಯಾಪ್ತಿಯಲ್ಲಿ ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಚರ್ಚಿಸಲಾಗುವುದು. ಕೆಲವರು ವಾರದ ಮೂರು ದಿನ ಮಾತ್ರ ವ್ಯಾಪಾರವಹಿವಾಟಿಗೆ ಅವಕಾಶ ನೀಡಿ ಎಂದು ಸಲಹೆ ನೀಡಿದ್ದಾರೆ. ಕೆಲವರು ಸಮಯ ಮೊಟಕುಗೊಳಿಸಿ ಎಂದಿದ್ದಾರೆ. ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕೊರೊನಾ ಪಾಸಿಟಿವ್ ಬಂದಿರುವ ಕುಟುಂಬ ಚನ್ನರಾಯಪಟ್ಟಣ ತಾಲ್ಲೂಕು ಬೆಳಗೊಳಹೋಬಳಿಯವರಾಗಿದ್ದಾರೆ. ಚೆಕ್‌ಪೋಸ್ಟ್‌ನಿಂದಲೇ ನೇರವಾಗಿ ಅವರನ್ನು ಕ್ವಾರಂಟೈನ್‌ ಮಾಡಿರುವುದರಿಂದ ಅವರ ಊರನ್ನು ಸೀಲ್‌ಡೌನ್ ಮಾಡುವುದಿಲ್ಲ. ಆ ಕುಟುಂಬದ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದ ವ್ಯಕ್ತಿಗಳ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.