ADVERTISEMENT

ಶಿರಾಡಿ ಘಾಟ್‌ನಲ್ಲಿ ಅಪಘಾತ: ನಾಲ್ವರ ಸಾವು

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2019, 18:00 IST
Last Updated 10 ಮಾರ್ಚ್ 2019, 18:00 IST
   

ಸಕಲೇಶಪುರ: ಶಿರಾಡಿ ಘಾಟ್‌ನ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಡಬಲ್‌ ಟರ್ನ್‌ ಬಳಿ ಭಾನುವಾರ ಬೆಳಿಗ್ಗೆ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿ ನಾಲ್ವರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಬೆಂಗಳೂರಿನ ಯಶವಂತಪುರ ನಿವಾಸಿಗಳಾದ ಚನ್ನಯ್ಯ (50), ಗೌರಮ್ಮ (45), ಜಗದೀಶ್‌ (30) ಹಾಗೂ ಭುವನೇಶ್‌ (6) ಮೃತರು. ಯಶವಂತಪುರದ ರಾಜರಾಜೇಶ್ವರಿ ಇಂಗ್ಲಿಷ್‌ ಶಾಲೆ ಶಿಕ್ಷಕಿ ನಾಗರತ್ನಾ, ಭವ್ಯಾ (16) ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿದೆ. ಅವರನ್ನು ಸಕಲೇಶಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ
ಕರೆದೊಯ್ಯಲಾಯಿತು.

ಘಟನೆ: ಆರು ಮಂದಿ ಮಾರುತಿ ಸ್ವಿಫ್ಟ್‌ ಡಿಸೈರ್‌ ಕಾರಿನಲ್ಲಿ ಧರ್ಮಸ್ಥಳಕ್ಕೆ ಹೋಗುತ್ತಿದ್ದರು. ಕಾರಿನ ಚಾಲಕ ನಿದ್ದೆ ಮಂಪರಿನಲ್ಲಿದ್ದು, ಬಸ್‌ಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.

ADVERTISEMENT

ಎಸ್‌ಪಿ ಭೇಟಿ: ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಪ್ರಕಾಶ್‌ ಗೌಡ ಭೇಟಿ ನೀಡಿ ಪರಿಶೀಲಿಸಿದರು.‌

‘ಎಡಭಾಗದಲ್ಲೇ ಬಸ್‌ ಚಲಾಯಿಸುತ್ತಿದ್ದೆ. ಕಾರಿನ ಚಾಲಕ ನಿದ್ದೆ ಮಂಪರಿನಲ್ಲಿದ್ದರಿಂದ ಬಸ್‌ಗೆ ಡಿಕ್ಕಿ ಹೊಡೆದಿದ್ದಾನೆ’ ಎಂದು ಬಸ್‌ ಚಾಲಕ ಹೇಳಿದ್ದಾರೆ.

ಸ್ಥಳದಲ್ಲೂ ಮೇಲ್ನೋಟಕ್ಕೆ ಹಾಗೆಯೇ ಕಾಣಿಸುತ್ತಿದೆ ಎಂದು ಪ್ರಕಾಶ್‌ ಗೌಡ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.