ADVERTISEMENT

ಅರಸೀಕೆರೆ: ಪರಿಸರಸ್ನೇಹಿ ಗಣಪನಿಗೆ ಆದ್ಯತೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 2:03 IST
Last Updated 23 ಆಗಸ್ಟ್ 2025, 2:03 IST
<div class="paragraphs"><p>ಅರಸೀಕೆರೆಯ ಗಣಪತಿ ಮಹದೇವಪ್ಪ ತಯಾರಿಸಿರುವ ವಿವಿಧ ಗಣೇಶ ವಿಗ್ರಹಗಳು.</p><p></p></div>

ಅರಸೀಕೆರೆಯ ಗಣಪತಿ ಮಹದೇವಪ್ಪ ತಯಾರಿಸಿರುವ ವಿವಿಧ ಗಣೇಶ ವಿಗ್ರಹಗಳು.

   

ಅರಸೀಕೆರೆ: ಪ್ರತಿವರ್ಷ ಗಣೇಶ ಚತುರ್ಥಿ ಸಮೀಪಿಸುತ್ತಿದ್ದಂತೆ ನಗರದ ನಿವಾಸಿ ಗಣಪತಿ ಮಹದೇವ ಎಂಬುವವರು ವೈವಿಧ್ಯಮಯ ಗಣಪತಿ ತಯಾರಿಸುತ್ತಿದ್ದು, ರಾಜ್ಯದ ನಾನಾ ಭಾಗಗಳಿಂದ ಇವರ ಕಲೆಗಾರಿಕೆಯ ಗಣಪತಿಗೆ ಹೆಚ್ಚಿನ ಬೇಡಿಕೆ ಇದೆ.

ADVERTISEMENT

84 ವರ್ಷಗಳಿಂದ ವಂಶ ಪಾರಂಪರ್ಯವಾಗಿ ಗಣಪತಿ ತಯಾರು ಮಾಡುತ್ತಿದ್ದು, ಮೊದಲಿಗೆ ಅವರ ತಂದೆ ಬಸಪ್ಪ ಅವರಿಂದ ಕಲೆಯನ್ನು ಬಳುವಳಿಯಾಗಿ ಪಡೆದ ಮಹದೇವ, ಅದೇ ಕಾರ್ಯವನ್ನು ಮುಂದುವರಿಸಿದರು. ಇವರು ತಯಾರಿಸಿದ ಗಣಪತಿಯನ್ನು ಹಾಸನ, ತರೀಕೆರೆ, ಸಕಲೇಶಪುರ, ಯಡಿಯೂರು, ಪಾಂಡವಪುರ, ಆಲೂರು, ಮಡಿಕೇರಿ, ಸೋಮವಾರಪೇಟೆ, ಶ್ರೀರಂಗಪಟ್ಟಣ, ಹೊಸದುರ್ಗ ಸೇರಿದಂತೆ ಅರಸೀಕೆರೆ ತಾಲ್ಲೂಕಿನಲ್ಲಿ ಬಹುತೇಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ.

ಪರಿಸರ ಸ್ನೇಹಿ ಗಣಪತಿಯನ್ನೇ ತಯಾರಿಸುವ ಈ ಕಲಾವಿದ, ದೇವಾಲಯಗಳಿಗೆ ಬಣ್ಣ, ರಾಜಗೋಪುರ, ಹೆಬ್ಬಾಗಿಲು, ಗೊಂಬೆಗಳು ತಯಾರಿಸುವಲ್ಲಿ ಹೆಸರುವಾಸಿ ಯಾಗಿದ್ದಾರೆ. ಕಲಾವಿದ ಮಹದೇವಪ್ಪ ಅವರು ತಯಾರಿಸಿದ ಗಣಪತಿ ಮೂರ್ತಿಗಳನ್ನೇ ನೋಡುವುದೇ ಹಬ್ಬದಂತಾಗಿದೆ. ನಗರದ ಸಾವಿರಾರು ಮಂದಿ ಪುಟ್ಟ ಗಣಪತಿಯನ್ನು ಮುಂಗಡ ಹಣ ಕೊಟ್ಟು ಕಾಯ್ದಿರಿಸಿಕೊಳ್ಳುತ್ತಾರೆ.

ಸ್ವಾತಂತ್ಯ್ರಪೂರ್ವದಲ್ಲಿ ಸ್ಥಾಪಿತವಾದ ಅರಸೀಕೆರೆ ಪ್ರಸನ್ನ ಗಣಪತಿಯನ್ನು ಸತತ 84 ವರ್ಷಗಳಿಂದ ಇವರ ತಂದೆ ಬಸಪ್ಪ, ಅವರ ನಂತರ ಮಹದೇವಪ್ಪ ನಿರ್ಮಿಸಿ ಕೊಡುತ್ತಿದ್ದಾರೆ. ರಾಜ್ಯದ ನಾನಾ ಭಾಗಗಳಿಂದ ಭಕ್ತರು ಸುಂದರ ಗಣಪತಿಯನ್ನು ಕಣ್ತುಂಬಿ ಕೊಳ್ಳಲಿದ್ದಾರೆ. ಅಲ್ಲದೇ ಜಿಲ್ಲೆ ಹಾಗೂ ತಾಲ್ಲೂಕು ವ್ಯಾಪ್ತಿಗಳಲ್ಲಿ ವಿವಿಧ ಸಂಘ ಸಂಸ್ಥೆಗಳು ಹೇಳಿದ ವಿನ್ಯಾಸದ ಗಣಪತಿ ಮೂರ್ತಿಗಳನ್ನು ತಯಾರಿಸಿ ಅವರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ ಮಹದೇವ.

ಪ್ರತಿವರ್ಷ ವಿಶೇಷ ಗಣಪತಿ ಮೂರ್ತಿ ಗಳನ್ನು ತಯಾರಿಸುವುದು ಇವರ ಹೆಗ್ಗಳಿಕೆ. ಪಂಚಮುಖಿ ಗಣಪತಿ, ಪ್ರಸನ್ನ ಗಣಪತಿ, ಮೂಷಿಕ ಗಣಪತಿ, ಶಿವಪಾರ್ವತಿ ಪುತ್ರ ಗಣಪತಿ, ಸಿಂಹಾಸನ ಗಣಪತಿ, ಆಂಜನೇಯ, ದರ್ಬಾರ್‌, ಬಾಲಗಣಪ, ರಾಮನ ರೂಪ ಹೋಲುವ ಗಣಪತಿ ಹೀಗೆ ವಿವಿಧ ರೀತಿಯ ಗಣಪತಿ ಮೂರ್ತಿಗಳನ್ನು ತಯಾರಿಸಿ ಎಲ್ಲರಿಂದಲೂ ಮೆಚ್ಚುಗೆ ಪಡೆಯುತ್ತಿದ್ದಾರೆ.

6 ತಿಂಗಳಿನಿಂದಲೇ ಸುತ್ತಲಿನ ಕೆರೆಯ ವ್ಯಾಪ್ತಿಯ ಜೇಡಿ ಮಣ್ಣನ್ನು ಸಂಗ್ರಹಿಸಿ, ಹದಗೊಳಿಸಿ, ಗಣಪತಿ ಮೂರ್ತಿ ತಯಾರಿಸಲು ಆರಂಭಿಸುತ್ತಾರೆ. ನಂತರ ಒಣಗಲು ಬಿಟ್ಟು, ಬಣ್ಣ ಲೇಪನ ಪ್ರಾರಂಭಿಸುತ್ತಾರೆ. ಇವರು ನಿರ್ಮಿಸುವ ಕಿರೀಟವು ಅತ್ಯಾಕರ್ಷಕವಾಗಿ ಕಾಣುತ್ತಿದ್ದು, ಇತರ ಗಣಪತಿಗಳಿಂಗಿಂತಲೂ ವಿಶೇಷವಾಗಿರುತ್ತದೆ ಎನ್ನುತ್ತಾರೆ ಭಕ್ತರು.

ಗಣಪತಿ ತಯಾರಿಸಲು ತಿಂಗಳಿಂದಲೇ ಶ್ರಮ ಪಡಬೇಕು. ಗಣಪತಿ ತಯಾರಿಕೆಯಿಂದ ನನಗೆ ಹಾಗೂ ಕುಟುಂಬಕ್ಕೆ ಸಂತಸ, ಆರೋಗ್ಯ, ನೆಮ್ಮದಿ ದೊರೆತಿದೆ. ಜನರ ಸಹಕಾರವೂ ಇದೆ.
ಗಣಪತಿ ಮಹದೇವ, ಕಲಾವಿದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.