ADVERTISEMENT

ಹಾಸನ ಗಣೇಶ ಮೆರವಣಿಗೆ ದುರಂತಕ್ಕೆ ಪೊಲೀಸ್‌ ಇಲಾಖೆ ನಿರ್ಲಕ್ಷ್ಯವೇ ಕಾರಣ: ರೇವಣ್ಣ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 2:33 IST
Last Updated 16 ಸೆಪ್ಟೆಂಬರ್ 2025, 2:33 IST
ಮೊಸಳೆ ಹೊಸಳ್ಳಿಯಲ್ಲಿ ಅವಘಡದಲ್ಲಿ ಗಾಯಗೊಂಡಿರುವ ಸೋಮವಾರಪೇಟೆ ತಾಲ್ಲೂಕಿನ ಆಕಾಶ್‌ (21) ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಹಿಮ್ಸ್‌ನಿಂದ ಮೈಸೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು
ಮೊಸಳೆ ಹೊಸಳ್ಳಿಯಲ್ಲಿ ಅವಘಡದಲ್ಲಿ ಗಾಯಗೊಂಡಿರುವ ಸೋಮವಾರಪೇಟೆ ತಾಲ್ಲೂಕಿನ ಆಕಾಶ್‌ (21) ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಹಿಮ್ಸ್‌ನಿಂದ ಮೈಸೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು   

ಹಾಸನ: ಮೊಸಳೆ ಹೊಸಹಳ್ಳಿ ಗಣೇಶೋತ್ಸವ ದುರಂತಕ್ಕೆ ಪೊಲೀಸ್‌ ಇಲಾಖೆಯ ನಿರ್ಲಕ್ಷ್ಯವೇ ಕಾರಣ. ಮೃತರ ಕುಟುಂಬದವರಿಗೆ ಸರ್ಕಾರವೇ ₹ 15 ಲಕ್ಷ ಪರಿಹಾರ ವಿತರಿಸಬೇಕು ಎಂದು ಶಾಸಕ ಎಚ್.ಡಿ. ರೇವಣ್ಣ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದುರಂತದಲ್ಲಿ 10 ಮಂದಿ ವಿದ್ಯಾರ್ಥಿಗಳು ಮೃತಪಟ್ಟಿದ್ದು, ಮತ್ತೊಬ್ಬ ಎಂಜಿನಿಯಂರಿಂಗ್ ವಿದ್ಯಾರ್ಥಿಯ ಸ್ಥಿತಿ ಚಿಂತಾಜನಕವಾಗಿದೆ. ದುರಂತದಲ್ಲಿ ಮೃತಪಟ್ಟ ಎಲ್ಲ ಕುಟುಂಬಗಳಿಗೆ ಅಪಘಾತ ವಿಮೆ ಪರಿಹಾರದ ಹಣ ತಲುಪುವಂತಾದರೂ ಸರ್ಕಾರ ಕ್ರಮ ಕೈಗೊಳ್ಳಬೇಕು. ಪರಿಹಾರವನ್ನು ಮತ್ತಷ್ಟು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ದುರಂತದ ಸಂಬಂಧ ಈ ಹಿಂದೆಯೂ ಹೇಳಿದಂತೆ ಪೊಲೀಸ್ ಇಲಾಖೆ ನಿರ್ಲಕ್ಷ್ಯವೇ ಕಾರಣವಾಗಿದ್ದು, ಇಲಾಖೆಯು ಸರ್ಕಾರದ ಅಡಿಯಲ್ಲಿ ಬರುವುದರಿಂದ ಸೂಕ್ತ ಪರಿಹಾರ ಒದಗಿಸಲೇಬೇಕು ಎಂದರು.

ADVERTISEMENT

ಗಣೇಶೋತ್ಸವ ಮೆರವಣಿಗೆ ನಡೆಯುವ ಸಂದರ್ಭದಲ್ಲಿ 500 ಮೀಟರ್ ದೂರದಲ್ಲಿ ಬ್ಯಾರಿಕೇಡ್ ಹಾಕಿ ಪೊಲೀಸರನ್ನು ನಿಯೋಜಿಸಿದ್ದರೆ ದುರಂತ ಸಂಭವಿಸುತ್ತಿರಲಿಲ್ಲ. 10 ಜನರ ಜೀವ ಉಳಿಸಬಹುದಾಗಿತ್ತು ಎಂದರು.

ದುರಂತ ಸಂಬಂಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು, ಮುಖ್ಯಮಂತ್ರಿ ಹೇಳಿದ್ದಾರೆ. ಈ ಕುರಿತು ಸಾರ್ವಜನಿಕರಿಗೆ ಮಾಹಿತಿ ತಿಳಿಸಬೇಕು. ಸಾವಿರಾರು ಮಂದಿ ಸೇರಿ ಗಣೇಶೋತ್ಸವ ಆಚರಣೆ ಮಾಡುವ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಭೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕಾಗಿತ್ತು. ಇದರಲ್ಲಿ ಯಾವ ಅಧಿಕಾರಿಗಳ ತಪ್ಪಿದೆ ಎಂಬುದನ್ನು ಪರಾಮರ್ಶಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ದುರಂತ ನಡೆದ ಸ್ಥಳದಲ್ಲಿ ನಿಂತು ನೋಡಿದರೆ, ಯಾವ ರೀತಿ ಅಪಘಾತವಾಗಿದೆ ಹಾಗೂ ಇದರಲ್ಲಿ ಪೊಲೀಸ್ ವೈಫಲ್ಯ ಇರುವುದು ಸಾಮಾನ್ಯ ವ್ಯಕ್ತಿಗೂ ಎದ್ದು ಕಾಣುತ್ತದೆ. ಬೇಕಿದ್ದರೆ ಗೃಹ ಸಚಿವರೇ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಲಿ ಎಂದು ಹೇಳಿದರು.

ಮುಂದಿನ ಒಂದು ವಾರ ಗಡುವು ನೀಡಿದ್ದೇನೆ. ಆ ಅವಧಿಯಲ್ಲಿ ದುರಂತ ಸಂಬಂಧ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಜಿಲ್ಲೆಯ ಜೆಡಿಎಸ್ ಶಾಸಕರು ಚರ್ಚಿಸಿ, ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು. 

ಗಾಯಾಳು ಆಕಾಶ್ ಮೈಸೂರು ಆಸ್ಪತ್ರೆಗೆ

ಮೊಸಳೆ ಹೊಸಳ್ಳಿಯಲ್ಲಿ ಅವಘಡದಲ್ಲಿ ಗಾಯಗೊಂಡು ಇಲ್ಲಿನ ಹಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಮವಾರಪೇಟೆ ತಾಲ್ಲೂಕಿನ ಆಕಾಶ್‌ (21) ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಆಕಾಶ್‌ ಅವರ ಯಕೃತ್ತಿಗೆ ಪೆಟ್ಟು ಬಿದ್ದಿದ್ದು ಹಿಮ್ಸ್‌ನ ವೈದ್ಯರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದ್ದರು. ಆದರೆ ಅವರ ಪಾಲಕರು ಮೈಸೂರಿಗೆ ಕರೆದುಕೊಂಡು ಹೋಗಲು ನಿರ್ಧರಿಸಿದರು. ಮೊಸಳೆ ಹೊಸಳ್ಳಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೂರನೇ ವರ್ಷದ ಎಂಜಿನಿಯರಿಂಗ್ ಓದುತ್ತಿದ್ದ ಆಕಾಶ್‌ ಶುಕ್ರವಾರ ನಡೆದ ಅವಘಡದಲ್ಲಿ ಗಾಯಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.