ADVERTISEMENT

ಸಿಂಗಪುರ ಮ್ಯೂಸಿಯಂ ಸೇರಿದ್ದ ಗಣೇಶ, ನಟರಾಜ ವಿಗ್ರಹಗಳು ಮರಳಿ ಹಳೇಬೀಡಿಗೆ!

ಭಾರತೀಯ ಕಲೆ, ಸಂಸ್ಕೃತಿ ಬಿಂಬಿಸಲು ಸಿಂಗಪುರಕ್ಕೆ ಕಳುಹಿಸಿದ್ದ ವಿಗ್ರಹ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2023, 12:49 IST
Last Updated 3 ಮಾರ್ಚ್ 2023, 12:49 IST
ಸಿಂಗಪುರದಿಂದ ಸೋಮವಾರ ಹಳೇಬೀಡು ಪುರಾತತ್ವ ಸಂಗ್ರಹಾಲಯಕ್ಕೆ ಮರಳಿರುವ ಗಣೇಶ್‌ ಹಾಗೂ ನಟರಾಜ್‌ ಮೂರ್ತಿಗಳು.
ಸಿಂಗಪುರದಿಂದ ಸೋಮವಾರ ಹಳೇಬೀಡು ಪುರಾತತ್ವ ಸಂಗ್ರಹಾಲಯಕ್ಕೆ ಮರಳಿರುವ ಗಣೇಶ್‌ ಹಾಗೂ ನಟರಾಜ್‌ ಮೂರ್ತಿಗಳು.   

ಹಳೇಬೀಡು: ಹೊಯ್ಸಳ ವಾಸ್ತುಶಿಲ್ಪವನ್ನು ಜಗತ್ತಿಗೆ ಪರಿಚಯಿಸುವುದರೊಂದಿಗೆ ಭಾರತೀಯ ಕಲೆ, ಸಂಸ್ಕೃತಿಯನ್ನು ವಿಶ್ವದಾದ್ಯಂತ ಪ್ರಚಾರ ಮಾಡುವ ಉದ್ದೇಶದಿಂದ ಸಿಂಗಪುರ ಮ್ಯೂಸಿಯಂ ಕಳಿಸಿದ್ದ ವಿಶಿಷ್ಟ ವಿನ್ಯಾಸದ ಗಣೇಶ ಹಾಗೂ ನಟರಾಜ ವಿಗ್ರಹಗಳು ಸೋಮವಾರ ಹಳೇಬೀಡಿನ ಪುರಾತತ್ವ ವಸ್ತು ಸಂಗ್ರಹಾಲಯಕ್ಕೆ ಹಿಂದಿರುಗಿವೆ.

ಸಂಗ್ರಹಾಲಯದ ಸಹಾಯಕ ಪುರಾತತ್ವ ಅಧೀಕ್ಷಕ ಅನಿಲ್ ಕುಮಾರ್ ಅವರು ಆಸಕ್ತಿ ವಹಿಸಿದ್ದರಿಂದ ಎರಡೂ ವಿಗ್ರಹಗಳು ಮೂಲಸ್ಥಳಕ್ಕೆ ಬಂದು ಸೇರಿವೆ. ದಾಖಲೆ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ, 2002ರಲ್ಲಿ ಹಳೇಬೀಡು ಮ್ಯೂಸಿಯಂನಿಂದ ಸಿಂಗಪುರ ಮ್ಯೂಸಿಯಂಗೆ ವಿಗ್ರಹ ಕಳಿಸಿರುವ ಮಾಹಿತಿ ಅವರಿಗೆ ದೊರಕಿತ್ತು. ಹಳೇಬೀಡು ಮ್ಯೂಸಿಯಂ ವಿಗ್ರಹಗಳನ್ನು ಸಿಂಗಪುರದಿಂದ ಹಿಂದಕ್ಕೆ ಪಡೆಯಬೇಕು ಎಂದು ಉನ್ನತ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದರು.

ಮ್ಯೂಸಿಯಂ ಅಧಿಕಾರಿ ಅನಿಲ್ ಕುಮಾರ್, ಬೆಂಗಳೂರು ವೃತ್ತದ ಪುರಾತತ್ವ ಅಧೀಕ್ಷಕ ಬಿಪಿನ್ ನೇಗಿ ಅವರೊಂದಿಗೆ ಮಾತುಕತೆ ನಡೆಸಿದ್ದರು. ವೃತ್ತ ಕಚೇರಿಯಿಂದ ನವದೆಹಲಿಯ ಮಹಾನಿರ್ದೇಶಕರ ಕಚೇರಿಯವರೆಗೂ ವಿಗ್ರಹ ತರಿಸುವ ಕುರಿತು ಮಾತುಕತೆ ನಡೆದಿತ್ತು. ಸರ್ಕಾರದ ಒಪ್ಪಂದದ ಪ್ರಕಾರ ಸಿಂಗಪುರಕ್ಕೆ ವಿಗ್ರಹ ಕಳಿಸಲಾಗಿತ್ತು. ಕೇಂದ್ರ ಸರ್ಕಾರ ಎರಡೂ ಆಮೂಲ್ಯವಾದ ವಿಗ್ರಹಗಳನ್ನು ಹಳೇಬೀಡು ಮ್ಯೂಸಿಯಂ ವಾಪಸ್ ತರಿಸಿಕೊಟ್ಟಿದೆ.

ADVERTISEMENT

ಪರಿಣಾಮವಾಗಿ 2022 ಆಗಸ್ಟ್ 8 ರಂದು ನವದೆಹಲಿಯ ಪುರಾತತ್ವ ಕೇಂದ್ರ ಕಚೇರಿಗೆ ವಿಗ್ರಹಗಳು ಬಂದು ಸೇರಿದವು. ಈಗ ಎರಡೂ ವಿಗ್ರಹಗಳು ಹಳೇಬೀಡು ಮ್ಯೂಸಿಯಂನ ಪ್ರೇಕ್ಷಕರ ಗ್ಯಾಲರಿಗೆ ಸೇರ್ಪಡೆಯಾಗಿವೆ. ದೂರದಿಂದ ಬಂದ ಪ್ರವಾಸಿಗರು ಸಿಂಗಪುರದಿಂದ ಭಾರತಕ್ಕೆ ಬಂದಿರುವ ವಿಗ್ರಹಗಳನ್ನು ಅಚ್ಚರಿಯಿಂದ ವೀಕ್ಷಿಸಿದರು.

ಎರಡೂ ವಿಗ್ರಹಗಳನ್ನು ಸುರಕ್ಷಿತವಾಗಿ ಡಬ್ಬದಲ್ಲಿರಿಸಿ, ಸಣ್ಣದಾದ ಗೆರೆ ಸಹ ಬೀಳದಂತೆ ವ್ಯವಸ್ಥಿತವಾಗಿ ಕಳಿಸಲಾಗಿದೆ. ಮ್ಯೂಸಿಯಂಗೆ ಹಿಂದುರುಗಿದ ವಿಗ್ರಹಗಳನ್ನು ಸಿಬ್ಬಂದಿ ಸಂಭ್ರಮದಿಂದ ಬರ ಮಾಡಿಕೊಂಡರು. ಉದ್ಯೋಗ ಇಲ್ಲವೇ ವಿದ್ಯಾಭ್ಯಾಸಕ್ಕೆ ದೂರದ ಊರಿಗೆ ಹೋದ ಮಕ್ಕಳು ಮನೆಗೆ ಹಿಂದಿರುಗಿದಾಗ ಕಾಣುವಂತಹ ಸಂಭ್ರಮ ಮ್ಯೂಸಿಯಂನಲ್ಲಿ ಸೃಷ್ಟಿಯಾಗಿತ್ತು. ಡಬ್ಬದಿಂದ ವಿಗ್ರಹಗಳನ್ನು ಹೊರ ತೆಗೆದಾಕ್ಷಣ ಸಿಬ್ಬಂದಿ ನಿಂತ ಜಾಗ ಬಿಟ್ಟು ಕದಲದೇ ಒಂದು ಗಂಟೆಗೂ ಹೆಚ್ಚು ಕಾಲ ವೀಕ್ಷಿಸಿದರು.

ಅಪರೂಪದ ವಿಗ್ರಹ

ಗಣೇಶ ವಿಗ್ರಹದಲ್ಲಿ ಕೈ, ಕೊರಳು ಹಾಗೂ ಕಾಲಿನಲ್ಲಿ ಅಭರಣಗಳನ್ನು ಮೂಡಿಸಲಾಗಿದೆ. ಹೊಟ್ಟೆಯಲ್ಲಿ ಹಾವು ಸುತ್ತಿಕೊಂಡಂತೆ ಕೆತ್ತನೆ ಮಾಡಲಾಗಿದೆ. ಒಂದು ಕೈಯಲ್ಲಿ ಮೋದಕ, ಮತ್ತೊಂದು ಕೈಯಲ್ಲಿ ಕೊಡಲಿ ಇರುವುದು ಸ್ಪಷ್ಟವಾಗಿ ಕಾಣುತ್ತಿದೆ. ಸೊಂಡಿಲು ಹಾಗೂ ಕೋರೆಗಳನ್ನು ಸಹ ಆಕರ್ಷಕವಾಗಿ ಮೂಡಿಸಲಾಗಿದೆ.

ನೃತ್ಯ ಮಾಡುತ್ತಿರುವ ನಟರಾಜ ಎಂದು ಕರೆಯುವ ಶಿವನ ವಿಗ್ರಹ ಕುಸುರಿ ಕೆತ್ತನೆ ಕೆಲಸದಿಂದ ಕೂಡಿದೆ. ಪ್ರಭಾವಳಿಯಲ್ಲಿ ಕಾಲ್ಪನಿಕ ಮಕರ ಪ್ರಾಣಿ ಹಾಗೂ ಹೂವು ಬಳ್ಳಿಯಲ್ಲಿ ವಿಶಿಷ್ಟ ಕಲೆ ಅರಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.