ADVERTISEMENT

ಚನ್ನಹಳ್ಳಿ ಗ್ರಾಮದಲ್ಲಿ ಸ್ಫೋಟ ಪ್ರಕರಣ 130 ಡೆಟೋನೇಟರ್‌, ಜಿಲೆಟಿನ್‌ ಪತ್ತೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 23:00 IST
Last Updated 22 ಜೂನ್ 2021, 23:00 IST
ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು
ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು   

ಆಲೂರು (ಹಾಸನ): ತಾಲ್ಲೂಕಿನ ಚನ್ನಹಳ್ಳಿ ಗ್ರಾಮದಲ್ಲಿ ಜಿಲೆಟಿನ್‌ ಕಡ್ಡಿಗಳು ಸ್ಫೋಟಗೊಂಡು, ಮಕ್ಕಳು ಗಾಯಗೊಂಡ ಸ್ಥಳದಲ್ಲಿ ಪರಿಶೀಲನೆ ನಡೆಸಿದ ಪೊಲೀಸರಿಗೆ 130 ಡೆಟೋನೇಟರ್‌, ಜಿಲೆಟಿನ್‌ ಕಡ್ಡಿಹಾಗೂ ಉಪ್ಪು ದೊರೆತಿವೆ.

ಪೊಲೀಸರು, ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸ್ಫೋಟಗೊಂಡ ಸ್ಥಳದ ಸಮೀಪ ಲಾರಿಯಲ್ಲಿಈ ವಸ್ತುಗಳು ಪತ್ತೆಯಾಗಿವೆ. ಈ ಲಾರಿಯು ಕೆಲ ವರ್ಷಗಳಿಂದ ಇದೇ ಸ್ಥಳದಲ್ಲಿ ನಿಂತಿದೆ.

ಸ್ಫೋಟಕಗಳ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ನ್ಯಾಯಾಲಯದ ಅನುಮತಿ ಪಡೆದು 130 ಡೆಟೋನೇಟರ್ಸ್, ಜಿಲೆಟಿನ್‌ ಕಡ್ಡಿಗಳನ್ನು ನಿಷ್ಕ್ರಿಯಗೊಳಿಸಲಾಯಿತು ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್‌ ಅಧಿಕಾರಿ ನಂದಿನಿ ತಿಳಿಸಿದರು.

ADVERTISEMENT

ಸ್ಥಳಕ್ಕೆ ಶಾಸಕ ಎಚ್.ಕೆ.ಕುಮಾರಸ್ವಾಮಿ ಭೇಟಿ ನೀಡಿದ್ದರು. ‘ಎತ್ತಿನಹೊಳೆ ಯೋಜನೆಯ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದೆ. ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಅವರಿಗೆ ಪರಿಹಾರ ನೀಡಬೇಕು. ವಾಟೆಹೊಳೆ ಜಲಾಶಯ ಬಳಿ ಸ್ಫೋಟಕಗಳಿದ್ದ ಲಾರಿ ಪತ್ತೆ ಕುರಿತು ತನಿಖೆಯಾಗಬೇಕು’ ಎಂದು ಆಗ್ರಹಿಸಿದರು.

ಎತ್ತಿನಹೊಳೆ ಯೋಜನೆಯ ಗುತ್ತಿಗೆ ಪಡೆದಿರುವ ದಿ ಶಂಕರ್‌ ಕಂಪನಿ ಹಾಗೂ ಸ್ಫೋಟಕ ಬಳಕೆದಾರ ಶಿವಾನಂದ ಗೋಣಿ, ಎತ್ತಿನಹೊಳೆ ಯೋಜನೆ ಎಂಜಿನಿಯರ್‌ಗಳಾದ ಸುಧೀಂದ್ರ, ಖಾನ್‌, ರಾಮಣ್ಣ ವಿರುದ್ಧ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.