ADVERTISEMENT

ಗೆಂಡೆಕಟ್ಟೆ ಉದ್ಯಾನಕ್ಕೆ ಪ್ರವೇಶ ನಿಷೇಧ: ಮೂರು ತಿಂಗಳು ಬಂದ್‌

ಬೆಂಕಿ ಕಾಣಿಸಿಕೊಂಡ ಹಿನ್ನಲೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2019, 12:12 IST
Last Updated 4 ಮಾರ್ಚ್ 2019, 12:12 IST
ಗೆಂಡೆಕಟ್ಟೆ ಉದ್ಯಾನದಲ್ಲಿ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.
ಗೆಂಡೆಕಟ್ಟೆ ಉದ್ಯಾನದಲ್ಲಿ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.   

ಹಾಸನ: ನಗರ ಹೊರವಲಯದ ಗೆಂಡೆಕಟ್ಟೆ ಉದ್ಯಾನದಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.

ಫೆ. 23 ರಂದು ಉದ್ಯಾನದಲ್ಲಿರುವ ಮಕ್ಕಳ ಕ್ರೀಡಾ ಸಾಮಗ್ರಿಗಳ ಸಮೀಪದ ಖಾಲಿ ಜಾಗದಲ್ಲಿ ಬೆಂಕಿ ಬಿದ್ದ ಪರಿಣಾಮ ಒಣಗಿದ ಹುಲ್ಲು ಸುಟ್ಟಿದೆ. ಒಂದು ಎಕರೆಗೆ ಬೆಂಕಿ ವ್ಯಾಪಿಸಿ, ಬಿದಿರು ಮರಗಳು ಬೆಂಕಿಗೆ ಆಹುತಿಯಾಗಿವೆ. ಅಗ್ನಿ ಶಾಮಕ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಉದ್ಯಾನ ವೀಕ್ಷಣೆಗೆ ಬಂದಿದ್ದ ಯುವಕರು ಸಿಗರೇಟ್ ಸೇದಿ ಬಿಸಾಡಿದ್ದರಿಂದ ಅವಘಡ ಸಂಭವಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಉದ್ಯಾನದೊಳಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸದ ಕಾರಣ ಕೃತ್ಯವೆಸಗಿದವರು ಯಾರರು ಎಂಬುದು ಗೊತ್ತಾಗಿಲ್ಲ. ಹಾಗಾಗಿ ಅರಣ್ಯ ಇಲಾಖೆ ಮೇ ವರೆಗೂ ಉದ್ಯಾನಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಿ, ಪ್ರವೇಶ ದ್ವಾರದ ಗೇಟ್‌ಗೆ ಬೀಗ ಹಾಕಲಾಗಿದೆ.

ADVERTISEMENT

318 ಎಕರೆ ವಿಸ್ತಾರದ ಗೆಂಡೆಕಟ್ಟೆ ಅರಣ್ಯ ಪ್ರದೇಶದ 25 ಎಕರೆಯಲ್ಲಿ ಉದ್ಯಾನ ನಿರ್ಮಿಸಲಾಗಿದೆ. ಇಲ್ಲಿ 100 ಜಿಂಕೆ ಹಾಗೂ 2 ಕಡವೆಗಳಿವೆ. ಪ್ರವಾಸಿ ಮಂದಿರ, ವಿಶ್ರಾಂತಿ ತಾಣ, ಮಕ್ಕಳ ಕ್ರೀಡಾ ಸಾಧನಗಳನ್ನು ಒಳಗೊಂಡ ಗೆಂಡೆಕಟ್ಟೆಗೆ ನಿತ್ಯ ನೂರಾರು ಜನರು ಬರುತ್ತಾರೆ.

ಉದ್ಯಾನದಲ್ಲಿ ಭದ್ರತೆ ವ್ಯವಸ್ಥೆ ಇಲ್ಲ. ರಾತ್ರಿ ಪಾಳಿಯಲ್ಲಿ ಮೂವರು ಹಾಗೂ ಹಗಲು ವೇಳೆ ನಾಲ್ವರು ಗುತ್ತಿಗೆ ನೌಕರರು ಕೆಲಸ ಮಾಡುತ್ತಿದ್ದಾರೆ.

‘ಜಿಂಕೆ ಹಾಗೂ ಕಡವೆಗಳಿಗೆ ಆಹಾರ ಸಿದ್ಧಪಡಿಸುವುದೇ ದೊಡ್ಡ ಕೆಲಸವಾಗಿದ್ದು, ಇನ್ನು ಗಸ್ತು ತಿರುಗಲು ಯಾರೂ ಇಲ್ಲದಂತಾಗಿದೆ. ಮುಖ್ಯ ದ್ವಾರದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರೆ ಭೇಟಿ ನೀಡಿದವರ ಮೇಲೆ ನಿಗಾ ಇಡಲು ಸಾಧ್ಯವಾಗುತ್ತದೆ. ಶಾಶ್ವತವಾಗಿ ಪೊಲೀಸ್‌ ಸಿಬ್ಬಂದಿ ನಿಯೋಜಿಸಿದರೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ನೌಕರ ಪುಟ್ಟಸ್ವಾಮಿ.

ರಾಷ್ಟ್ರೀಯ ಹೆದ್ದಾರಿ 75ಕ್ಕೆ ಹೊಂದಿಕೊಂಡಿರುವ ಗೆಂಡೆಕಟ್ಟೆಗೆ ಹೋಗಲು ಕಿರಿದಾದ ರಸ್ತೆ ಇದೆ. ಈ ರಸ್ತೆ ಉದ್ಯಾನಕ್ಕೆ ಮಾತ್ರವಲ್ಲದೆ ಬಸವನಹಳ್ಳಿ, ಕೊಪ್ಪಲು, ಹೊನ್ನೇನಹಳ್ಳಿ, ಕೈಗಾರಿಕಾ ಪ್ರದೇಶ, ಚಿಕ್ಕಬಸವನಹಳ್ಳಿಗೆ ಸಂಪರ್ಕ ಕಲ್ಪಿಸುತ್ತದೆ.

‘ಗೆಂಡೆಕಟ್ಟೆ ರಸ್ತೆಯಲ್ಲಿ ಸಂಚಾರ ನಿಷೇಧಿಸಿದರೆ ಗ್ರಾಮಗಳಿಗೆ ಹೋಗುವ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಜನರು ನಡೆದು ಹೋಗುತ್ತಾರೆ. ದಾರಿಹೋಕರು ಬೀಡಿ, ಸೀಗರೇಟ್ ಸೇದಿ ಬಿಸಾಡುತ್ತಾರೆ. ಉದ್ಯಾನದ ಮುಖ್ಯ ದ್ವಾರ ಬಂದ್ ಆಗಿರುವುದರಿಂದ ಯುವಕರು ಬೇಲಿ ಮುರಿದು ಒಳ ನುಗ್ಗುತ್ತಿದ್ದು, ಅವರನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ’ ಎಂದು ಪುಟ್ಟಸ್ವಾಮಿ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.