ಅರಸೀಕೆರೆ: ಆಧುನಿಕ ಜೀವನ ಶೈಲಿ, ಅಸುರಕ್ಷಿತ ಆಹಾರ ಕ್ರಮ, ದೈನಂದಿನ ಜೀವನದಲ್ಲಿ ಮಾನಸಿಕ ಒತ್ತಡ ಹಾಗೂ ಅತಿಯಾದ ಮೊಬೈಲ್ ಫೋನ್ ಬಳಕೆಯಿಂದ ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಕಣಕಟ್ಟೆ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಂಗನಾಥ್ ಕಳವಳ ವ್ಯಕ್ತಪಡಿಸಿದರು.
ತಾಲ್ಲೂಕಿನ ಕಣಕಟ್ಟೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಶ್ರೀ ವಿದ್ಯಾರಣ್ಯ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಸಂಯುಕ್ತ ಆಶ್ರಯದಲ್ಲಿ ಡೆಂಗಿ ವಿರೋಧಿ ಮಾಸಚಾರಣೆ ಹಾಗೂ ಹೃದಯಾಘಾತದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದು ಹಠಾತ್ ಹೃದಯಾಘಾತಗಳು ಸಂಭವಿಸುತ್ತಿದ್ದು, ಸಾರ್ವಜನಿಕರು ಕೆಲವೊಂದು ನಿಯಮಗಳು ಅನುಸರಿಸಬೇಕು. ಅಸುರಕ್ಷಿತ ಆಹಾರ ಸೇವನೆ ತ್ಯಜಿಸಿ ಮನೆಯಲ್ಲಿ ತಯಾರಿಸಿದ ಆಹಾರ ಸೇವನೆ ಮಾಡುವುದು, ಪ್ರತಿ ದಿನ ಯೋಗ ಅಥವಾ ದೈಹಿಕ ವ್ಯಾಯಾಮದ ಚಟುವಟಿಕೆಗಳನ್ನು ರೂಢಿಸಿಕೊಳ್ಳುವುದು, ಮೊಬೈಲ್ ಫೋನ್ ಮಿತವಾಗಿ ಬಳಸಬೇಕು ಎಂದು ಸಲಹೆ ನೀಡಿದರು.
ಪ್ರತಿ ಮೂರು ತಿಂಗಳಿಗೊಮ್ಮೆಯಾದರೂ, ಹೃದಯದ ಆರೋಗ್ಯ ಸಂಬಂಧಿ ರಕ್ತ ಪರೀಕ್ಷೆ ಮತ್ತು ಇತರೆ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ಸಾರ್ವಜನಿಕರಿಗೆ ಇದರ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ಆದ್ದರಿಂದ ಶಿಕ್ಷಣ ಸಂಸ್ಥೆಗಳು ಸ್ವಯಂ ಸೇವಾ ಸಂಸ್ಥೆಗಳು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿ ಹೆಚ್ಚು ಹೆಚ್ಚು ಕಾರ್ಯಾಗಾರಗಳನ್ನು ನಡೆಸಬೇಕು ಎಂದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿರಿ ಮೋಹನ್‌ಕುಮಾರ್ ಮಾತನಾಡಿ, ಹೃದಯಾಘಾತಗಳು ಅನುವಂಶಿಯತೆಯಿಂದಲೂ ಆಗಬಹುದು. ಆದ್ದರಿಂದ ಸಾರ್ವಜನಿಕರು ಯಾವುದೇ ಗೊಂದಲಕ್ಕೆ ಒಳಗಾಗದೆ ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆಗೆ ಒಳಪಟ್ಟು ವೈದ್ಯರು ನೀಡುವ ಸಲಹೆಗಳನ್ನು ಪಾಲಿಸಬೇಕು. ಹೃದಯ ಸಂಬಂಧಿ ಕಾಯಿಲೆಗಳನ್ನು ಪ್ರಾರಂಭಿಕ ಹಂತದಲ್ಲಿ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆಯುವುದು ಒಳ್ಳೆಯದು ಎಂದು ಹೇಳಿದರು.
ಆರೋಗ್ಯ ನಿರೀಕ್ಷಣಾಧಿಕಾರಿ ಸಂತೋಷ್ ಕುಮಾರ್, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ನಾಗರತ್ನ, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಲತಾ, ವಿದ್ಯಾರಣ್ಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.