ADVERTISEMENT

ಶುದ್ಧತೆಗೆ ಹೆಸರಾಗಿದ್ದ ಜಾಲಿಕಟ್ಟೆ ನೀರು ಮಲಿನ

ಪ್ರಯಾಣಿಕರ ಬಾಯಾರಿಕೆ ನೀಗಿಸುತ್ತಿದ್ದ ಜಲಮೂಲ: ಸಂರಕ್ಷಣೆಗೆ ಹೆಚ್ಚುತ್ತಿರುವ ಒತ್ತಡ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 7:23 IST
Last Updated 25 ಫೆಬ್ರುವರಿ 2026, 7:23 IST
ಹಳೇಬೀಡು ಸಮೀಪದ ಘಟ್ಟದಹಳ್ಳಿಯ ಜಾಲಿಕಟ್ಟೆಯ ನೀರಿಗೆ ಸೇರುತ್ತಿರುವ ಊಟದ ತ್ಯಾಜ್ಯ 
ಹಳೇಬೀಡು ಸಮೀಪದ ಘಟ್ಟದಹಳ್ಳಿಯ ಜಾಲಿಕಟ್ಟೆಯ ನೀರಿಗೆ ಸೇರುತ್ತಿರುವ ಊಟದ ತ್ಯಾಜ್ಯ    

ಹಳೇಬೀಡು: ಜಾನುವಾರುಗಳಿಗೆ ನೀರು ಕುಡಿಸುವುದಕ್ಕಾಗಿ ನಿರ್ಮಿಸಿರುವ ಘಟ್ಟದಹಳ್ಳಿಯ ಜಾಲಿಕಟ್ಟೆ, ಶುಭ ಕಾರ್ಯಗಳ ಊಟ, ಉಪಾಹಾರದ ತ್ಯಾಜ್ಯದಿಂದ ನಲುಗಿದೆ.

ಜಾಲಿ ಕಟ್ಟೆಯಲ್ಲಿ ಶುದ್ಧವಾದ ನೀರು ಸಂಗ್ರಹವಾಗುತ್ತದೆ. ನೀರು ತಾಜಾತನ ಕಳೆದುಕೊಳ್ಳುವುದಿಲ್ಲ. ಕಟ್ಟೆಗೆ ಕೆಸರಿನ ರಾಡಿ, ಮಣ್ಣು ಸೇರಿಕೊಳ್ಳದೇ ನೀರಿನ ನೈಜ ಬಣ್ಣ ಸದಾಕಾಲ ಇರುತ್ತದೆ. ಹಿಂದೆ ವಾಹನ ಸೌಲಭ್ಯ ಇಲ್ಲದ ಕಾಲದಲ್ಲಿ ಕಾಲ್ನಡಿಗೆಯಲ್ಲಿ ಪ್ರಯಾಣಿಸುತ್ತಿದ್ದ ಜನರು, ಜಾಲಿಕಟ್ಟೆಯ ನೀರು ಕುಡಿದು ಬಾಯಾರಿಕೆ ನಿವಾರಿಸಿಕೊಂಡು ಪ್ರಯಾಣ ಮುಂದುವರಿಸುತ್ತಿದ್ದರು.

ಕಟ್ಟೆ ಬಳಿಯ ಜಮೀನಿನಲ್ಲಿ ಕೆಲಸ ಮಾಡುವವರು ಊಟ, ಉಪಾಹಾರದ ಬುತ್ತಿ ಜೊತೆ ಕುಡಿಯಲು ನೀರು ತರುತ್ತಿರಲಿಲ್ಲ. ಆಹಾರ ಸೇವನೆಯ ನಂತರ ಕಟ್ಟೆಯ ನೀರು ಕುಡಿಯುತ್ತಿದ್ದರು. ತಾಜಾತನದ ಜೊತೆಗೆ ನೀರು ಸಿಹಿಯಾಗಿದ್ದರಿಂದ ಬೆಳೆ, ಕಾಳು ಬೇಯಿಸುವುದಕ್ಕೂ ಮನೆಗೆ ಬಿಂದಿಗೆಯಲ್ಲಿ ತೆಗೆದುಕೊಂಡು ಹೋಗುತ್ತಿದ್ದರು ಎಂಬುದನ್ನು ಘಟ್ಟದಹಳ್ಳಿ ಭಾಗದ ಹಿರಿಯರು ನೆನಪಿಸಿಕೊಳ್ಳುತ್ತಾರೆ.

ADVERTISEMENT

ಶುದ್ಧತೆಗೆ ಹೆಸರಾಗಿದ್ದ ಜಾಲಿಕಟ್ಟೆಯ ನೀರು, ಮಲೀನವಾಗುವ ಸ್ಥಿತಿಗೆ ತಲುಪಿದೆ. ವಿವಾಹ, ಗೃಹ ಪ್ರವೇಶ ಮೊದಲಾದ ಶುಭ ಕಾರ್ಯ ನಡೆಸಿದವರು, ಊಟದ ನಂತರ ಬರುವ ತ್ಯಾಜ್ಯ ವಿಲೇವಾರಿ ಮಾಡುವ ಸ್ಥಳವಾಗಿ ಜಾಲಿಕಟ್ಟೆ ಪರಿವರ್ತನೆಯಾಗಿದೆ. ಕಟ್ಟೆ ಪಕ್ಕದಲ್ಲಿ ಹಾಕುವ ಉಳಿದ ಆಹಾರ ಪದಾರ್ಥ ಕಾಲಕ್ರಮೇಣ ಕೊಳೆತು ನೀರು ಸೇರಿ ಕಲುಷಿತವಾಗುವ ಸಾಧ್ಯತೆ ಇದೆ. ಊಟದ ಟೇಬಲ್‌ಗೆ ಹಾಸುವ ಪೇಪರ್, ವಿವಿಧ ಸಾಮಗ್ರಿಗಳಿಂದ ತೆಗೆದ ಪ್ಯಾಕಿಂಗ್ ಕವರ್ ಹಾಗೂ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿಗಳು ಕಟ್ಟೆ ನೀರಿನಲ್ಲಿ ಸೇರುತ್ತಿವೆ. ಜನರು ಜಾಗೃತರಾಗಿ ತ್ಯಾಜ್ಯ ಹಾಕುವುದನ್ನು ನಿಲ್ಲಿಸದಿದ್ದರೆ, ಜಾನುವಾರು ನೀರು ಕುಡಿಯುವ ಕಟ್ಟೆ, ತ್ಯಾಜ್ಯದ ಗುಂಡಿ ಆಗುತ್ತದೆ ಎಂಬ ಆತಂಕದ ನುಡಿ ರೈತ ಸಂತೋಷ್ ಅವರಿಂದ ಕೇಳಿ ಬಂತು.

ಘಟ್ಟದಹಳ್ಳಿಯ ಜಾಲಿ ಕಟ್ಟೆ ಮಾತ್ರವಲ್ಲದೇ, ಬಹುತೇಕ ಕೆರೆ ಕಟ್ಟೆಗಳ ಬಳಿ ತ್ಯಾಜ್ಯ ರಾಶಿ ಬಂದು ಬೀಳುತ್ತಿದೆ. ಸಮೀಪದಲ್ಲಿ ಹಾಕಿದ ತ್ಯಾಜ್ಯ, ಮಳೆ, ಗಾಳಿ ಯಾವುದಾದರೂ ಸಂದರ್ಭದಲ್ಲಿ ಕೆರೆ, ಕಟ್ಟೆ ಸೇರುವ ಸಾಧ್ಯತೆ ಇರುತ್ತದೆ. ಕೆಲವರು ಕೆರೆ, ಕಟ್ಟೆ ಸಂಗ್ರಹದ ನೀರಿಗೆ ತ್ಯಾಜ್ಯ ಹಾಕುವುದರಿಂದ ಬೇಗ ನೀರು ಕಲುಷಿತವಾಗುತ್ತದೆ. ಮೀನು ಮೊದಲಾದ ನೀರಿನಲ್ಲಿ ವಾಸಿಸುವ ಜಲಚರಗಳು ಸತ್ತು ದಡಕ್ಕೆ ಬಂದು ಬಿದ್ದು ದುರ್ವಾಸನೆ ಹರಡುವ ಸಾಧ್ಯತೆ ಇರುತ್ತದೆ ಎಂದು ರೈತ ಕುಮಾರ ಸ್ವಾಮಿ ಹೇಳಿದರು.

ಎಲ್.ಈ.ಜಯಕುಮಾರ್  
ಜಿ.ಜೆ.ಸಂತೋಷ್ 
ನೀರು ಸಂಗ್ರಹಣ ತಾಣಗಳಲ್ಲಿ ತ್ಯಾಜ್ಯ ತುಂಬಿದರೆ ಅಂತರ್ಜಲಕ್ಕೆ ಹೊಡೆತ ಬೀಳುತ್ತದೆ. ಕೆರೆ ಕಟ್ಟೆಗಳ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು
ಎಲ್.ಈ.ಜಯಕುಮಾರ್ ಗ್ರಾ.ಪಂ. ಮಾಜಿ ಅಧ್ಯಕ್ಷ
ಕೆರೆ ಕಟ್ಟೆಗಳಿಗೆ ತ್ಯಾಜ್ಯ ಸುರಿಯುವುದರಿಂದ ಜಲ ಮಾಲಿನ್ಯ ವಾಯು ಮಾಲಿನ್ಯ ಹೆಚ್ಚುತ್ತದೆ. ಜನರು ಜಾಗೃತರಾಗಿ ತ್ಯಾಜ್ಯ ಸುರಿಯಬಾರದು
ಜಿ.ಜೆ.ಸಂತೋಷ್ ಘಟ್ಟದಹಳ್ಳಿ ರೈತ

ಜನರು ಜಾಗೃತರಾಗಬೇಕು

ಡೆಂಗಿ ಚಿಕೂನ್ ಗುನ್ಯ ರೋಗ ಬರುವ ಮೊದಲು ಕಾಲರಾ ಮಲೇರಿಯಾ ಹರಡುತ್ತಿದ್ದ ಕಾಲದಿಂದಲೂ ನೀರು ಸಂರಕ್ಷಣೆಯ ಕೂಗು ಕೇಳಿ ಬಂದಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಯಿಂದ ನೀರು ಸ್ವಚ್ಛವಾಗಿ ಇಟ್ಟುಕೊಳ್ಳುವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೃಷ್ಣಪ್ಪ ಪೂಜಾರಿ ಹೇಳಿದರು. ಆರೋಗ್ಯ ಇಲಾಖೆಯವರು ಈಗ ವಾರಕ್ಕೊಂದು ಬಾರಿ ಲಾರ್ವಾ ಸಮೀಕ್ಷೆ ನಡೆಸಿ ನೀರಿನ ಸಂರಕ್ಷಣೆ ಜಾಗೃತಿ ಮೂಡಿಸುತ್ತಿದ್ದಾರೆ. ಮನೆಯಲ್ಲಿ ಸಂಗ್ರಹಿಸುವ ಹಾಗೂ ಕೆರೆಕಟ್ಟೆ ನೀರಿನ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು. ಕೆರೆ ಕಟ್ಟೆ ನೀರಿಗೆ ತ್ಯಾಜ್ಯ ಸುರಿಯುವವರಿಗೆ ದಂಡ ವಿಧಿಸಬಹುದು. ಅಂತಹ ಸನ್ನಿವೇಶ ತೆಗೆದುಕೊಳ್ಳದೇ ಎಲ್ಲರೂ ನೀರಿನ ಸಂರಕ್ಷಣೆಗೆ ಕೈಜೋಡಿಸಬೇಕು. ರಾಜಸ್ಥಾನದಲ್ಲಿ ನೀರಿಗಾಗಿ ಪಡಬಾರದ ಕಷ್ಟ ಅನುಭವಿಸುತ್ತಿದ್ದಾರೆ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.