ಆಲೂರು: ಎರಡು ತಿಂಗಳಿನಿಂದ ಬಿಡುವಿಲ್ಲದೇ ಮಳೆ ಆಗುತ್ತಿರುವುದರಿಂದ ಶುಂಠಿ ಬೆಳೆಗೆ ಎಲೆಚುಕ್ಕಿ ರೋಗ ತಗುಲಿದ್ದು, ಕ್ರಿಮಿನಾಶಕ ಸಿಂಪಡಿಸಿದರೂ ರೋಗ ನಿವಾರಣೆ ಆಗುತ್ತಿಲ್ಲ. ಇದರಿಂದಾಗಿ ರೈತರು ಬೆಳೆ ಕಳೆದುಕೊಳ್ಳುವ ಆತಂಕಕ್ಕೆ ಒಳಗಾಗಿದ್ದಾರೆ.
ಬಹು ವರ್ಷಗಳಿಂದ ಆಲೂಗಡ್ಡೆ ಬೆಳೆಯಲಾಗುತ್ತಿತ್ತು. ಅಂಗಮಾರಿ ರೋಗ ತೀವ್ರವಾಗಿದ್ದರಿಂದ ಆಲೂಗಡ್ಡೆ ಬೆಳೆಯುವುದನ್ನು ನಿಲ್ಲಿಸಿದರು. ಎರಡು ದಶಕಗಳ ಹಿಂದೆ ಕೇರಳದ ಕೆಲ ಬಂಡವಾಳಶಾಯಿಗಳು ಜಿಲ್ಲೆಗೆ ಬಂದು ರೈತರಿಂದ ಭೂಮಿ ಬಾಡಿಗೆಗೆ ಪಡೆದು ಶುಂಠಿ ಬೆಳೆಯಲು ಆರಂಭಿಸಿದರು. ಅತ್ಯುತ್ತಮ ಬೆಳೆ ಹಾಗೂ ಲಾಭ ಕಂಡುಬಂದಿದ್ದರಿಂದ, ಸ್ಥಳೀಯ ರೈತರು ಶುಂಠಿಗೆ ಹೆಚ್ಚಿನ ಆಸಕ್ತಿ ತೋರಿದರು. ಕೆಲ ವರ್ಷಗಳ ಹಿಂದೆ ಶುಂಠಿ ಬೆಳೆದು, ಇಲ್ಲಿನ ರೈತರು ಲಕ್ಷಾಂತರ ರೂಪಾಯಿ ಸಂಪಾದಿಸಿದ್ದರು.
ವರ್ಷದಿಂದ ವರ್ಷಕ್ಕೆ ಶುಂಠಿ ಬೆಳೆಯುವ ರೈತರು ಅಧಿಕವಾಗಿದ್ದು, ಇತ್ತೀಚೆಗೆ ಶುಂಠಿ ನಾಟಿ ಮಾಡುವ ಹಂತದಿಂದಲೇ ಕ್ರಿಮಿನಾಶಕ ಬಳಸಬೇಕಾಗಿದೆ. ಬೆಳೆ ಹುಟ್ಟಿ ಸುಮಾರು ಏಳೆಂಟು ತಿಂಗಳು ಆಗುವವರೆಗೂ ಕ್ರಿಮಿನಾಶಕ ಸಿಂಪಡಿಸಿ ಕಾಪಾಡಬೇಕು.
ಶುಂಠಿ ಬೆಳೆ ತಂಪು ವಾತಾವರಣದಲ್ಲಿ ಬೆಳೆಯುತ್ತದೆ. ಆದರೆ, ಆಗಾಗ ಬಿಸಿಲು ವಾತಾವರಣ ಇದ್ದರೆ ಚೆನ್ನಾಗಿ ಬೆಳೆಯುತ್ತದೆ. ಎರಡು ತಿಂಗಳಿನಿಂದ ಬಿಡುವಿಲ್ಲದೇ ತುಂತುರು ಮಳೆ ಆಗುತ್ತಿರುವುದರಿಂದ ರೋಗ ಎಡಬಿಡದೇ ಬೆಳೆ ಸಂಪೂರ್ಣ ಆವರಿಸಿಕೊಂಡು ಗಿಡಗಳು ಹಳದಿ ಬಣ್ಣಕ್ಕೆ ತಿರುಗಿ ಶುಂಠಿ ಕೊಳೆಯುತ್ತಿದೆ.
ಪ್ರತಿ ವರ್ಷ ಅದೃಷ್ಟ ಪರೀಕ್ಷೆಗೆ ಒಳಗಾಗುವ ರೈತರು, ಈ ವರ್ಷ ಉತ್ತಮ ಬೆಳೆ ಮತ್ತು ಬೆಲೆ ಸಿಗುತ್ತದೆ ಎಂಬ ಆಶಾಭಾವದಿಂದ ಶುಂಠಿ ಬೆಳೆಯುತ್ತಾರೆ. ಆದರೆ ಉತ್ತಮ ಬೆಳೆ ಇದ್ದಾಗ ಬೆಲೆ ಕುಸಿಯುತ್ತದೆ. ಬೆಳೆ ಇಲ್ಲದ ವರ್ಷದಲ್ಲಿ ಬೆಲೆ ಉತ್ತಮವಾಗಿರುತ್ತದೆ. ಇಂತಹ ಪರಿಸ್ಥಿತಿಯಿಂದ ರೈತರು ಸಂಕಷ್ಟ ಅನುಭವಿಸುವಂತಾಗಿದೆ.
ಕ್ರಿಮಿನಾಶಕ ಗೊಬ್ಬರ ಬಳಕೆಯಿಂದ ವಾಣಿಜ್ಯ ಬೆಳೆಗಳು ಸಂಪೂರ್ಣ ನೆಲಕಚ್ಚುತ್ತಿವೆ. ಹೊಸ ಭೂಮಿಗೆ ಶುಂಠಿ ಜೋಳ ಬಿತ್ತನೆ ಮಾಡಿದರೂ ರೋಗ ತಪ್ಪುತ್ತಿಲ್ಲ.ಎಂ.ಎಸ್. ನವೀನ್ ಮರಸು ಗ್ರಾಮದ ಕೃಷಿಕ
ತುಂತುರು ಮಳೆ ತೇವಾಂಶ ಇರುವುದರಿಂದ ಶುಂಠಿಗೆ ಎಲೆಚುಕ್ಕಿ ಕೊಳೆರೋಗ ಕಾಣಿಸಿಕೊಂಡಿದೆ. ನೀರು ನಿಲ್ಲದ ಭೂಮಿಯಲ್ಲಿ ಬಿಸಿಲು ಬಂದರೆ ಅಲ್ಪಸ್ವಲ್ಪ ಉಳಿಯಬಹುದು.ಕೇಶವಪ್ರಸಾದ್ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ
ಎಡಬಿಡದೇ ಮಳೆ ಆಗುತ್ತಿದ್ದು ತೇವಾಂಶ ವಿಪರೀತವಾಗುತ್ತಿದೆ. ಎಲ್ಲ ಬೆಳೆಗಳು ಮುದುಡಿವೆ. ಕೂಡಲೇ ಬಿಸಿಲು ಶುರುವಾದರೆ ಮಾತ್ರ ಅಲ್ಪಸ್ವಲ್ಪ ಬೆಳೆ ಸಿಗಬಹುದು.ರಮೇಶಕುಮಾರ್ ಕೃಷಿ ಇಲಾಖೆ ಸಹಾಯಕ ನಿರ್ದೇಶಕ
ಹೆಚ್ಚಿದ ರಾಸಾಯನಿಕ ಬಳಕೆ:
ಭೂಮಿಗೆ ಹಾಕುವ ರಾಸಾಯನಿಕ ಗೊಬ್ಬರ ಕ್ರಿಮಿನಾಶಕದಿಂದ ಮಣ್ಣಿನಲ್ಲಿ ಇರಬೇಕಾದ ಪೋಷಕಾಂಶಗಳು ನಾಶವಾಗಿ ಭೂಮಿ ಬಂಜರಾಗಿದೆ. ಅತಿಯಾಗಿ ರಾಸಾಯನಿಕ ಬಳಸುತ್ತಿರುವುದರಿಂದ ಯಾವುದೇ ಬೆಳೆ ಬೆಳೆದರೂ ರೋಗಕ್ಕೆ ಬಲಿಯಾಗುತ್ತಿವೆ ಎಂದು ರೈತರು ಹೇಳುತ್ತಿದ್ದಾರೆ. ಕೆಲ ವರ್ಷಗಳಿಂದ ಶುಂಠಿ ಮುಸುಕಿನ ಜೋಳ ಭತ್ತ ಸೇರಿದಂತೆ ಯಾವುದೇ ಬೀಜವನ್ನು ಕೃಷಿ ಇಲಾಖೆ ಖಾಸಗಿ ಅಂಗಡಿಗಳಿಂದ ಕೊಂಡು ಬಿತ್ತನೆ ಮಾಡುತ್ತಿದ್ದಾರೆ. ಪ್ರಾರಂಭದಿಂದಲೇ ಕ್ರಿಮಿನಾಶಕ ಸಿಂಪರಣೆ ಮಾಡುವುದು ಅನಿವಾರ್ಯ ಆಗುತ್ತಿದ್ದು ಕ್ರಿಮಿನಾಶಕ ಗೊಬ್ಬರ ಕಂಪನಿಗಳಿಗೆ ಲಾಭ ಎನ್ನುವಂತಾಗಿದೆ ಎಂದು ರೈತರು ಹೇಳುತ್ತಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.