ADVERTISEMENT

ನೂತನ ಮೇಯರ್‌ ಆಗಿ ಗಿರೀಶ್ ಅವಿರೋಧ ಆಯ್ಕೆ

ಹಾಸನ ಮಹಾನಗರ ಪಾಲಿಕೆ: ಚಂದ್ರೇಗೌಡ ಸದಸ್ಯತ್ವ ಅನರ್ಹತೆಯಿಂದ ತೆರವಾಗಿದ್ದ ಸ್ಥಾನ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 2:58 IST
Last Updated 18 ಸೆಪ್ಟೆಂಬರ್ 2025, 2:58 IST
ಹಾಸನ ಮಹಾನಗರ ಪಾಲಿಕೆ ಮೇಯರ್‌ ಆಗಿ ಆಯ್ಕೆಯಾದ ಗಿರೀಶ್‌ ಚೆನ್ನವೀರಪ್ಪ ಅವರನ್ನು ಮೈಸೂರಿನ ಪ್ರಭಾರ ಪ್ರಾದೇಶಿಕ ಆಯುಕ್ತ ವೆಂಕಟರಾಜ ಅಭಿನಂದಿಸಿದರು.
ಹಾಸನ ಮಹಾನಗರ ಪಾಲಿಕೆ ಮೇಯರ್‌ ಆಗಿ ಆಯ್ಕೆಯಾದ ಗಿರೀಶ್‌ ಚೆನ್ನವೀರಪ್ಪ ಅವರನ್ನು ಮೈಸೂರಿನ ಪ್ರಭಾರ ಪ್ರಾದೇಶಿಕ ಆಯುಕ್ತ ವೆಂಕಟರಾಜ ಅಭಿನಂದಿಸಿದರು.   

ಹಾಸನ: ಇಲ್ಲಿನ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ 8ನೇ ವಾರ್ಡ್‍ನ ಜೆಡಿಎಸ್ ಸದಸ್ಯ ಗಿರೀಶ್ ಚನ್ನವೀರಪ್ಪ ಅವಿರೋಧ ಆಯ್ಕೆಯಾಗಿದ್ದಾರೆ.

ಈ ಹಿಂದೆ ಮೇಯರ್ ಆಗಿದ್ದ ಎಂ. ಚಂದ್ರೇಗೌಡ ಅವರ ಸದಸ್ಯತ್ವ ಅನರ್ಹಗೊಂಡ ನಂತರ ಖಾಲಿ ಇದ್ದ ಸ್ಥಾನಕ್ಕೆ ಈ ಮೊದಲು ಸೆ.10ರಂದು ಚುನಾವಣೆ ನಿಗದಿಯಾಗಿತ್ತು. ಆದರೆ ಮೈಸೂರು ಪ್ರಾದೇಶಿಕ ಆಯುಕ್ತರು ವರ್ಗಾವಣೆಗೊಂಡಿದ್ದರಿಂದ ಬುಧವಾರ ಮುಂದೂಡಿಕೆಯಾಗಿತ್ತು.

ಮೇಯರ್‌ ಸ್ಥಾನಕ್ಕೆ ಗಿರೀಶ್ ಚನ್ನವೀರಪ್ಪ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿಯಾಗಿದ್ದ ಮೈಸೂರು ಪ್ರಭಾರ ಪ್ರಾದೇಶಿಕ ಆಯುಕ್ತ ವೆಂಕಟರಾಜ, ಮಧ್ಯಾಹ್ನ 1.30ರ ನಂತರ ಅವಿರೋಧ ಆಯ್ಕೆ ಘೋಷಿಸಿದರು.

ADVERTISEMENT

ಬಿಜೆಪಿ ತಟಸ್ಥ: ಚಂದ್ರೇಗೌಡ ಅನರ್ಹತೆಯಿಂದ ಪಾಲಿಕೆ ಒಟ್ಟು ಸದಸ್ಯ ಬಲ 34ಕ್ಕೆ ಕುಸಿದಿದ್ದು, ಜೆಡಿಎಸ್ 16, ಬಿಜೆಪಿ 13, ಪಕ್ಷೇತರ 3 ಹಾಗೂ ಕಾಂಗ್ರೆಸ್‍ನ ಇಬ್ಬರು ಸದಸ್ಯರಿದ್ದು, ಇತರರ ಬೆಂಬಲ ಪಡೆದು ಬಿಜೆಪಿಯೂ ಮೇಯರ್‌ ಸ್ಥಾನಕ್ಕೆ ಸ್ಪರ್ಧಿಸಬಹುದು ಎನ್ನುವ ನಿರೀಕ್ಷೆ ಮಾಡಲಾಗಿತ್ತು.

ಆದರೆ, ಅಂತಹ ಯಾವುದೇ ಬೆಳವಣಿಗೆಗಳು ನಡೆಯದ ಹಿನ್ನೆಲೆಯಲ್ಲಿ ಮೇಯರ್ ಚುನಾವಣೆಯಿಂದ ಬಿಜೆಪಿ ಹೊರಗುಳಿಯಿತು. ಆ ಪಕ್ಷದ ಯಾವುದೇ ಸದಸ್ಯರು ಸಭೆಗೆ ಆಗಮಿಸಿರಲಿಲ್ಲ.

ನೂತನ ಮೇಯರ್ ಅವರನ್ನು ಸ್ಥಳೀಯ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್, ವಿಧಾನ ಪರಿಷತ್‌ ಸದಸ್ಯ ಡಾ.ಸೂರಜ್ ರೇವಣ್ಣ, ಉಪ ಮೇಯರ್ ಹೇಮಲತಾ, ಜೆಡಿಎಸ್ ಸದಸ್ಯರು ಹಾಗೂ ಅವರ ಕುಟುಂಬದವರು ಅಭಿನಂದಿಸಿದರು.

ಈ ವೇಳೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ, ಮೇಯರ್ ಚುನಾವಣೆಯಲ್ಲಿ ಪಾಲಿಕೆ ಎಲ್ಲ ಸದಸ್ಯರು ಒಮ್ಮತದಿಂದ ಗಿರೀಶ್ ಅವರನ್ನು ಆಯ್ಕೆ ಮಾಡುವ ಮೂಲಕ ಜಿಲ್ಲೆಯ ರಾಜಕೀಯದಲ್ಲಿ ಹೊಸ ಸಂದೇಶ ಸಾರಿದ್ದಾರೆ. ಈ ಹಿನ್ನಲೆಯಲ್ಲಿ ಸದಸ್ಯರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಮಾಜಿ ಮೇಯರ್ ಎಂ. ಚಂದ್ರೇಗೌಡರ ಬಗ್ಗೆ ನಮಗೆ ಯಾವುದೇ ಅಸಮಾಧಾನವಿಲ್ಲ. ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದರಿಂದ ಅವರ ವಿರುದ್ಧ ನ್ಯಾಯಾಲಯದ ಮೊರೆ ಹೋಗಬೇಕಾಯಿತು ಎಂದರು.

ಈ ಹಿಂದೆ ನಗರಪಾಲಿಕೆಯಲ್ಲಿ ನಡೆದ ಅವಿಶ್ವಾಸ ನಿರ್ಣಯ ಸಭೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಒಟ್ಟಾಗಿ ಅವಿಶ್ವಾಸ ನಿರ್ಣಯದಲ್ಲಿ ಪಾಲ್ಗೊಂಡರು. ಈ ವೇಳೆ ಜೆಡಿಎಸ್ ಸದಸ್ಯರಿಗೆ ನೋವು ಉಂಟಾಯಿತು. ಇದೀಗ ಮಾಜಿ ಶಾಸಕರ ನಡೆ ಯಾವ ಕಡೆ ಎಂಬುದನ್ನು ಮಾಧ್ಯಮದವರೇ ಹೇಳಬೇಕು ಎಂದರು.

ನಮ್ಮ ಪಕ್ಷದ ಉದ್ದೇಶ ಎಲ್ಲ ಸದಸ್ಯರಿಗೂ ಅಧಿಕಾರ ಸಿಗಬೇಕು. ಅದರಂತೆ ಮುಂದಿನ ಅವಧಿಗೆ ಮತ್ತಿಬ್ಬರು ಅಧಿಕಾರ ವಹಿಸಿಕೊಳ್ಳುವ ಸಂದರ್ಭ ಬರಲಿದೆ. ಈ ಬಗ್ಗೆ ಪಕ್ಷದ ಹಿರಿಯ ಮುಖಂಡರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.

ಹಾಸನ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಶಾಸಕ ಎಚ್‌.ಪಿ. ಸ್ವರೂಪ್‌ ಹಾಗೂ ವಿಧಾನ ಪರಿಷತ್‌ ಸದಸ್ಯ ಡಾ.ಸೂರಜ್‌ ರೇವಣ್ಣ ನೇತೃತ್ವದಲ್ಲಿ ಪಾಲ್ಗೊಂಡಿದ್ದ ಜೆಡಿಎಸ್‌ ಸದಸ್ಯರು.

‘ಏಪ್ರಿಲ್‌ವರೆಗೆ ವಿಸ್ತರಿಸಿದರೆ ಮತ್ತಿಬ್ಬರಿಗೆ ಅವಕಾಶ

’ ಮುಂದಿನ ತಿಂಗಳು ನಗರಸಭೆ ಸದಸ್ಯರ ಅವಧಿ ಮುಗಿಯಲಿದೆ. ಆದರೆ ಮುಂದಿನ ಏಪ್ರಿಲ್‌ವರೆಗೂ ಅವಧಿ ವಿಸ್ತರಿಸುವಂತೆ ನಗರಸಭೆ ಸದಸ್ಯರು ನ್ಯಾಯಾಲಯದ ಮೆಟ್ಟಿಲೇರಿದ್ದು ಈ ಸಂಬಂಧ ತೀರ್ಪು ಹೊರಬಿದ್ದರೆ ಮತ್ತಿಬ್ಬರು ಸದಸ್ಯರು ಮೇಯರ್ ಸ್ಥಾನವನ್ನು ಮುಂದಿನ ಅವಧಿಗೆ ಹಂಚಿಕೊಳ್ಳಲಿದ್ದಾರೆ ಎಂದು ಶಾಸಕ ಸ್ವರೂಪ್ ಪ್ರಕಾಶ್ ಹೇಳಿದರು. ತಮ್ಮ ತಂದೆ ಎಚ್.ಎಸ್. ಪ್ರಕಾಶ್ ಶಾಸಕರಾಗಿದ್ದ ಅವಧಿಯಲ್ಲಿ ನಗರಸಭೆ ಅಧ್ಯಕ್ಷರಾಗಿ ಚನ್ನವೀರಪ್ಪ ಅವರು ಉತ್ತಮ ಕೆಲಸ ಮಾಡಿದ್ದಾರೆ. ಅವರ ಪುತ್ರ ಗಿರೀಶ್ ಚನ್ನವೀರಪ್ಪ ಇಂದು ಮೇಯರ್ ಆಗಿ ಆಯ್ಕೆಕೊಂಡಿದ್ದು ಉತ್ತಮ ಆಡಳಿತ ನೀಡುವ ವಿಶ್ವಾಸವಿದೆ ಎಂದರು. ಈ ಹಿಂದೆ ಚಂದ್ರೇಗೌಡರು ಪಕ್ಷ ವಿರೋಧಿ ಕೆಲಸ ಮಾಡಿದರು. ಅವರಿಗೆ ತಕ್ಕ ಪಾಠ ಕಲಿಸಿದಂತಾಗಿದೆ. ಈ ಹಿಂದೆ ನಗರಸಭೆಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ರೇವಣ್ಣ ಅವರೇ ಬಿಜೆಪಿಯ ಮುಖಂಡರೊಂದಿಗೆ ಮಾತುಕತೆ ನಡೆಸಿ ಉಪಾಧ್ಯಕ್ಷ ಸ್ಥಾನವನ್ನು ನೀಡಿದ್ದರು. ಆದರೆ ನಂತರ ನಡೆದ ಬೆಳವಣಿಗೆ ಎಲ್ಲರಿಗೂ ತಿಳಿದಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.