
ಹಾಸನ: ನಗರದ ಜಿಲ್ಲಾ ಸಿಂಥೆಟಿಕ್ ಕ್ರೀಡಾಂಗಣದಲ್ಲಿ ಅಮೆಚೂರ್ ಅಥ್ಲೆಟಿಕ್ ಸಂಸ್ಥೆ ವತಿಯಿಂದ ನವೆಂಬರ್ 23 ರಂದು ಬೆಳಿಗ್ಗೆ 9.30ಕ್ಕೆ ಬಾಲಕಿಯರ ಜಿಲ್ಲಾ ಮಟ್ಟದ ಅಸ್ಮಿತ ಅಥ್ಲೆಟಿಕ್ ಲೀಗ್ 2025-26 ಆಯೋಜಿಸಲಾಗಿದೆ ಎಂದು ಸಂಸ್ಥೆಯ ಜಂಟಿ ಕಾರ್ಯದರ್ಶಿ ಎಸ್.ಎಲ್. ಪ್ರಸನ್ನ ಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ಮತ್ತು ಹೊಸ ಅನ್ವೇಷಣೆಯ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಕಾಂಗ್ರೆಸ್ ಮುಖಂಡ ಡಿ.ಸಿ. ಚಂದ್ರಶೇಖರ್ ಉದ್ಘಾಟಿಸಲಿದ್ದು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಡಾ. ಆನಂದಮೂರ್ತಿ, ಅಂತರರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಪಟು ಎಂ.ಕೆ. ಆಶಾ, ಟೈಮ್ಸ್ ಗ್ರೂಪ್ ಕಾರ್ಯದರ್ಶಿ ಬಿ.ಕೆ. ಗಂಗಾಧರ್, ಸರ್ಕಾರಿ ಕಲಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಟಿ.ಆರ್. ಮಹೇಂದ್ರ ಕುಮಾರ್ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಖೇಲೋ ಇಂಡಿಯಾ ಯೋಜನೆಯಡಿ, ಭಾರತೀಯ ಕ್ರೀಡಾ ಪ್ರಾಧಿಕಾರ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವಾಲಯ ಹಾಗೂ ಇಂಡಿಯನ್ ಅಥ್ಲೆಟಿಕ್ ಫೆಡರೇಶನ್ ಸಂಯುಕ್ತವಾಗಿ, ದೇಶದಾದ್ಯಂತ ಬಾಲಕಿಯರಿಗೆ ಕ್ರೀಡೆಯಲ್ಲಿ ಅವಕಾಶ ಒದಗಿಸಲು ಅಸ್ಮಿತಾ ಅಥ್ಲೆಟಿಕ್ ಲೀಗ್ 2025-26 ಅನ್ನು ಆರಂಭಿಸಿವೆ ಎಂದರು.
ಇದರ ಅಂಗವಾಗಿ ಹಾಸನದಲ್ಲಿ 12 ರಿಂದ 14 ವರ್ಷ ಹಾಗೂ 14-16 ವರ್ಷ ವಯೋಮಾನದ ಬಾಲಕಿಯರಿಗಾಗಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರಿಗಾಗಿ ಎ, ಬಿ, ಸಿ ಮೂರು ವಿಭಾಗಗಳಿದ್ದು, ಎ ವಿಭಾಗದಲ್ಲಿ 60 ಮೀ. ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಬಿ ವಿಭಾಗದಲ್ಲಿ 60 ಮೀ. ಓಟ, ಉದ್ದಜಿಗಿತ, ಶಾಟ್‌ಪುಟ್, ಸಿ ವಿಭಾಗದಲ್ಲಿ 60 ಮೀ. ಓಟ, 600 ಮೀ. ಓಟ, ಉದ್ದ ಜಿಗಿತ, ಕಿಡ್ಸ್ ಜಾವೆಲಿನ್ ಸ್ಪರ್ಧೆ ಇರಲಿದೆ. 16 ವರ್ಷದೊಳಗಿನ ಬಾಲಕಿಯರಿಗಾಗಿ ವಿವಿಧ ಓಟ, ಜಿಗಿತ ಹಾಗೂ ಡಿಸ್ಕಸ್ ಥ್ರೋ ಸ್ಪರ್ಧೆಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ವಿಜೇತರ ಆಯ್ಕೆ ಮತ್ತು ಸ್ಪರ್ಧೆಗಳ ಮೌಲ್ಯಮಾಪನಕ್ಕಾಗಿ ಎಎಫ್‌ಐ ನೇಮಿಸಿರುವ ತರಬೇತಿದಾರರು ಅಂತರರಾಷ್ಟ್ರೀಯ ಕ್ರೀಡಾಪಟು ಎಂ.ಕೆ. ಆಶಾ ಹಾಜರಾಗಲಿದ್ದಾರೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ಉದ್ಯೋಗಗಳಲ್ಲಿ ಶೇ 3 ಮೀಸಲು, ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಯಲ್ಲಿ ಕೂಡ ಕ್ರೀಡಾಪಟುಗಳಿಗೆ ವಿಶೇಷ ಅವಕಾಶಗಳಿವೆ. ಜಿಲ್ಲೆಯ ಬಾಲಕಿಯರು ಈ ಅವಕಾಶವನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಸಂಸ್ಥೆಯ ನವೀನ್ ಕುಮಾರ್, ಅಜಯ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.