ADVERTISEMENT

ಜಾಗತಿಕ ತಾಪಮಾನ: ರೈತರೇ ಮೊದಲ ತಲೆದಂಡ–ವಿಜ್ಞಾನಿ ರಾಜೇಗೌಡ

ವೈಜ್ಞಾನಿಕ ನಾಯಕತ್ವ ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ವಿಜ್ಞಾನಿ ಡಾ.ರಾಜೇಗೌಡ ಅಭಿಮತ

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 13:24 IST
Last Updated 16 ಜೂನ್ 2025, 13:24 IST
ಹಾಸನದಲ್ಲಿ ನಡೆದ ವೈಜ್ಞಾನಿಕ ನಾಯಕತ್ವ ಶಿಬಿರದಲ್ಲಿ ಪಾಲ್ಗೊಂಡಿದ್ದ ಸದಸ್ಯರು
ಹಾಸನದಲ್ಲಿ ನಡೆದ ವೈಜ್ಞಾನಿಕ ನಾಯಕತ್ವ ಶಿಬಿರದಲ್ಲಿ ಪಾಲ್ಗೊಂಡಿದ್ದ ಸದಸ್ಯರು   

ಹಾಸನ: ಜಾಗತಿಕ ತಾಪಮಾನದಿಂದ ಹವಾಮಾನ ಬದಲಾವಣೆ ಆಗುತ್ತಿದ್ದು, ಇದರ ಮೊದಲ ತಲೆದಂಡವೇ ರೈತಸಮುದಾಯ, ಅವರ ಬದುಕು ಮತ್ತು ಕೃಷಿ ಎಂದು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ, ಮುಖ್ಯಸ್ಥ ಡಾ.ರಾಜೇಗೌಡ ತಿಳಿಸಿದರು.

ಇಲ್ಲಿನ ಕಂದಲಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಆಯೋಜಿಸಿರುವ ಎರಡು ದಿನಗಳ ‘ವೈಜ್ಞಾನಿಕ ನಾಯಕತ್ವ ವ್ಯಕ್ತಿತ್ವ ವಿಕಸನ’ ಸನಿವಾಸ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಈಗಿನ ಭೂತಾಪಮಾನ ಮಲೆನಾಡಿನಲ್ಲೂ 40 ಡಿಗ್ರಿ ಸೆಲ್ಸಿಯಸ್‌ ದಾಟಿ ಹೋಗುತ್ತಿದೆ ಎಂದು ಹೇಳಿದರು.

ಇನ್ನು ಆಹಾರ ಬೆಳೆ ಹೇಗೆ ಬೆಳೆಯಲು ಸಾಧ್ಯ? ಕೃಷಿ ಸಮುದಾಯ ಬದುಕಲು ಹೇಗೆ ಸಾಧ್ಯ? ಮಾನವ ಕುಲದ ಆಹಾರ ಉತ್ಪತ್ತಿ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ ಅವರು, ಜಾಗತಿಕವಾಗಿ ಆಹಾರದ ಬಿಕ್ಕಟ್ಟು, ಕುಡಿಯುವ ನೀರಿನ ಹಾಹಾಕಾರ ಈಗಾಗಲೇ ಭುಗಿಲೇಳುತ್ತಿದೆ. ತಾಪಮಾನ ಏರಿಕೆಯ ಪರಿಣಾಮ ದುಡಿಯುವ ಜನರ ಬದುಕು ತತ್ತರಿಸಿ ಹೋಗುತ್ತಿದೆ ಎಂದು ಅಂಕಿ-ಅಂಶ ಸಮೇತ ವಿವರಿಸಿದರು.

ADVERTISEMENT

ಶಿಬಿರದ ನಿರ್ದೇಶಕ, ಬಿಜಿವಿಎಸ್ ಹಾಸನ ಜಿಲ್ಲಾ ಸಮಿತಿ ಕಾರ್ಯದರ್ಶಿ ಚಿನ್ನೇನಹಳ್ಳಿಸ್ವಾಮಿ, ಶಿಬಿರಲ್ಲಿ ಪರಿಸರ ವಿಪ್ಲವಗಳು, ಶೈಕ್ಷಣಿಕ ಸ್ಥಿತಿಗತಿಗಳು, ಜನರ ಸಾಂಸ್ಕೃತಿಕ ಮಾಲ್ಯಗಳ ಅರಿವು ಇವುಗಳನ್ನು ಅರ್ಥ ಮಾಡಿಕೊಂಡು ತಿಳಿಸುವುದು ಹೇಗೆ ಎಂಬ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

ಶಿಬಿರದ ನಿಯಮ ತಿಳಿಸಿದ ಸಂಚಾಲಕ ಎಚ್.ಆರ್.ರವೀಶ್ ಸ್ವಾಗತಿಸಿ, ನಿರೂಪಿಸಿದರು. ನಂತರದ ಅವಧಿಯಲ್ಲಿ ಜನವಿಜ್ಞಾನ ಚಳವಳಿಯ ಇತಿಹಾಸ ಹಾಗೂ ಅದರ ಅವಶ್ಯಕತೆ ಕುರಿತು ಪಿಪಿಟಿ ಬಿಜಿವಿಎಸ್ ಮಾಜಿ ಕಾರ್ಯದರ್ಶಿ, ಕಾರ್ಮಿಕ ಮುಖಂಡ ಧರ್ಮೇಶ್ ಸಂವಾದ ನಡೆಸಿದರು. ಬಿಜಿವಿಎಸ್ ರಾಜ್ಯ ಸಮಿತಿ ಕಾರ್ಯದರ್ಶಿ ಟಿ.ಎ. ಪ್ರಶಾಂತಬಾಬು, ಬಿಜಿವಿಎಸ್ ಧ್ಯೇಯ ಹಾಗೂ ಗುರಿಗಳ ಕುರಿತು ವಿವರಿಸಿದರು. ಬಿಜಿವಿಎಸ್ ಸದಸ್ಯ ಅಹಮದ್ ಹಗರೆ, ಬಿಜಿವಿಎಸ್ ಸಂವಿಧಾನ ಹಾಗೂ ನಾಯಕತ್ವದ ಕುರಿತು ತರಬೇತಿ ನೀಡಿದರು.

ವಿಜ್ಞಾನ ಸಂವಹನಕ್ಕೆ ಸಾಮಾಜಿಕ ಮಾಧ್ಯಮಗಳ ಬಳಕೆ ಏಕೆ, ಹೇಗೆ ಕುರಿತು ಕೆಪಿಆರ್‌ಎಸ್ ಮುಖಂಡ ಎಚ್.ಆರ್. ನವೀನ್‌ಕುಮಾರ್ ಪ್ರಾತ್ಯಕ್ಷಿಕೆ ನೀಡಿದರು. ಶಿಬಿರಾರ್ಥಿಗಳು ಗುಂಪುಗಳಲ್ಲಿ ಸಂವಾದ ನಡೆಸಲಾಯಿತು. ವಿಜ್ಞಾನ ಬರಹಗಾರ ಕೆ.ಎಸ್.ರವಿಕುಮಾರ್ ಶಿಬಿರದ ಸಮಾರೋಪ ಭಾಷಣ ಮಾಡಿದರು. ಬಿಜಿವಿಎಸ್ ಜಿಲ್ಲಾ ಸಮಿತಿ ಉಪಾಧ್ಯಕ್ಷೆ ಪ್ರಮೀಳಾ, ತಾಲ್ಲೂಕು ಕಾರ್ಯದರ್ಶಿ ಲೋಲಾಕ್ಷಿ ವಿಜ್ಞಾನ, ಪರಿಸರದ ಹಾಡುಗಳನ್ನು ಕಲಿಸಿದರು.

ತಾಪಮಾನ ಏರಿಕೆ; ಪರಿಣಾಮ  

ಕಾಫಿ ಏಲಕ್ಕಿಗಳಿಗೆ ಉಷ್ಣತೆ 29 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾದರೆ ಅವು ಹಾಳಾಗುತ್ತವೆ. ಹಾಸನ ಜಿಲ್ಲೆಯ ಪ್ರಮುಖ ಬೆಳೆ ತೆಂಗು. ಇದರ ಉಷ್ಣತೆ 45 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾದರೆ ಹೂವೇ ನಿಲ್ಲುವುದಿಲ್ಲ. ಹಾಗಾಗಿ ಉತ್ತರ ಕರ್ನಾಟಕದಲ್ಲಿ ತೆಂಗು ಬೆಳೆಯುವುದಿಲ್ಲ. ರಾಗಿ ತರಕಾರಿ ಕೂಡ 40 ಡಿಗ್ರಿ ಉಷ್ಣಾಂಶ ದಾಟಿದರೆ ಕುಡಿ ಒಡೆಯುವುದೇ ಇಲ್ಲ ಎಂದು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮುಖ್ಯಸ್ಥ ಡಾ.ರಾಜೇಗೌಡ ವಿವರಿಸಿದರು.    

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.