ADVERTISEMENT

ಕ್ವಾರಂಟೈನ್ ಕೇಂದ್ರದಲ್ಲಿ ಉತ್ತಮ ಸೇವೆ: 14 ದಿನ ಕಳೆದವರ ಹಂಚಿಕೊಂಡ ಅನುಭವ

​ಪ್ರಜಾವಾಣಿ ವಾರ್ತೆ
Published 26 ಮೇ 2020, 17:00 IST
Last Updated 26 ಮೇ 2020, 17:00 IST
ಹೊಳೆನರಸೀಪುರ ತಾಲ್ಲೂಕಿನ ಎಸ್. ಅಂಕನಹಳ್ಳಿ ಕ್ವಾರಂಟೈನ್ ಕೇಂದ್ರದಲ್ಲಿ ಊಟ ನೀಡುತ್ತಿರುವುದು
ಹೊಳೆನರಸೀಪುರ ತಾಲ್ಲೂಕಿನ ಎಸ್. ಅಂಕನಹಳ್ಳಿ ಕ್ವಾರಂಟೈನ್ ಕೇಂದ್ರದಲ್ಲಿ ಊಟ ನೀಡುತ್ತಿರುವುದು   

ಹೊಳೆನರಸೀಪುರ: ‘ತಾಲ್ಲೂಕಿನ ಎಸ್.ಅಂಕನಹಳ್ಳಿ ಮೊರಾರ್ಜಿ ವಸತಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿದ್ದವರಿಗೆ ತಾಲ್ಲೂಕು ಆಡಳಿತ ನೀಡುತ್ತಿದ್ದ ಸೇವೆ ಚೆನ್ನಾಗಿತ್ತು’ ಎಂದುತಮಿಳುನಾಡಿನ ಕಾಂಚೀಪುರಂನಿಂದ ಬಂದಿದ್ದ ಜಿ. ಮನೋಜ್, ಮಹಾರಾಷ್ಟ್ರದ ನಾಗಪುರದಿಂದ ಬಂದಿದ್ದ ಶ್ರೀರಾಮ್, ಹೈದರಾಬಾದ್‍ನಿಂದ ಬಂದಿದ್ದ ವಿಜಯ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

14 ದಿನಗಳ ಕಾಲ ಕ್ವಾರಂಟೈನ್‍ನಲ್ಲಿದ್ದು ಎರಡನೇ ಬಾರಿ ಗಂಟಲು ದ್ರವ ಪರೀಕ್ಷೆ ವರದಿಯಲ್ಲಿ ನೆಗಟೀವ್ ಬಂದು ಕ್ವಾರಂಟೈನ್ ಕೇಂದ್ರದಿಂದ ಮನೆಗೆ ಬಂದವರನ್ನು ‘ಪ್ರಜಾವಾಣಿ’ ಮಾತನಾಡಿಸಿದಾಗ ನಾನು ನಮ್ಮ ಮನೆಗೆ ತೆರಳಲು ಇಲ್ಲಿಗೆ ಬಂದಿದ್ದ ದಿನವೇ ನಮ್ಮನ್ನು ತಹಶೀಲ್ದಾರ್ ಕೆ.ಆರ್. ಶ್ರೀನಿವಾಸ್ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಇಲ್ಲಿ ತಂದು ಕ್ವಾರಂಟೈನ್ ಮಾಡಿದರು.

ನಾವು ಮೊದಲು ಹೇಗಪ್ಪಾ ಇಲ್ಲಿ ಇರೋದು ಎಂದು ತುಂಬಾ ಬೇಸರಗೊಂಡಿದ್ದೆವು. ತಹಶೀಲ್ದಾರ್ ಕೆ.ಆರ್. ಶ್ರೀನಿವಾಸ್ ಆಗಾಗ ಬಂದು ನಮ್ಮ ಯೋಗಕ್ಷೇಮ ವಿಚಾರಿಸುತ್ತಾ ನಿಮ್ಮ ಮನೆಯವರು ಹಾಗೂ ಊರಿನ ಆರೋಗ್ಯದ ದೃಷ್ಟಿಯಿಂದ ನಿಮ್ಮನ್ನು ಇಲ್ಲಿ ಕ್ವಾರಂಟೈನ್ ಮಾಡಿದ್ದೇವೆ. 2ನೇ ಬಾರಿಯ ಗಂಟಲು ದ್ರವ ಪರೀಕ್ಷೆಯ ವರದಿ ಬಂದ ದಿನವೇ ನಿಮ್ಮನ್ನು ನಿಮ್ಮ ಮನೆಗಳಿಗೆ ಕಳುಹಿಸುತ್ತೇವೆ ಅಲ್ಲಿಯವರೆಗೂ ಸಹಕರಿಸಿ ಎಂದು ವಿನಂತಿಸಿದ್ದರು.

ADVERTISEMENT

ಅವರು ತೋರಿದ ಕಾಳಜಿಯ ಕಾರಣದಿಂದ ನಾವು ದೃಢ ಮನಸ್ಸಿನಿಂದ ಇಲ್ಲಿ ಉಳಿದೆವು. ಈ ಕೇಂದ್ರದಲ್ಲಿ ಕಾಲಕ್ಕೆ ಸರಿಯಾಗಿ ಊಟ ತಿಂಡಿ ಬರುತ್ತಿತ್ತು. ಊಟ ತಿಂಡಿ ಮನೆಯಷ್ಟು ರುಚಿ ಆಗಿಲ್ಲದಿದ್ದರೂ ಕಳಪೆ ಆಗಿರಲಿಲ್ಲ. ತಾಲ್ಲೂಕು ವೈದ್ಯಾಧಿಕಾರಿ ಡಾ.ರಾಜೇಶ್ ಸೇರಿದಂತೆ ಮೇಲಿಂದ ಮೇಲೆ ಆರೋಗ್ಯ ಅಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು ಬಂದು ನಮ್ಮ ಬಗ್ಗೆ ಹೆಚ್ಚಿನ ಕಾಳಜಿ ತೋರುತ್ತಿದ್ದರು. ಆರೋಗ್ಯ ತಪಾಸಣೆ ಮಾಡುತ್ತಿದ್ದರು. ಮೊದಲು ನಮಗೆ ಕಾಫಿ ಟೀ ಕೊಡುತ್ತಿರಲಿಲ್ಲ. ನಂತರದ ದಿನದಲ್ಲಿ ಕಾಫಿ ಟೀ ಕೊಡಲು ಆರಂಭಿಸಿದರು. ಇಲ್ಲಿನ ವಾತಾವರಣ ಚೆನ್ನಾಗಿತ್ತು.

‘ಹಾಸ್ಟೆಲ್‌ನಲ್ಲಿ ಶೌಚಾಲಯ ವ್ಯವಸ್ಥೆ ಹಾಗೂ ಸ್ನಾನ ಮಾಡಲು ಸರಿ ಆಗಿರಲಿಲ್ಲ. ಇರುವ ಕೆಲವು ಶೌಚಾಲಯದಲ್ಲಿ ನಲ್ಲಿಗಳೇ ಇರಲಿಲ್ಲ. ಕೆಲವರಲ್ಲಿ ಸೌಲಭ್ಯ ಇತ್ತು. ಅದನ್ನು ಬಳಸುತ್ತಿದ್ದೆವು. ನಮಗೆ ನಮ್ಮ ಕಂಪನಿಗಳು ಇಲ್ಲಿಯೇ ಕುಳಿತು ಕೆಲಸ ಮಾಡಲು ಅವಕಾಶ ನೀಡಿದ್ದರಿಂದ ಅಧಿಕಾರಿಗಳೂ ನಮ್ಮ ಕೆಲಸ ಮಾಡಿಕೊಳ್ಳಲು ಅವಕಾಶ ನೀಡಿದ್ದರಿಂದ ಕ್ವಾರಂಟೈನ್ ಕೇಂದ್ರದಲ್ಲಿ ನಮಗೆ ಸಮಯ ಕಳೆಯಲು ಕಷ್ಟ ಆಗಲಿಲ್ಲ’ ಎಂದು ಹೇಳಿದರು.

ಆತಂಕ ದೂರ ಮಾಡಿದ ತಹಶೀಲ್ದಾರ್: ಮುಂಬೈನಿಂದ ಬಂದವರಿಂದ ಕೊರೊನಾ ಹೆಚ್ಚಾಗಿ ಹರಡುತ್ತಿದೆ ಎನ್ನುವುದು ಗೊತ್ತಿತ್ತು. ಮುಂಬೈನಿಂದ ಬಂದವರನ್ನು ನಮ್ಮ ಜೊತೆಯಲ್ಲೇ ಕ್ವಾರಂಟೈನ್ ಮಾಡುತ್ತಾರೆಂಬ ವಿಷಯ ತಿಳಿದು ಆತಂಕ ಗೊಂಡಿದ್ದೆವು. ತಹಶೀಲ್ದಾರ್ ಮುಂಬೈನಿಂದ ಬಂದವರನ್ನು ಮೊದಲ ಮಹಡಿಯಲ್ಲಿ ಇರಿಸಿ ಅವರು ಮಹಡಿಯಿಂದ ಕೆಳಕ್ಕೆ ಇಳಿಯದಂತೆ ಮಾಡಿ ನಮ್ಮ ಆತಂಕವನ್ನು ದೂರ ಮಾಡಿದರು. ಎಂದು ಕ್ವಾರಂಟೈನ್ ಕೇಂದ್ರ ಅನುಭವವನ್ನು ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.