
ಹಾಸನ: ‘ನೂರು ವರ್ಷಗಳ ಹಿಂದೆ ಇದ್ದ ಪರಿಸ್ಥಿತಿ, ಈಗ ಇರುವ ಪರಿಸ್ಥಿತಿ, ಎರಡನ್ನೂ ಅಕ್ಕಪಕ್ಕ ಇಟ್ಟು ನೋಡುವ ಪ್ರಯತ್ನ ‘ಗೊರೂರು’ ನಾಟಕದ್ದಾಗಿದೆ. ನೂರು ವರ್ಷಗಳ ಹಿಂದೆ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಬರೆದ ಅನುಭವಗಳನ್ನು, ಅವರು ಕಂಡ ಊರಿನ ಕಥೆಯನ್ನು ಹೇಳಿದ್ದೇವೆ’ ಎಂದು ಮೈಸೂರಿನ ನಿರಂತರ ತಂಡದ ಸುಗುಣ ಎಂ.ಎಂ. ಹೇಳಿದರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಭಾನುವಾರ ಉಲಿವಾಲ ಸ್ಕೂಲ್ ಆಫ್ ಡ್ರಾಮಾ ಹಾಗೂ ಏಕತಾರಿ ಸಾಂಸ್ಕೃತಿಕ ಸಂಸ್ಥೆ ಏರ್ಪಡಿಸಿದ್ದ ‘ಗೊರೂರು’ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಕರ್ತೆ ಲೀಲಾವತಿ ಮಾತನಾಡಿ, ಗೊರೂರು ಅವರ ವ್ಯಕ್ತಿತ್ವ ಅತ್ಯಂತ ಪ್ರೇರಣಾದಾಯಕ ಎಂದರು. ಪತ್ರಕರ್ತ ರವಿ ನಾಕಲಗೂಡು, ಹಾಸನದಲ್ಲಿ ರಂಗಾಭಿರುಚಿ ಮೂಡಿಸುತ್ತಿರುವ ಚಲಂ ಹಾಡ್ಲಹಳ್ಳಿ ಹಾಗೂ ಚಿನ್ನೇನಹಳ್ಳಿ ಸ್ವಾಮಿಯವರ ಪ್ರಯತ್ನ ಶ್ಲಾಘನೀಯ ಎಂದರು.
ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಶ್ರೀನಿವಾಸ್, ಗೊರೂರು ರೀತಿಯ ನಾಟಕಗಳು ಹೆಚ್ಚೆಚ್ಚು ಪ್ರಯೋಗಗೊಳ್ಳಬೇಕು ಎಂದರು.
ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ನಮ್ಮ ಜಿಲ್ಲೆಯ ಹೆಮ್ಮೆ. ಅವರ ಕೃತಿಗಳನ್ನು ಮತ್ತು ಅವರ ಚಿಂತನೆಗಳನ್ನು ನಾವು ಸಾಕಷ್ಟು ಅಧ್ಯಯನ ಮಾಡುವ ಅವಶ್ಯಕತೆ ಈಗ ಹೆಚ್ಚಾಗಿದೆ ಎಂದು ಕಂಚಮಾರನಹಳ್ಳಿ ಕಾಂತ ಅಭಿಪ್ರಾಯಪಟ್ಟರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಾಹಿತಿ ಚಿನ್ನೇನಹಳ್ಳಿ ಸ್ವಾಮಿ, ನಾಟಕದ ವಿಚಾರದಲ್ಲಿ ರಂಗಸಂಘಟನೆ ಅತ್ಯಂತ ಮುಖ್ಯ ಪಾತ್ರ ವಹಿಸುತ್ತದೆ. ಮೈಸೂರಿನ ಗೆಳೆಯರು ನಮ್ಮನ್ನು ಸಂಪರ್ಕಿಸಿದಾಗ, ಇದು ನಮ್ಮ ಜವಾಬ್ದಾರಿ ಹಾಗೂ ಕರ್ತವ್ಯ ಎಂದು ಭಾವಿಸಿ ಸಂಘಟನೆ ಮಾಡಿದೆವು ಎಂದರು.
ವೇದಿಕೆಯಲ್ಲಿ ಮಮತಾಶಿವು, ಸಾಹಿತಿ ಸ.ವೆಂ. ಪೂರ್ಣಿಮಾ, ಉಲಿವಾಲ ಮೋಹನ್ ಕುಮಾರ್ ಹಾಜರಿದ್ದರು. ರಂಗಸಂಘಟಕ ಚಲಂ ಹಾಡ್ಲಹಳ್ಳಿ ನಿರೂಪಣೆ ಮಾಡಿದರು.
ತಮ್ಮದೇ ಸಮುದಾಯದವರ ಕತೆಯ ಜೊತೆಗೆ, ಅಂದು ಗೊರೂರಿನಲ್ಲಿ ವಾಸವಾಗಿದ್ದ ಎಲ್ಲ ಸಮುದಾಯದ ಕತೆಯನ್ನು ಹೇಳಿದ್ದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ‘ನಮ್ಮ ಊರಿನ ರಸಿಕರು’ ಪ್ರಬಂಧ ಸಂಕಲನವನ್ನು ಆಧರಿಸಿ ನಟಿಸಿದ ‘ಗೊರೂರು’ ನಾಟಕ ಸಾಕಷ್ಟು ಸಂವಾದಕ್ಕೆ ಕಾರಣವಾಯಿತು. ಸುಮಾರು ಎರಡು ಗಂಟೆಯ ನಾಟಕವನ್ನು ತುಂಬಿದ ಕಲಾಕ್ಷೇತ್ರದಲ್ಲಿ ಪ್ರೇಕ್ಷಕರು ಅಲುಗಾಡದೇ ಕುಳಿತು ನೋಡಿದ್ದು ವಿಶೇಷವಾಗಿತ್ತು.
ನಾಟಕ ವೀಕ್ಷಿಸಿದ ಮಕ್ಕಳು
ಬಹಳಷ್ಟು ಮಕ್ಕಳನ್ನು ಕರೆದು ತಂದಿದ್ದ ಪ್ರೇಕ್ಷಕರು ಮಕ್ಕಳಿಗೆ ಇಂತಹ ನಾಟಕ ನೋಡಲು ಸಾಧ್ಯವಾಗಿಸಿದ್ದಕ್ಕೆ ಆಯೋಜಕರಿಗೆ ಅಭಿನಂದನೆ ಸಲ್ಲಿಸಿದರು. ಗಾಂಧಿವಾದಿ ಸ್ವಾತಂತ್ರ್ಯ ಹೋರಾಟಗಾರ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ನೂರು ವರ್ಷಗಳ ನಂತರವೂ ಪ್ರಸ್ತಾಪ ಮಾಡುವಂತಹ ಕೃತಿಯನ್ನು ರಚಿಸಿದ್ದು ಅದರಲ್ಲೂ ಬ್ರಾಹ್ಮಣರ ಆಷಾಢಭೂತಿತನ ಒಕ್ಕಲಿಗರ ಭಂಡತನ ಆದಿ ಕರ್ನಾಟಕ ಸಮುದಾಯದ ಮುಗ್ಧತೆ ಆ ಕಾಲದ ಅಯ್ಯಂಗಾರಿ ಮಹಿಳೆಯರ ಅಸಹಾಯಕತೆ ನಾಟಕದಲ್ಲಿ ಪ್ರಮುಖವಾಗಿತ್ತು. ಆ ಊರಿನ ದೆವ್ವಗಳು ದೇವರು ಧರ್ಮಗಳ ಸಾಮರಸ್ಯ ಊರಿನ ಪರಿಸರ ಎಲ್ಲವನ್ನು ನಾಟಕ ಶಕ್ತವಾಗಿ ರಂಗದ ಮೇಲೆ ತಂದಿದ್ದು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.