ADVERTISEMENT

ಹಾಸನ: '70 ಸಾವಿರ ಫಲಾನುಭವಿಗಳಿಗೆ ಸೌಲಭ್ಯ'

ಸಮರ್ಪಣಾ ಸಮಾವೇಶ ನಾಳೆ: ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು ಭಾಗಿ– ಲತಾಕುಮಾರಿ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 4:20 IST
Last Updated 5 ಡಿಸೆಂಬರ್ 2025, 4:20 IST
ಹಾಸನದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಮಾಹಿತಿ ನೀಡಿದರು. ಜಿ.ಪಂ. ಸಿಇಒ ಬಿ.ಆರ್. ಪೂರ್ಣಿಮಾ ಇದ್ದರು.
ಹಾಸನದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಮಾಹಿತಿ ನೀಡಿದರು. ಜಿ.ಪಂ. ಸಿಇಒ ಬಿ.ಆರ್. ಪೂರ್ಣಿಮಾ ಇದ್ದರು.   

ಹಾಸನ: ಸರ್ಕಾರದ ವಿವಿಧ ಸೇವೆಗಳ ಸಮರ್ಪಣಾ ಸಮಾವೇಶ ಡಿ.6 ರಂದು ಜರುಗಲಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯ ಡಿ.ಕೆ. ಶಿವಕುಮಾರ್, ವಿವಿಧ ಸಚಿವರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಆವರಣದ ವೇದಿಕೆಯಲ್ಲಿ ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಮಧ್ಯಾಹ್ನ 3 ಗಂಟೆ ಮುಕ್ತಾಯಗೊಳ್ಳಲಿದೆ ಎಂದರು.

ತೋಟಗಾರಿಕೆ, ಕೃಷಿ ಸೇರಿದಂತೆ ವಿವಿಧ ಇಲಾಖೆಗಳ ಸುಮಾರು 15ಕ್ಕೂ ಹೆಚ್ಚು ಮಳಿಗೆಗಳ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಸುಮಾರು 70ಸಾವಿರ ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಅಡಿ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.

ADVERTISEMENT

ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಉತ್ತಮ ಸಹಕಾರ, ಮಾರ್ಗದರ್ಶನ ನೀಡಿದ್ದಾರೆ. ಒಂದೂವರೆ ವರ್ಷದಲ್ಲಿ ಕಂದಾಯ ಇಲಾಖೆ ಕ್ರಾಂತಿಕಾರಿ ಬೆಳವಣಿಗೆ ಮಾಡಿದ್ದು, ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡರ ನೇತೃತ್ವದಲ್ಲಿ ಸೃಜನಾತ್ಮಕವಾಗಿ ಅಧಿಕಾರಿಗಳೆಲ್ಲ ಕೆಲಸ ಮಾಡಿದ್ದು, ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವವರಿಗೆ ಪೋಡಿ ಹಾಗೂ ಇತರೆ ದಾಖಲೆಗಳನ್ನು ಅಧಿಕೃತವಾಗಿ ಒದಗಿಸುವ ಪ್ರಯತ್ನ ಮಾಡಲಾಗಿದೆ ಎಂದರು.

ನಗರದಲ್ಲಿ ನೂತನವಾಗಿ ನಿರ್ಮಿಸಿರುವ ₹ 15 ಕೋಟಿ ವೆಚ್ಚದ ಪ್ರಜಾಸೌಧ (ತಾಲ್ಲೂಕು ಕಚೇರಿ), ಸಕಲೇಶಪುರದ ಮಿನಿ ವಿಧಾನಸೌಧದ ಎರಡು ಹಾಗೂ ಮೂರನೇ ಅಂತಸ್ತಿನ ಕಟ್ಟಡ ಸೇರಿದಂತೆ ಸುಮಾರು ₹ 300 ಕೋಟಿ ವೆಚ್ಚದ ಕಾಮಗಾರಿಗಳ ಉದ್ಘಾಟನೆ ಮಾಡಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಗೆ ಮೂರನೇ ಬಾರಿ ಭೇಟಿ ನೀಡುತ್ತಿದ್ದಾರೆ ಎಂದರು.

ಕಾವೇರಿ ನೀರಾವರಿ ನಿಗಮದಡಿ ಚನ್ನರಾಯಪಟ್ಟಣದ ಸುಮಾರು 18 ಕೆರೆಗೆ ನೀರು ತುಂಬಿಸುವ ಯೋಜನೆ, ಅಲ್ಪಸಂಖ್ಯಾತರ ನಿಗಮದಡಿ ನಾನಾ ಕಟ್ಟಡ ಶಂಕುಸ್ಥಾಪನೆ ಮತ್ತು ಅರಸೀಕೆರೆ ತಾಲೂಕಿನಲ್ಲಿ ಲೋಕೋಪಯೋಗಿ ಇಲಾಖೆಯಡಿ ನಾನಾ ರಸ್ತೆ ಕಾಮಗಾರಿಗಳ ಶಂಕುಸ್ಥಾಪನೆ ಜರುಗಲಿದೆ ಎಂದರು.

ಜಿಲ್ಲೆಯ ಸುಮಾರು 12 ಸಾವಿರ ಮಂದಿಗೆ ಅಧಿಕೃತ ದಾಖಲೆ ಒದಗಿಸಲಾಗುತ್ತಿದ್ದು ಇದಕ್ಕಾಗಿ ಶ್ರಮಿಸಿದ ಗ್ರಾಮ ಲೆಕ್ಕಾಧಿಕಾರಿ, ತಹಶೀಲ್ದಾರ್, ಉಪವಿಭಾಗಾಧಿಕಾರಿ, ಎಡಿಎಲ್‌ಆರ್ ಅವರನ್ನು ಜಿಲ್ಲಾಧಿಕಾರಿ ಅಭಿನಂದಿಸಿದರು.

ಸಮಾವೇಶದಲ್ಲಿ ಜಮೀನಿಗೆ ಸಂಬಂಧಿಸಿದ ಪಹಣಿ, ಟಿಪ್ಪಣಿ ಕಾಪಿ, ಮ್ಯುಟೇಶನ್ ಸೇರಿದಂತೆ ಇತರೆ ದಾಖಲೆಗಳನ್ನು ವಿತರಿಸಲಾಗುವುದು. ಇ-ಪೌತಿ ಖಾತೆ ಆಂದೋಲನ ಯೋಜನೆ ಅಡಿ ಸುಮಾರು 19 ಲಕ್ಷ ಪಹಣಿ ವಿತರಿಸಲಾಗುತ್ತಿದ್ದು, ಶೇ 95 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು.

ಹಲವು ದಶಕಗಳಿಂದ ಜಮೀನಿನ ಹಿಡುವಳಿದಾರರಾಗಿದ್ದರೂ, ಅಧಿಕೃತ ಪಹಣಿ ಇಲ್ಲದೇ ಅನೇಕರು ತೊಂದರೆ ಅನುಭವಿಸುತ್ತಿದ್ದರು. ಇವರ ಕುಟುಂಬದ ವಂಶವೃಕ್ಷ ಹಾಗೂ ಮರಣ ದೃಢೀಕರಣ ಪತ್ರ ಆಧರಿಸಿ ಮನೆಯ ಬಾಗಿಲಿಗೆ ಇ-ಪೌತಿ ಖಾತೆ ಆಂದೋಲನದ ಮೂಲಕ ದಾಖಲೆ ಒದಗಿಸಲಾಗುತ್ತಿದೆ ಎಂದರು.

ಕಂದಾಯ ಗ್ರಾಮಗಳನ್ನು ಗುರುತಿಸಿ ಇಲ್ಲಿ 4–5 ದಶಕಗಳಿಂದ ವಾಸ ಮಾಡುತ್ತಿರುವ ನಿವಾಸಿಗಳಿಗೆ ಅಧಿಕೃತವಾಗಿ 5ಸಾವಿರ ಫಲಾನುಭವಿಗಳಿಗೆ ಸಮಾವೇಶದಲ್ಲಿ ಹಕ್ಕುಪತ್ರ ನೀಡಲಾಗುವುದು. ಒಟ್ಟಾರೆ ಕಂದಾಯ ಇಲಾಖೆಯಿಂದ ಸುಮಾರು 50 ಸಾವಿರ ಕುಟುಂಬಗಳಿಗೆ ನೆರವು ನೀಡಲಾಗುತ್ತಿದೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿಆರ್ ಪೂರ್ಣಿಮಾ ಇದ್ದರು.

₹122 ಕೋಟಿ ವೆಚ್ಚದ 22 ಕಾಮಗಾರಿಗಳ ಉದ್ಘಾಟನೆ ₹166 ಕೋಟಿ ವೆಚ್ಚದ 66 ಕಾಮಗಾರಿಗಳಿಗೆ ಶಂಕುಸ್ಥಾಪನೆ ₹288 ಕೋಟಿ ವೆಚ್ಚದ 87 ಕಾಮಗಾರಿಗಳಿಗೆ ಚಾಲನೆ

ಸಮಾವೇಶಕ್ಕೆ ಸಾರ್ವಜನಿಕರು ಬರುವ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದ್ದು 1154 ಸಾರಿಗೆ ಬಸ್ ಹಾಗೂ 250 ಖಾಸಗಿ ವಾಹನ ನಿಯೋಜಿಸಲಾಗುತ್ತಿದೆ.
ಕೆ.ಎಸ್‌. ಲತಾಕುಮಾರಿ ಜಿಲ್ಲಾಧಿಕಾರಿ

‘ಅಕ್ರಮ ಮಂಜೂರಾತಿ ಆಗಿಲ್ಲ’

‘ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಪ್ರಭಾವಿಗಳಿಗೆ ಮಂಜೂರು ಮಾಡಲಾಗಿದೆ’ ಎಂಬ ಶಾಸಕ ಎಚ್‌.ಡಿ. ರೇವಣ್ಣ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಲತಾಕುಮಾರಿ ‘ರೇವಣ್ಣ ಅವರಿಗೆ ಮಾಹಿತಿ ಕೊರತೆ ಇರಬಹುದು. ನಾನು ಹಾಗೆ ಏನನ್ನೂ ಮಾಡಲ್ಲ’ ಎಂದು ಸ್ಪಷ್ಟಪಡಿಸಿದರು. ‘ಡಿ. 6 ರ ಕಾರ್ಯಕ್ರಮಕ್ಕೆ ಹಣ ವಸೂಲಿ ಮಾಡಲಾಗುತ್ತಿದೆ’ ಎಂಬ ಆರೋಪಕ್ಕೆ ಉತ್ತರಿಸಿದ ಅವರು ‘ರೇವಣ್ಣ ಅವರು ಹಿರಿಯ ಜನಪ್ರತಿನಿಧಿ. ಪರಾಮರ್ಶೆ ಮಾಡಬೇಕು. ಹಾಗೇನಾದರೂ ತೊಂದರೆ ಇದ್ದಿದ್ದರೆ ನನ್ನನ್ನೇ ಕೇಳಬೇಕಿತ್ತು. ಅಧಿಕೃತ ಮಾಹಿತಿ ನೀಡುತ್ತಿದೆ. ಎಲ್ಲವನ್ನೂ ಹಿರಿಯ ಅಧಿಕಾರಿಗಳ ಅನುಮೋದನೆ ಪಡೆದುಕೊಂಡೇ ಮಾಡಲಾಗುತ್ತಿದೆ’ ಎಂದರು. ‘306 ಆರೋಪ ಹೊತ್ತಿರುವ ಮಹಿಳೆಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ’ ಎಂಬ ಆರೋಪಕ್ಕೂ ಸ್ಪಷ್ಟನೆ ನೀಡಿದ ಅವರು ‘ಮಹಿಳೆ ಎಂಬ ಕಾರಣಕ್ಕೆ ಕೊಡಲಾಗಿದೆ. ಬೇರೆ ಏನನ್ನೂ ನಾನು ಪರಿಶೀಲಿಸಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಪ್ರಶಸ್ತಿಗೆ ಆಯ್ಕೆ ಮಾಡುವುದು ನಾನಲ್ಲ ಉಪ ವಿಭಾಗಾಧಿಕಾರಿ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.