ADVERTISEMENT

ಕಾರ್ಮಿಕರ ಆರ್ಥಿಕ ಭದ್ರತೆಗೆ ಸರ್ಕಾರ ಬದ್ಧ: ಶಾಹಿದ್

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 3:02 IST
Last Updated 29 ಅಕ್ಟೋಬರ್ 2025, 3:02 IST

ಹಾಸನ: ‘ರಾಜ್ಯದಲ್ಲಿ 2.50 ಕೋಟಿಗೂ ಹೆಚ್ಚು ಮಂದಿ ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರಿದ್ದು, ಇವರಿಗೆ ಕನಿಷ್ಠ ವೇತನ, ಇತರೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ’ ಎಂದು ಕಾರ್ಮಿಕ ಇಲಾಖೆಯ ಕನಿಷ್ಠ ವೇತನ ಮಂಡಳಿ ಅಧ್ಯಕ್ಷ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ. ಶಾಹಿದ್ ತೆಕ್ಕಿಲ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೆಪಿಸಿಸಿ ನನಗೆ ಮಂಡಳಿಯ ಜವಾಬ್ದಾರಿ ನೀಡಿದ ಬಳಿಕ ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು, ಅಲ್ಲಿನ ಕಾರ್ಮಿಕರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಆಲಿಸಿದ್ದೇನೆ. ಮುಂದಿನ ದಿನಗಳಲ್ಲಿ ಇವರಿಗೆ ಸರ್ಕಾರದಿಂದ ಸೂಕ್ತ ನೆರವು ಹಾಗೂ ಆರ್ಥಿಕ ಪ್ರಗತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕ ವಲಯದಲ್ಲಿ ಗುರುತಿಸಿಕೊಂಡವರಿಗೆ ₹ 15ಸಾವಿರದಿಂದ ₹ 19ಸಾವಿರದವರೆಗೆ ಕನಿಷ್ಠ ವೇತನ ನೀಡಬೇಕು. ಅವರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಾಲ ಸೌಲಭ್ಯ, ಆರ್ಥಿಕ, ಸಾಮಾಜಿಕ ಹಾಗೂ ಆರೋಗ್ಯ ರಕ್ಷಣೆ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ’ ಎಂದರು.

ADVERTISEMENT

‘ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯಶಸ್ವಿಯಾಗಿದ್ದು, ಎಲ್ಲ ವರ್ಗದ ಜನರಿಗೂ ಅನುಕೂಲ ಕಲ್ಪಿಸಿದಂತಾಗಿದೆ. ಶಕ್ತಿ ಯೋಜನೆ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಸರ್ಕಾರ ಕೈಗೊಂಡ ಕ್ರಮ ದೇಶದಲ್ಲಿಯೇ ಮನ್ನಣೆ ಗಳಿಸಿದೆ. ಕೆಎಸ್ಆರ್‌ಟಿಸಿಗೆ ಪ್ರಶಸ್ತಿ ಗರಿಯೂ ಬಂದಿದೆ’ ಎಂದರು.

‘ಪಂಚ ಗ್ಯಾರಂಟಿ ಜಾರಿ ಮಾಡುವ ಸಂದರ್ಭದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದವರು ಟೀಕಿಸಿದರು. ಆದರೆ ಬಿಹಾರ ಸೇರಿದಂತೆ ಇತರೆ ರಾಜ್ಯಗಳಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಇದೇ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ನಮ್ಮ ಜನಪರ ಆಡಳಿತ, ಪಂಚ ಗ್ಯಾರಂಟಿ ಮೂಲಕ ಜನರ ಆರ್ಥಿಕ, ಸಾಮಾಜಿಕ ಪ್ರಗತಿಗೆ ಬೆಂಬಲಿಸಿದ್ದೇವೆ. 2028 ರವರೆಗೂ ಸರ್ಕಾರ ಸುಭದ್ರವಾಗಿ ಮುನ್ನಡೆಯಲಿದೆ. ಸರ್ಕಾರ ಬೀಳಲಿದೆ ಎಂದು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಹಗಲುಗನಸು ಕಾಣುವುದನ್ನು ಬಿಡಬೇಕು’ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ವಕ್ತಾರ ದೇವರಾಜೇಗೌಡ, ಮಂಜುನಾಥ್ ಶರ್ಮಾ, ದಿನೇಶ್, ಶಿವಕುಮಾರ್, ಕೆ.ಪಿ.ರಾಜೇಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.