ADVERTISEMENT

ಹಾಸನ| ಒತ್ತಡ ನಿವಾರಣೆಗೆ ಕ್ರೀಡೆಯಲ್ಲಿ ತೊಡಗಿಕೊಳ್ಳಿ: ಶಾಸಕ ಸ್ವರೂಪ್ ಪ್ರಕಾಶ್

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 5:41 IST
Last Updated 21 ಜನವರಿ 2026, 5:41 IST
ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಆರಂಭವಾದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟವನ್ನು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಉದ್ಘಾಟಿಸಿದರು.
ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಆರಂಭವಾದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟವನ್ನು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಉದ್ಘಾಟಿಸಿದರು.   

ಹಾಸನ: ಸರ್ಕಾರಿ ನೌಕರರು ನಿತ್ಯ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಕೆಲಸದ ಒತ್ತಡ ಕಳೆಯಲು ಕ್ರೀಡಾಕೂಟಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಎಂದು ಶಾಸಕ ಸ್ವರೂಪ್ ಪ್ರಕಾಶ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರ ನೌಕರರ ಸಂಘದ ಜಿಲ್ಲಾ ಘಟಕಗಳ ಆಶ್ರಯದಲ್ಲಿ ಮಂಗಳವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆರಂಭವಾದ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಿ ನೌಕರರು ಕೆಲಸದ ಜೊತೆಗೆ ಆರೋಗ್ಯದ ಕಡೆ ಹಾಗೂ ಕುಟುಂಬದವರಿಗೂ ಹೆಚ್ಚು ಒತ್ತು ನೀಡಬೇಕು. ಕಳೆದ ವರ್ಷ ಕ್ರೀಡಾಕೂಟದಲ್ಲಿ ಭಾಗವಹಿಸಲು 2,500 ನೌಕರರು ನೋಂದಣಿ ಮಾಡಿಕೊಂಡಿದ್ದರು. ಈ ಬಾರಿ 3,500ಕ್ಕೂ ಹೆಚ್ಚು ನೌಕರರು ನೋಂದಣಿ ಮಾಡಿರುವುದು ಸಂತೋಷದ ವಿಷಯ ಎಂದರು.

ADVERTISEMENT

ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಮಾತನಾಡಿ, ನಿರಂತರವಾಗಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವವರು ಆರೋಗ್ಯವಾಗಿ ಇರುತ್ತಾರೆ. ಕ್ರೀಡೆಯಲ್ಲಿ ಎಂದಿಗೂ ವಯಸ್ಸಿನ ಭೇದ ಇರುವುದಿಲ್ಲ. ಎಲ್ಲರೂ ಕ್ರೀಡಾಕೂಟದಲ್ಲಿ ಭಾಗವಹಿಸಿಸುವ ಮೂಲಕ ಒತ್ತಡ ಕಡಿಮೆ ಮಾಡಿಕೊಳ್ಳಬೇಕು ಎಂದರು.

ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸಿ, ಸರ್ಕಾರಿ ಹುದ್ದೆ ಪಡೆಯುತ್ತಾರೆ. ಕೆಲಸವನ್ನು ಒತ್ತಡ ಜೀವನವ ಮಾಡಿಕೊಳ್ಳಬಾರದು. ಅದನ್ನು ಸಂತೋಷದಿಂದ ಮಾಡಬೇಕು. ಆಗ ಜೀವನವೇ ಕೆಲಸವಾಗಿರುತ್ತದೆ. ಸರ್ಕಾರಿ ಕೆಲಸ ಸಮಾಜದಲ್ಲಿ ತಮ್ಮ ಗುರುತಿಸುವಿಕೆಯನ್ನು ತೋರುತ್ತದೆ. ಕೆಲಸಕ್ಕೆ ಗೌರವವನ್ನು ನೀಡಬೇಕು ಎಂದು ಸಲಹೆ ನೀಡಿದರು.

ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಶಾಸಕಾಂಗ ಮತ್ತು ಕಾರ್ಯಾಂಗ ನಾಣ್ಯದ ಎರಡು ಮುಖಗಳು. ಶಾಸನಗಳನ್ನು ರೂಪಿಸುವ ಕೆಲಸ ಶಾಸಕಾಂಗದ್ದು. ಅದನ್ನು ಕಾರ್ಯ ರೂಪಕ್ಕೆ ತರುವುದು ಕಾರ್ಯಾಂಗ ಎಂದರು.

ಶಾಸಕ ಸಿಮೆಂಟ್ ಮಂಜು ಮಾತನಾಡಿ, ಶಾಸಕಾಂಗ ಹಾಗೂ ಕಾರ್ಯಾಂಗ ಒಟ್ಟಾಗಿ ಕೆಲಸ ಮಾಡಿದರೆ ರಾಜ್ಯ ಜನತೆಗೆ ಉತ್ತಮ ಆಡಳಿತ ನೀಡಲು ಸಾಧ್ಯ. ಪ್ರತಿಯೊಬ್ಬರೂ ಮಾಡುವ ಕೆಲಸವನ್ನು ಬಹಳ ಎಚ್ಚರಿಕೆಯಿಂದ, ಆತ್ಮವಿಶ್ವಾಸದಿಂದ, ಪ್ರಾಮಾಣಿಕವಾಗಿ ಮಾಡಬೇಕು ಎಂದು ತಿಳಿಸಿದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಪಿ ಕೃಷ್ಣೇಗೌಡ ಮಾತನಾಡಿ, ಪ್ರತಿಯೊಬ್ಬರೂ ಗೆಲುವು ಮತ್ತು ಸೋಲನ್ನು ಒಂದೇ ಮನಸ್ಸಿನಲ್ಲಿ ಸ್ವೀಕರಿಸಬೇಕು. ನಾವು ಆರೋಗ್ಯವಾಗಿದ್ದರೆ ಒತ್ತಡ ಕಡಿಮೆ ಮಾಡಬಹುದು. ಆಟವನ್ನು ಸ್ಪರ್ಧೆಯಾಗಿ ತೆಗೆದುಕೊಂಡು ರಾಜ್ಯ, ರಾಷ್ಟ್ರಮಟ್ಟಕ್ಕೆ ಭಾಗವಹಿಸಿದರೆ ಹಾಸನ ಜಿಲ್ಲೆಯ ಕೀರ್ತಿ ಹೆಚ್ಚಾಗುತ್ತದೆ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶುಭನ್ವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ಗಂಗಣ್ಣನವರ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಆರ್. ಕೆಂಚೇಗೌಡ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್. ಮಲ್ಲೇಶ್ ಗೌಡ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಆನಂದ್ ಮೂರ್ತಿ, ಸಂಘದ ಪದಾಧಿಕಾರಿಗಳು, ನೌಕರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.