ADVERTISEMENT

ಗ್ಯಾರಂಟಿ: ಹಾಸನ ತಾಲ್ಲೂಕಿಗೆ ₹460 ಕೋಟಿ

ಯೋಜನೆಯ ಪ್ರಯೋಜನ ಪಡೆಯಲು ಬನವಾಸೆ ರಂಗಸ್ವಾಮಿ ಸಲಹೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 6:48 IST
Last Updated 23 ಫೆಬ್ರುವರಿ 2026, 6:48 IST
ಹಾಸನ ತಾಲ್ಲೂಕಿನ ನಿಟ್ಟೂರು ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಬನವಾಸೆ ರಂಗಸ್ವಾಮಿ ಅಧ್ಯಕ್ಷತೆಯಲ್ಲಿ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ ನಡೆಯಿತು.
ಹಾಸನ ತಾಲ್ಲೂಕಿನ ನಿಟ್ಟೂರು ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಬನವಾಸೆ ರಂಗಸ್ವಾಮಿ ಅಧ್ಯಕ್ಷತೆಯಲ್ಲಿ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ ನಡೆಯಿತು.   

ಹಾಸನ: ಸರ್ಕಾರ ನೀಡುತ್ತಿರುವ ಎಲ್ಲ ಗ್ಯಾರಂಟಿ ಯೋಜನೆಗಳ ಸದುಪಯೋಗ ಪಡೆಯುವ ಮೂಲಕ ಸ್ವಾವಲಂಬಿ ಆಗುವಂತೆ ಹಾಸನ ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಬನವಾಸೆ ರಂಗಸ್ವಾಮಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ವತಿಯಿಂದ ತಾಲ್ಲೂಕಿನ ನಿಟ್ಟೂರು ಗ್ರಾಮ ಪಂಚಾಯತಿಯಲ್ಲಿ ಈಚೆಗೆ ಆಯೋಜಿಸಿದ್ದ ಗ್ಯಾರಂಟಿ ಯೋಜನೆ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರವು ನೀಡಿರುವ ಪಂಚ ಗ್ಯಾರಂಟಿ ಯೋಜನೆಗಳು ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಸಹಾಯಕವಾಗುತ್ತಿದೆ ಎಂದರು.

ಶಕ್ತಿ ಯೋಜನೆಯ ಮೂಲಕ ಹಲವಾರು ದೇವಸ್ಥಾನಗಳ ದರ್ಶನ ಮಾಡಲು ಅವಕಾಶ ದೊರೆಯಿತು. ಗೃಹಲಕ್ಷ್ಮೀ ಹಣದಿಂದ ಸಾಕಷ್ಟು ಮಹಿಳೆಯರು ಮಕ್ಕಳ ವಿದ್ಯಾಭ್ಯಾಸ, ಕುಟುಂಬ ನಿರ್ವಹಣೆ ಸೇರಿದಂತೆ ಹಲವು ಜವಾಬ್ದಾರಿ ನಿರ್ವಹಣೆ ಮಾಡುತ್ತಿದ್ದು, ಸ್ವಾವಲಂಬಿ ಆಗುತ್ತಿದ್ದಾರೆ ಎಂದು ಹೇಳಿದರು.

ADVERTISEMENT

ಹಾಸನ ತಾಲ್ಲೂಕಿನಲ್ಲಿ ಒಟ್ಟು 88,620 ಫಲಾನುಭವಿಗಳು ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದು, ಪ್ರತಿ ತಿಂಗಳು ಸುಮಾರು ₹12.72 ಕೋಟಿ ವಿತರಿಸಲಾಗುತ್ತಿದೆ. ಗ್ಯಾರಂಟಿ ಯೋಜನೆ ಆರಂಭವಾದ 26 ತಿಂಗಳಲ್ಲಿ ತಾಲ್ಲೂಕಿಗೆ ಒಟ್ಟು ₹460.82 ಕೋಟಿ ಬಿಡುಗಡೆಯಾಗಿದೆ ಎಂದು ತಿಳಿಸಿದರು.

ಗೃಹಲಕ್ಷ್ಮೀ ಫಲಾನುಭವಿಯೊಬ್ಬರು ಮಾತನಾಡಿ, ನನಗೆ ಬರುತ್ತಿರುವ ₹2ಸಾವಿರ ಅನ್ನು ಸದ್ಬಳಕೆ ಮಾಡಿಕೊಂಡು ಮಕ್ಕಳ ವಿದ್ಯಾಭ್ಯಾಸ, ಕುಟುಂಬ ನಿರ್ವಹಣೆ ಮಾಡಲು ಸಹಕಾರಿಯಾಗಿದೆ ಎಂದರು.

ಹಾಸನ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಗಿರೀಶ್ ಎಚ್.ಡಿ. ಮಾತನಾಡಿದರು.

ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು, ಗ್ಯಾರಂಟಿ ಯೋಜನೆಗಳಾದ ಗೃಹ ಜ್ಯೋತಿ, ಅನ್ನ ಭಾಗ್ಯ, ಗೃಹ ಲಕ್ಷ್ಮೀ, ಯುವನಿಧಿ, ಶಕ್ತಿ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು. ಯಾವುದೇ ಸಮಸ್ಯೆಗಳಿದ್ದರೆ ಕಚೇರಿಗೆ ಭೇಟಿ ನೀಡಿ ಪರಿಹರಿಸಿಕೊಳ್ಳುವಂತೆ ಮನವಿ ಮಾಡಿದರು.

ರಂಗೋಲಿ ಸ್ಪರ್ಧೆ ವಿಜೇತರಿಗೆ ಬನವಾಸೆ ರಂಗಸ್ವಾಮಿ ಬಹುಮಾನ ವಿತರಿಸಿದರು. ಬಸ್‍ನಲ್ಲಿ ಉಚಿತವಾಗಿ ಸಂಚರಿಸುತ್ತಿದ್ದ ಮಹಿಳೆಯರನ್ನು ಮಾತನಾಡಿಸಿ ಅವರ ಅಭಿಪ್ರಾಯಗಳನ್ನು ಸಂಗ್ರಹಿಸಿದರು.

ಗ್ಯಾರಂಟಿ ಸಮಿತಿ ಸದಸ್ಯರು, ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಫಲಾನುಭವಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.