ADVERTISEMENT

ಸೇವೆ ಕಾಯಂಗೊಳಿಸಲು ಅತಿಥಿ ಉಪನ್ಯಾಸಕರ ಆಗ್ರಹ

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2021, 14:13 IST
Last Updated 15 ಸೆಪ್ಟೆಂಬರ್ 2021, 14:13 IST
ಹಾಸನ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅವರಿಗೆ ಅತಿಥಿ ಉಪನ್ಯಾಸಕರು ಮನವಿ ಸಲ್ಲಿಸಿದರು.
ಹಾಸನ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅವರಿಗೆ ಅತಿಥಿ ಉಪನ್ಯಾಸಕರು ಮನವಿ ಸಲ್ಲಿಸಿದರು.   

ಹಾಸನ: ನೂತನ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಧಿಸೂಚನೆ ತಡೆ ಹಿಡಿದು ಸರ್ಕಾರಿ ಪ್ರಥಮ ದರ್ಜೆ
ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನೇ ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ವತಿಯಿಂದಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಸರ್ಕಾರಿ ಪದವಿ ಕಾಲೇಜುಗಳಲ್ಲಿ 15 –20 ವರ್ಷಗಳಿಂದಲೂ ಕನಿಷ್ಠ ವೇತನಕ್ಕೆ ದುಡಿಯುತ್ತಿದ್ದು, ಸರ್ಕಾರ ಯಾವುದೇ ಸವಲತ್ತು ನೀಡುತ್ತಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ 2 ವರ್ಷದಿಂದ ಅತಿಥಿ ಉಪನ್ಯಾಸಕರನ್ನುನೇಮಿಸಿಕೊಳ್ಳದ ಕಾರಣ ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಾಗದೇ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ ಎಂದು ಪ್ರತಿಭಟನಕಾರರು ಅಲವತ್ತುಕೊಂಡರು.

ರಾಜ್ಯದಲ್ಲಿ 14 ಸಾವಿರ ಹಾಗೂ ಜಿಲ್ಲೆಯಲ್ಲಿ 954 ಮಂದಿ ಅತಿಥಿ ಉಪನ್ಯಾಸಕರಿದ್ದಾರೆ. ಉತ್ತಮವಾಗಿ ಬೋಧನೆ ಮಾಡುತ್ತಿದ್ದರೂ ಸರ್ಕಾರದಿಂದ ಸೌಲಭ್ಯಗಳು ಸಿಗುತ್ತಿಲ್ಲ. ಕೂಡಲೇ ಎಲ್ಲ ಅತಿಥಿ ಉಪನ್ಯಾಸಕರನ್ನು ಕಾಯಂ ಮಾಡಬೇಕು. ಈ ಬಗ್ಗೆ ವಿಧಾನಮಂಡಳ ಅಧಿವೇಶನದಲ್ಲಿ ಚರ್ಚೆ ನಡೆಸಿ ಅಧಿಕೃತ ಆದೇಶ ಹೊರಡಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅವರಿಗೆ ಮನವಿ ಸಲ್ಲಿಸಿದರು.

ADVERTISEMENT

ಪ್ರತಿಭಟನೆಯಲ್ಲಿ ರಾಜ್ಯ ಸಮನ್ವಯ ಸಮಿತಿ ಹಾಸನ ಜಿಲ್ಲಾ ಘಟಕದ ಯತೀಶ್ ಕಬ್ಬಾಳ್, ಪ್ರಧಾನ ಕಾರ್ಯದರ್ಶಿ ಎಂ.ಎಸ್. ಆನಂದ ಕುಮಾರ್, ಸಂತೋಷ್, ಮಧು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.